ಮೈಸೂರು, ಚಾಮರಾಜನಗರ ಡಿಸಿ ಕಚೇರಿ, ಆಸ್ಪತ್ರೆಯ ಎಲ್ಲ ದಾಖಲೆ ಜಪ್ತಿ: ಹೈಕೋರ್ಟ್ ಆದೇಶ

ಕರೋನಾ ಸಂದರ್ಭದಲ್ಲಿ ರಾಷ್ಟ್ರದ ನಾನಾ ಸರಕಾರಗಳ ನಿಷ್ಕ್ರಿಯತೆಗಳ ಬಗ್ಗೆ ಚಾಟಿ ಬೀಸುತ್ತಿರುವ ದೇಶದ ನ್ಯಾಯಾಲಯಗಳ ಸಾಲಿಗೆ ರಾಜ್ಯದ ಹೈಕೋರ್ಟ್ ಕೂಡ ಸೇರ್ಪಡೆಗೊಂಡಿದ್ದು, ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತರಾಗಿರುವ ಪ್ರಕರಣದಲ್ಲಿ ರಾಜ್ಯದ ಉಚ್ಚ ನ್ಯಾಯಾಲಯವು ಸಿಡಿಮಿಡಿಗೊಂಡಿದೆ.

ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತರಾಗಿರುವ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯ ಮನಗಂಡಿರುವ ಹೈಕೋರ್ಟ್, ಪ್ರಕರಣದಲ್ಲಿ ಮೈಸೂರು ಜಿಲ್ಲಾಧಿಕಾರಿ, ಚಾಮರಾಜನಗರ ಜಿಲ್ಲಾಧಿಕಾರಿ  ಹಾಗೂ ಚಾಮರಾಜನಗರ  ಜಿಲ್ಲಾಸ್ಪತ್ರೆಯ ಎಲ್ಲ ದಾಖಲೆಗಳನ್ನು ಜಪ್ತಿ ಮಾಡುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದೆ. 

ಜಪ್ತಿ ಮಾಡಲಾದ ದಾಖಲೆಗಳನ್ನು ಸರಕಾರ ನೇಮಿಸಿದ ತನಿಖಾಧಿಕಾರಿ ಪರಿಶೀಲಿಸಬಹುದು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಆಮ್ಲಜನಕ ಪೂರೈಕೆ ಮಾಹಿತಿ ಇರುವ ದಾಖಲೆಗಳನ್ನೂ ಜಪ್ತಿ ಮಾಡಬೇಕೆಂದು ಬುಧವಾರ ನಡೆದ ಪ್ರಮುಖ ಬೆಳವಣಿಗೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನೀಡಿದ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.  

ಆಮ್ಲಜನಕ ಪೂರೈಕೆ ಲಭ್ಯವಾಗದೆ 24ಕ್ಕೂ ಅಧಿಕ ಕರೋನಾ ಸೋಂಕಿತರು ಮೃತಪಟ್ಟಿರುವ ಪ್ರಕರಣದ ಗಂಭೀರತೆ ಮನಗಂಡಿರುವ ಹೈಕೋರ್ಟ್ ವಿಭಾಗೀಯ ಪೀಠ, ರಾಜ್ಯ ಸರಕಾರದ ನಿಷ್ಕ್ರಿಯತೆ ವಿರುದ್ಧ ಚಾಟಿ ಬೀಸಿದೆ. 

ನ್ಯಾಯಾಂಗ ತನಿಖೆಗೆ ಆದೇಶ:

ಚಾಮರಾಜ ನಗರದಲ್ಲಿ ನಡೆದ ಆಮ್ಲಜನಕ ಪೂರೈಕೆ ವೈಫಲ್ಯದಿಂದಾದ ದುರಂತದ ಕುರಿತು ನ್ಯಾಯಾಂಗ ತನಿಖೆಗೆ ರಾಜ್ಯ ಸರಕಾರ ಬುಧವಾರ ಆದೇಶ ನೀಡಿದ್ದು, ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲರ ಮುಂದಾಳತ್ವದಲ್ಲಿ ತನಿಖೆ ನಡೆಯಲಿದೆ. ಹಾಗೂ ಅವರಿಗೆ ಒಂದು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. ಏಕಸದಸ್ಯ ತನಿಖಾ ಆಯೋಗವು ಕಾರ್ಯ ನಿರ್ವಹಿಸಲಿದೆ. 

ಇದಕ್ಕೂ ಮುನ್ನ ಕೋವಿಡ್ 19 ಸೋಂಕು ನಿರ್ವಹಣೆ ಮತ್ತು ಚಿಕಿತ್ಸೆ ಕುರಿತ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳ ಬಗ್ಗೆ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ವಿಚಾರಣೆ ನಡೆಸಿದರು. ಜತೆಗೆ, ಚಾಮರಾಜನಗರದ ಸರಕಾರಿ ಆಸ್ಪತ್ರೆಯಲ್ಲಿ 24ಕ್ಕೂ ಅಧಿಕ ಕರೋನಾ ಸೋಂಕಿತರು ಮೃತಪಟ್ಟಿರುವ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವ ಕುರಿತು ತನ್ನ ನಿಲುವು ಸ್ಪಷ್ಟಪಡಿಸಲು ರಾಜ್ಯ ಸರಕಾರಕ್ಕೆ ಸೂಚಿಸಿದ್ದರು. 

ಪ್ರಕರಣದ ನ್ಯಾಯಾಂಗ ತನಿಖೆಗೆ ರಾಜ್ಯ ಸರಕಾರ ಸಿದ್ಧವಿದೆ. ನಿವೃತ್ತ ನ್ಯಾಯಮೂರ್ತಿಯೊಬ್ಬರ ಹೆಸರು ಅಂತಿಮಗೊಂಡಿದೆ ಎಂದು ಅಡ್ವೊಕೇಟ್ ಜನರಲ್ ಅವರು ಹೈಕೋರ್ಟ್ ಗೆ ಮಾಹಿತಿ ನೀಡಿದಾಗ, ನ್ಯಾಯಾಂಗ ತನಿಖೆ ಬಗ್ಗೆ ಸರಕಾರದ ನಿಲುವು ತಿಳಿಸುವುದಕ್ಕಷ್ಟೇ ಸೂಚಿಸಿದ್ದೆವು. ನಿವೃತ್ತ ನ್ಯಾಯಾಧೀಶರ ನೇಮಕ ಮಾಡುವುದು ಸರಕಾರವಲ್ಲ, ಆ ಹೊಣೆಯನ್ನು ಹೈಕೋರ್ಟ್ ಗೆ ಬಿಡಿ ಎಂದು ಮುಖ್ಯ ನ್ಯಾಯಾಧೀಶರು ಪ್ರತಿಕ್ರಿಯಿಸಿದ್ದರು. ಮುಂದಿನ ತೀರ್ಮಾನ ಹೈಕೋರ್ಟ್ ವಿವೇಚನೆಗೆ ಸೇರಿದ್ದು ಎಂದು ಅಡ್ವೊಕೇಟ್ ಜನರಲ್ ಉತ್ತರಿಸಿದ್ದರು.

ದುರಂತ ಘಟನೆಗೆ ಕೋರ್ಟ್ ಕಳವಳ:

ಮೇ 2ರಂದು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಮ್ಲಜನಕ ಪೂರೈಕೆ ಸ್ಥಗಿತದಿಂದಾದ 24 ಮಂದಿ ಮೃತರಾದ ಬಗ್ಗೆ ಮಾಧ್ಯಮಗಳಲ್ಲಿನ ವರದಿಯನ್ನು ಪ್ರಸ್ತಾಪಿಸಿದ ಪೀಠ ದುರಂತ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿತು.

ಈ ಸಂಬಂಧ ವಿಚಾರಣೆ ವೇಳೆ ಉಪಸ್ಥಿತರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರಿಗೆ ಪ್ರಶ್ನಿಸಿದ ಪೀಠ, ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎಷ್ಟು ಮತ್ತು ಈ ದುರಂತಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿತು. ಆಗ ಉತ್ತರಿಸಿದ ಅಡ್ವೊಕೇಟ್ ಜನರಲ್ , ರೋಗಿಗಳು ಮೃತರಾಗಿದ್ದು ನಿಜ. ಆದರೆ ಅದಕ್ಕೆ ಆಮ್ಲಜನಕ ಪೂರೈಕೆ ಕೊರತೆಯೇ ಕಾರಣವೆಂದು ಖಚಿತಪಟ್ಟಿಲ್ಲ. ಈ ದುರಂತದ ಕಾರಣವನ್ನು ಕಂಡುಹಿಡಿಯಲು ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಬುಧವಾರ ಸಂಜೆಯೊಳಗೆ ವರದಿ ಸಿಗಲಿದೆ. ಘಟನೆಗೆ ಕಾರಣರಾದವರೂ ಯಾರೇ ಇರಲಿ, ಸರಕಾರ ಮುಲಾಜಿಲ್ಲದೆ ಕ್ರಮ ಜರುಗಿಸಲಿದೆ ಎಂದು ಹೇಳಿದರು.

ಎಜಿ ವಾದ ಆಲಿಸಿದ ಬಳಿಕ, ಸರಕಾರವು ಆಮ್ಲಜನಕ ಪೂರೈಕೆಗೆ ಕೊರತೆಯಾಗದಂತೆ ಅಕ್ಕಪಕ್ಕದ ಜಿಲ್ಲೆಗಳ ನಡುವೆ ಸಮನ್ವಯ ಸಾಧಿಸಬೇಕು. ಆಮ್ಲಜನಕ ಪೂರೈಕೆ ಇಲ್ಲದೆ ರೋಗಿಗಳು ಮೃತರಾಗಿರುವುದು ಗಂಭೀರ ವಿಚಾರವಾಗಿದ್ದು, ಅದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವುದೇ ಸೂಕ್ತ. ಈ ಬಗ್ಗೆ ಸರಕಾರ ತನ್ನ ನಿಲವು ತಿಳಿಸುವುದಲ್ಲದೆ ಘಟನೆಯ ತನಿಖಾ ವರದಿಯನ್ನೂ ಸಲ್ಲಿಸಬೇಕೆಂದು ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ಮುಂದೂಡಿತು. 

ಮುಂದುವರಿದ ಮರಣದ ಸರಣಿ:

ಆಮ್ಲಜನಕದ ಕೊರತೆಯಿಂದ ಚಾಮರಾಜನಗರದಲ್ಲಿ ನಡೆದ ಸರಣಿ ಸಾವಿನ ಬಳಿಕ ರಾಜ್ಯದ ಉಳಿದ ಕೆಲವು ಜಿಲ್ಲೆಗಳಲ್ಲೂ ಅದೇ ಕಾರಣಕ್ಕೆ ನಿನ್ನೆ 14 ರೋಗಿಗಳು ಮೃತಪಟ್ಟಿದ್ದಾರೆ. ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿಗಳಲ್ಲೂ ಆಮ್ಲಜನಕದ ಕೊರತೆ ಕಾಡುತ್ತಿದೆ. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಐವರು ಕೋವಿಡ್ ರೋಗಿಗಳು ಆಮ್ಲಜನಕ ಪೂರೈಕೆ ಇಲ್ಲದೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಇತ್ತ ಕಲಬುರಗಿಯ ಅಫ್ಜಲ್ ಪುರ ತಾಲೂಕು ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಇಲ್ಲದೆ ನಾಲ್ಕು ಮಂದಿ ಕೋವಿಡ್  ರೋಗಿಗಳು ಮೃತರಾಗಿದ್ದಾರೆ. ಅಷ್ಟಾದರೂ ಆಯಾ ಜಿಲ್ಲೆ, ತಾಲೂಕುಗಳ ಅಧಿಕಾರಿಗಳು ಮಾತ್ರ ರೋಗಿಗಳ ಸಾವು ಆಮ್ಲಜನಕ ಪೂರೈಕೆ ಕೊರತೆಯಿಂದ ಸಾವನ್ನಪ್ಪಿಲ್ಲ ಎಂದು ತಿಪ್ಪೆ ಸಾರಿಸುತ್ತಿದ್ದಾರೆ.

ಹತ್ಯಾಕಾಂಡಕ್ಕಿಂತ ಕಡಿಮೆಯಲ್ಲ:

ಅಲಹಾಬಾದ್ ಹೈಕೋರ್ಟ್ ಕೂಡ ಕೋವಿಡ್ ರೋಗಿಗಳು ಆಮ್ಲಜನಕ ಪೂರೈಕೆ ಕೊರತೆಯಿಂದ ಸಾವನ್ನಪ್ಪುತ್ತಿರುವ ಬಗ್ಗೆ ಬುಧವಾರ ಕಳವಳ ವ್ಯಕ್ತಪಡಿಸಿದ್ದು, ಆಸ್ಪತ್ರೆಗಳಿಗೆ ಸಮರ್ಪಕ ಆಮ್ಲಜನಕ ಪೂರೈಕೆ ಸಾಧ್ಯವಾಗದ ಕಾರಣಕ್ಕೆ ಉಂಟಾದ ಕರೋನಾ ರೋಗಿಗಳ ಸಾವು ಹತ್ಯಾಕಾಂಡಕ್ಕಿಂತ ಕಡಿಮೆಯಲ್ಲ ಎಂದು ಅಭಿಪ್ರಾಯಪಟ್ಟಿದೆ.

ಗುಜರಾತ್ ಸರಕಾರದ ವಿರುದ್ಧ ಚಾಟಿ ಬೀಸಿರುವ ಅಲಹಾಬಾದ್ ಹೈಕೋರ್ಟ್, ಆಸ್ಪತ್ರೆಗಳಿಗೆ ಸಮರ್ಪಕ ಆಮ್ಲಜನಕ ಪೂರೈಕೆ ಸಾಧ್ಯವಾಗದೆ ಸಾಧ್ಯವಾದ್ದರಿಂದ ಕೋವಿಡ್ ರೋಗಿಗಳು ಮರಣವನ್ನಪ್ಪುತ್ತಿರುವ ಘಟನೆಗಳನ್ನು ನೋಡಲು ನೋವಾಗುತ್ತಿದೆ. ಇದು ಖಂಡಿತ ಅಪರಾಧ ಕೃತ್ಯ. ವೈದ್ಯಕೀಯ ದ್ರವ ಆಮ್ಲಜನಕ ಖರೀದಿಸಬೇಕಾದ  ಹಾಗೂ ಆಮ್ಲಜನಕ ಪೂರೈಕೆಯನ್ನು ಸಮರ್ಪಕವಾಗಿ ನಿಭಾಯಿಸುವ ಹೊಣೆ ಹೊತ್ತಿರುವ ಅಧಿಕಾರಿಗಳು ನಡೆಸುವ ಹತ್ಯಾಕಾಂಡವಿದು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ವರ್ಮಾ ಮತ್ತು ಅಜಿತ್ ಕುಮಾರ್  ಹೇಳಿದ್ದಾರೆ. 

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...