ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದೆ ಎನ್ನಲಾದ ಸೆಕ್ಸ್ ಸಿ.ಡಿ ಪ್ರಕರಣ ಕುರಿತು ರಾಜ್ಯ ಹೈಕೋರ್ಟ್ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಮತ್ತು ಎಸ್‌ಐಟಿಗೆ ತನಿಖಾ ಪ್ರಗತಿ ವರದಿ ಸಲ್ಲಿಸುವಂತೆ ಕೋರ್ಟ್ ಸೂಚನೆ ನೀಡಿದೆ.
ಸಿ.ಡಿ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಗೆ ವಹಿಸುವಂತೆ ವಕೀಲ ಉಮೇಶ್ ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿದ್ದು, ಎಸ್‌ಐಟಿ ಮತ್ತು ರಾಜ್ಯಸರ್ಕಾರಕ್ಕೆ ತನಿಖಾ ವರದಿಯನ್ನು ಕೋರ್ಟ್‌ಗೆ ಸಲ್ಲಿಸುವಂತೆ ಕೇಳಿದೆ.

ಈ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ಸೋರಿಕೆಯ ವಿಚಾರ ಕುರಿತು ಮತ್ತೊಬ್ಬ ವಕೀಲ ಸಲ್ಲಿಸಿದ್ದ ಅರ್ಜಿಯನ್ನೂ ವಿಚಾರಣೆ ನಡೆಸಿದ ಕೋರ್ಟ್, ವಿನಾಕಾರಣ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಏಪ್ರಿಲ್ 17 ಕ್ಕೆ ವಿಚಾರಣೆ ಮುಂದೂಡುವುದರ ಜೊತೆಗೆ ಎಸ್‌ಐಟಿಗೆ ಮತ್ತೊಂದು ವಿಶೇಷ ಸೂಚನೆ ನೀಡಿದೆ. ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿಯನ್ನು ನೀಡುವಂತೆ ತಿಳಿಸಿದೆ.