ಬಿ ಎಸ್ ಯಡಿಯೂರಪ್ಪ ಅವರ ಪದಚ್ಯುತಿಯ ಬಳಿಕ ಮೇಲ್ನೋಟಕ್ಕೆ ತಣ್ಣಗಾದಂತೆ ಕಂಡಿದ್ದ ರಾಜ್ಯ ಬಿಜೆಪಿಯ ಬಣ ಬೇಗುದಿ ಇದೀಗ, ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯ ವಿಷಯದಲ್ಲಿ ಮತ್ತೆ ಹೆಡೆ ಎತ್ತಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಹುತೇಕ ಎಲ್ಲ ಉಪ ಚುನಾವಣೆಗಳ ಉಸ್ತುವಾರಿಯನ್ನು ಬಿ.ವೈ. ವಿಜಯೇಂದ್ರಗೆ ವಹಿಸಲಾಗಿತ್ತು. ಆದರೆ ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆಯ ವಿಷಯದಲ್ಲಿ ಉಸ್ತುವಾರಿಗಳ ಮೊದಲ ಪಟ್ಟಿಯಲ್ಲಿ ಅವರ ಹೆಸರೇ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ, ಕಳೆದ ಎರಡು ದಿನಗಳಿಂದ ವಿಜಯೇಂದ್ರ ಅಭಿಮಾನಿಗಳು ಪಕ್ಷದ ನಾಯಕರ ನಿರ್ಧಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.
ಕೆ ಆರ್ ಪೇಟೆ, ಶಿರಾ ಉಪಚುನಾವಣೆಗಳ ಉಸ್ತುವಾರಿ ವಹಿಸಿಕೊಂಡು ಪ್ರತಿಪಕ್ಷಗಳ ಭದ್ರಕೋಟೆಗಳಲ್ಲಿ ಬಿಜೆಪಿಯ ಕಮಲ ಅರಳಿಸಿದ್ದ ವಿಜಯೇಂದ್ರ ಅವರು ರಾಜ್ಯದ ಚುನಾವಣಾ ಚಾಣಕ್ಯ ಎಂದೇ ಬಿಜೆಪಿಯಲ್ಲಿ ಬಿಂಬಿತವಾಗಿದ್ದರು. ತಂದೆಯ ಅಧಿಕಾರ ಮತ್ತು ಹಣಬಲದ ಜೊತೆಗೆ ವಿಜಯೇಂದ್ರ ತಂತ್ರಗಾರಿಕೆ ಮತ್ತು ಶ್ರಮ ಆ ಎರಡೂ ಉಪಚುನಾವಣೆಗಳಲ್ಲಿ ಬಿಜೆಪಿಗೆ ಅಗತ್ಯ ಯಶಸ್ಸು ತಂದುಕೊಟ್ಟಿದ್ದವು ಎಂಬುದು ತಳ್ಳಿಹಾಕಲಾಗದ ವಾಸ್ತವ.
ಆದರೆ, ಮಸ್ಕಿ ಉಪ ಚುನಾವಣೆಯಲ್ಲಿ ಮಾತ್ರ ವಿಜಯೇಂದ್ರ ಜಾದೂ ಕೈಕೊಟ್ಟಿತ್ತು. ಮಸ್ಕಿ ಚುನಾವಣೆಯಲ್ಲಿಯೂ ಅಪ್ಪನ ಅಧಿಕಾರ, ಹಣಬಲದ ಜೊತೆಗೆ ಜಾತಿ ಬಲವೂ ಸೇರಿದ್ದರೂ, ವಿಜಯೇಂದ್ರ ತಂತ್ರಗಾರಿಕೆ ಫಲಕೊಟ್ಟಿರಲಿಲ್ಲ.
ಆ ಹಿನ್ನಡೆಯ ಬೆನ್ನಲ್ಲೇ ಕೆಲವೇ ತಿಂಗಳಲ್ಲಿ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಗಾದಿಯಿಂದ ಪದಚ್ಯತರಾಗಿದ್ದರು. ಪ್ರಮುಖವಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಪಕ್ಷದ ಮೇಲೆ ಹೊಂದಿರುವ ಪ್ರಾಬಲ್ಯ ಮತ್ತು ಆ ಕಾರಣಕ್ಕೆ ಅವರು ನಡೆಸುತ್ತಿರುವ ಏಕಪಕ್ಷೀಯ, ಸ್ವಜನಪಕ್ಷಪಾತಿ, ಕುಟುಂಬ ರಾಜಕಾರಣದ ಆಡಳಿತದ ವಿರುದ್ಧ ಸ್ವಪಕ್ಷೀಯರೇ ಸಿಡಿದೆದ್ದು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹಾಕಿ ಬಿಎಸ್ ವೈ ಅವರನ್ನು ಅಧಿಕಾರದಿಂದ ಇಳಿಸಿದ್ದರು.

ಅಧಿಕಾರ ತ್ಯಾಗದ ದಿನ ಬಿ ಎಸ್ ವೈ ಕಣ್ಣೀರಿಟ್ಟಿದ್ದರು. ಬಳಿಕ ರಾಜ್ಯ ಪ್ರವಾಸ ಮಾಡುವ ಅವರ ಆಸೆಗೂ ಹೈಕಮಾಂಡ್ ಅನುಮತಿ ನೋಡಿದೆ ಸತಾಯಿಸಿತ್ತು. ಕಳೆದ ಎರಡು ತಿಂಗಳಿಂದಲೂ ಬಿಎಸ್ ವೈ ಮತ್ತು ಹೈಕಮಾಂಡ್ ನಡುವೆ ಈ ರಾಜ್ಯ ಪ್ರವಾಸದ ಹಗ್ಗಜಗ್ಗಾಟ ಮುಗಿದಿಲ್ಲ. ಜೊತೆಗೆ ಸಿಎಂ ಬೊಮ್ಮಾಯಿ, ಪ್ರಹ್ಲಾದ್ ಜೋಷಿ, ನಳೀನ್ ಕುಮಾರ್ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಸುವುದಾಗಿ ಹೇಳುವ ಮೂಲಕ ಹೈಕಮಾಂಡ್ ಮತ್ತು ರಾಜ್ಯದ ಪ್ರಮುಖ ನಾಯಕರು ಯಡಿಯೂರಪ್ಪ ಮುಕ್ತ ಬಿಜೆಪಿಗೆ ಸಿದ್ಧತೆ ನಡೆಸಿರುವ ಸೂಚನೆ ನೀಡಿದ್ದರು. ಇದೀಗ ಸಿಂದಗಿ ಮತ್ತು ಹಾನಗಲ್ ಉಪ ಚುನಾವಣಾ ಉಸ್ತುವಾರಿ ಸಮಿತಿ ಪಟ್ಟಿಯಿಂದ ವಿಜಯೇಂದ್ರ ಹೊರಗಿಡುವ ಮೂಲಕ ಯಡಿಯೂರಪ್ಪ ಮಾತ್ರವಲ್ಲ, ಬಿಎಸ್ ವೈ ಕುಟುಂಬವನ್ನೇ ದೂರ ಇಡುವ ಲೆಕ್ಕಾಚಾರಗಳು ಚುರುಕಾಗಿರುವ ಸಂದೇಶ ರವಾನೆಯಾಗಿತ್ತು.
ಅಂತಹ ಸಂದೇಶದ ಹಿನ್ನೆಲೆಯಲ್ಲೇ ಉಸ್ತುವಾರಿ ಪಟ್ಟಿ ಹೊರಬೀಳುತ್ತಿದ್ದಂತೆ ಬಿಎಸ್ ವೈ ಮತ್ತು ವಿಜಯೇಂದ್ರ ಬೆಂಬಲಿಗರು ಮತ್ತು ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಅದರಲ್ಲೂ ಬಿಎಸ್ ವೈ ವಿರೋಧಿ ಬಸನಗೌಡ ಪಾಟೀಲ್ ಯತ್ನಾಳ್ ಗೆ ಉಸ್ತುವಾರಿ ನೀಡಿ, ವಿಜಯೇಂದ್ರ ಅವರನ್ನು ಪರಿಗಣಿಸದೇ ಇರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಮುಖ್ಯವಾಗಿ ಈ ಷಢ್ಯಂತ್ರದ ಹಿಂದೆ ಬಿ ಎಸ್ ವೈ ವಿರೋಧಿ ಪ್ರಭಾವಿ ನಾಯಕ ಬಿ ಎಲ್ ಸಂತೋಷ್ ಕೈವಾಡವಿದೆ. ಪಕ್ಷದ ರಾಷ್ಟ್ರೀಯ ಹೈಕಮಾಂಡಿನ ಭಾಗವಾಗಿ ಸಂತೋಷ್ ಕರ್ನಾಟಕದಲ್ಲಿ ಯಡಿಯೂರಪ್ಪ ಮುಕ್ತ ಬಿಜೆಪಿ ಕಟ್ಟಲು ಒಂದೊಂದೇ ಹೆಜ್ಜೆ ಇಡುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಆಗಿ ನೆಮ್ಮದಿಯಿಂದ ಅಧಿಕಾರ ನಡೆಸಲು ಬಿಡದೆ ನಿರಂತರ ಬಂಡಾಯ ಭಿನ್ನಮತಕ್ಕೆ ನೀರೆರೆದ ಆವರು, ಅಧಿಕಾರದಿಂದ ಇಳಿದ ಬಳಿಕ ಕೂಡ ಬಿಎಸ್ ವೈ ಮತ್ತು ಕುಟುಂಬವನ್ನು ಮೂಲೆಗುಂಪು ಮಾಡವ ಪ್ರಯತ್ನದಲ್ಲಿದ್ದಾರೆ. ಅದರ ,ಭಾಗವಾಗಿಯೆ ಸ್ವತಃ ತಮ್ಮ ಕ್ಷೇತ್ರದಲ್ಲಿ ತಾವು ಗೆಲ್ಲಲಾಗದವರನ್ನು ಉಪ ಚುನಾವಣೆ ಉಸ್ತುವಾರಿಗೆ ಹಾಕಿ, ಸರಣಿ ಉಪ ಚುನಾವಣೆ ಗೆಲುವಿನ ಸರದಾರ ವಿಜಯೇಂದ್ರ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.
ಆದರೆ ಮುಂದಿನ ವಿಧಾನಸಭಾ ಚುನಾವಣೆ ಬರಲಿ, ನಿಮಗೆ ಪಾಠ ಕಲಿಸುತ್ತೇವೆ ಎಂದು ವಿಜಯೇಂದ್ರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ ಹೈಕಮಾಂಡ್ ವಿರುದ್ಧ ಸಿಡಿದೆದ್ದ ಹಿನ್ನೆಲೆಯಲ್ಲಿ ಒಂದೇ ದಿನದಲ್ಲಿ ಉಸ್ತವಾರಿ ಪಟ್ಟಿಗೆ ವಿಜಯೇಂದ್ರ ಹೆಸರು ಸೇರಿಸಿ ತಿದ್ದುಪಡಿ ಮಾಡಲಾಗಿದೆ. ಹಾನಗಲ್ ಕ್ಷೇತ್ರದ ಉಸ್ತುವಾರಿಗೆ ನೇಮಕವಾಗಿರುವ 12 ಮಂದಿ ನಾಯಕರೊಂದಿಗೆ 13ನೆಯವರಾಗಿ ಈಗ ವಿಜಯೇಂದ್ರಗೆ ಅವಕಾಶ ಕಲ್ಪಿಸಲಾಗಿದೆ.

ಏನೇ ತೇಪ ಹಚ್ಚಿದರೂ ಬಿಜೆಪಿಯಲ್ಲಿ ಯಡಿಯೂರ ಮತ್ತು ಅವರ ಬಣದ ಪ್ರಾಬಲ್ಯ ತಗ್ಗುತ್ತಿದೆ ಮತ್ತು ಅವರ ವಿರೋಧಿ ಬಿ ಎಲ್ ಸಂತೋಷ್ ಬಣದ ಪ್ರಾಬಲ್ಯ ಹೆಚ್ಚುತ್ತಿದೆ ಎಂಬುದನ್ನು ಈ ಉಸ್ತುವಾರಿ ನೇಮಕ ವಿವಾದ ಮತ್ತೊಮ್ಮೆ ದೃಢಪಡಿಸಿದೆ.
ಈ ನಡುವೆ, ತಮ್ಮ ಸಿಎಂ ಅಧಿಕಾರ, ಮುಂದಿನ ಚುನಾವಣೆಯ ನೇತೃತ್ವ, ರಾಜ್ಯ ಪ್ರವಾಸದ ಯೋಜನೆ, ಮತ್ತು ಈಗ ಉಪ ಚುನಾವಣೆ ವಿಷಯದಲ್ಲಿ ಪುತ್ರನಿಗೆ ಅವಮಾನ ಸೇರಿದಂತೆ ಮತ್ತೆ ಮತ್ತೆ ಮುಜುಗರ, ಅವಮಾನ ಅನುಭವಿಸುತ್ತಿರುವ ಬಿಎಸ್ ವೈ, ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳು ಮತ್ತಿತರ ಕಾರಣಕ್ಕಾಗಿ ಹೈಕಮಾಂಡ್ ತಮ್ಮ ವಿರುದ್ಧ ನಡೆಸುತ್ತಿರುವ ಮೂಲೆಗುಂಪು ಕಾರ್ಯಾಚರಣೆಯನ್ನು ಸಹಿಸಿಕೊಂಡಿದ್ದಾರೆ. ಅದರರ್ಥ ಮುಂದಿನ ವಿಧಾನಸಭೆ ಚುನಾವಣೆಯವರೆಗೂ ಇದೇ ಅಸಹಾಯಕತೆ ಮುಂದುವರಿಯುತ್ತೆ ಎಂದೇನಲ್ಲ. ಈಗಾಗಲೇ ಕೆಜೆಪಿ ಮರು ಸ್ಥಾಪನೆಯ ಪ್ರಯತ್ನಗಳು ತೆರೆಮರೆಯಲ್ಲಿ ಚುರುಕುಗೊಂಡಿವೆ. ಬಹುಶಃ ಉಪ ಚುನಾವಣೆಯ ಬಳಿಕ ಯಡಿಯೂರಪ್ಪ ಮುಂದಿನ ನಡೆ ಜಗಜ್ಜಾಹೀರಾಗಬಹುದು ಎಂಬ ಮಾತು ಬಿಎಸ್ ವೈ ವಲಯದಲ್ಲೇ ಕೇಳಿಬರ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಬಿ ಎಸ್ ವೈ ನಡೆಯ ಕುರಿತು ಬಹುತೇಕ ಇನ್ನೊಂದು ತಿಂಗಳಲ್ಲಿ ಸ್ಪಷ್ಟ