ಒಂದರ ಮೇಲೊಂದು ವಿವಾದ ಹುಟ್ಟುಹಾಕಿ ಸರ್ಕಾರವನ್ನು ಮುಜಗರಕ್ಕೀಡುಮಾಡುತ್ತಿರುವ ರೋಹಿತ್ ಚಕ್ರತೀರ್ಥ ನೇತೃತ್ವದ ಕನ್ನಡ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಮಾತುಗಳು, ನಿರ್ಧಾರ ವಿರುದ್ದ ಶಾಸಕ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಬೇಸರ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕ ರಾಜ್ಯಸರ್ಕಾರವು ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಪಠ್ಯಪುಸ್ತಕಗಳ ಮರು ಪರಿಷ್ಕರಣೆಗಾಗಿ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ತರಾತುರಿಯಲ್ಲಿ ತೆಗೆದುಕೊಂಡಿರುವ ನಿರ್ಣಯಗಳು ರಾಜ್ಯದ ನಾಗರೀಕರ ಪ್ರಜ್ಞೆಯನ್ನು ತೀವ್ರವಾಗಿ ನೋಯಿಸಿದೆ ಎಂದು ಹೇಳಿದ್ದಾರೆ.
ಮುಂದುವರೆದು, ಸಮಕಾಲೀನ ಸಮಾಜದ ಅನೇಕ ಜ್ವಲಂತ ಸಮಸ್ಯೆಗಳ ವಿಷಯದಲ್ಲಿ ಅತ್ಯಂತ ಜವಾಬ್ದಾರಿ ಹಾಗೂ ಸಂವೈಧಾನಿಕ ಪ್ರಜ್ಞೆವುಳ್ಳವರಾಗಿ ಇಡೀ ನಾಡು ಹೆಮ್ಮೆ ಪಡತಕ್ಕಂಥ ನಮ್ಮ ಹೆಮ್ಮೆಯ ಸಾಕ್ಷಿ ಪ್ರಜ್ಞೆಗಳಾದ ದೇವನೂರು ಮಹದೇವ್ ಮತ್ತು ಬರಗೂರು ರಾಮಚಂದ್ರಪ್ಪ ಇವರ ಅಭಿಪ್ರಾಯಗಳನ್ನೂ ಧಿಕ್ಕರಿಸಿ ಅವರ ಬಗ್ಗೆಯೂ ಹಗುರವಾಗಿ ಮಾತನಾಡತಕ್ಕಂಥದ್ದು ಅಕ್ಷಮ್ಯ ಅಪರಾಧ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಈ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಬರಗೂರುರವರು ಪ್ರಜಾಸತ್ತಾತ್ಮಕವಾದ ಕ್ರಮಗಳನ್ನನುಸರಿಸಿ ಪರಿಷ್ಕರಣೆ ಕೆಲಸಕ್ಕೆ ಅವಕಾಶ ಮಾಡಿಕೊಟ್ಟಿದ್ದರು. 6ನೇ ತರಗತಿಯ ಸಮಾಜ ವಿಜ್ಞಾನದ “ಹೊಸ ಧರ್ಮಗಳ ಉದಯ” ಎಂಬ ಪಾಠ ಕುರಿತು ಉಂಟಾದ ಅಭಿಪ್ರಾಯ ಭೇದವನ್ನು ಸರಿಪಡಿಸುವ ಉದ್ದೇಶದಿಂದ ಪ್ರಾರಂಭವಾದ ಪುನರ್‍ಪರಿಷ್ಕರಣೆ ಆಲೋಚನೆ ಇಡೀ ಪುಸ್ತಕವನ್ನೇ ಪರಿಷ್ಕರಣೆ ಮಾಡುವುದರಲ್ಲಿ ಸಮಾಪ್ತಿಗೊಳಿಸಲಾಗಿದೆ.
ಬೌಧ ಧರ್ಮದ ಉದಯ ಜಡ್ಡುಗಟ್ಟಿದ ವೈದಿಕ ಸಂಪ್ರದಾಯಗಳ ವಿರುದ್ಧ ಸಹಜವಾಗಿಯೇ ಜನ್ಮತಾಳಿತು. ವಿಶ್ವದ ಅತಿದೊಡ್ಡ ಮಾನವತಾವಾದಿ ಡಾ: ಬಿ.ಆರ್. ಅಂಬೇಡ್ಕರ್‍ರವರು ಇದರ ಇಡೀ ಇತಿಹಾಸವನ್ನು ತಮ್ಮ Triumph of Brahmanism ಎಂಬ ಪುಸ್ತಕದಲ್ಲಿ ವಿವರಿಸಿದ್ದಾರೆ. ಬರಗೂರು ರಾಮಚಂದ್ರಪ್ಪರವರಂಥ ಒಬ್ಬ ಸಂವೇದನಾಶೀಲ, ಸಂವಿಧಾನಾತ್ಮಕ ಬದ್ಧತೆಯುಳ್ಳ ಮನಸ್ಸಿನ ಮತ್ತು ಧಮನಿತರ ನೋವನ್ನು ಪರಿಣಾಮಕಾರಿಯಾಗಿ ಸಮಾಜಕ್ಕೆ ಪರಿಚಯಿಸುವ ಭೌಧ್ಧಿಕ ಮತ್ತು ನೈತಿಕ ಸಾಮರ್ಥ್ಯ ಇದ್ದವರು. ಇಂಥವರ ಅಧ‍್ಯಕ್ಷತೆಯಲ್ಲಿ ರಚಿತವಾದ ಪಠ್ಯಪುಸ್ತಕಗಳ ಪುನರ್‍ಪರಿಷ್ಕರಣೆ ಮಾಡಬೇಕಾಗಿದ್ದಲ್ಲಿ ಒಂದು ಜವಾಬ್ದಾರಿಯುತ ಸರ್ಕಾರ ತನ್ನ ಕನಿಷ್ಠ ವಿವೇಚನೆಯನ್ನಾದರೂ ತೋರಿಸಬೇಕಾಗಿತ್ತು. ಪುನರ್‍ರಚಿತ ಸಮಿತಿಯಲ್ಲಿ ಇರುವ ಎಲ್ಲ ಸದಸ್ಯರು ಉದ್ದೇಶಪೂರ್ವಕವಾಗಿಯೋ ಅಥವಾ ಆಕಸ್ಮಿಕವಾಗಿಯೋ ಬ್ರಾಹ್ಮಣರೇ ಆಗಿರುತ್ತಾರೆ. ಬುದ್ಧ, ಬಸವ, ಅಂಬೇಡ್ಕರ್‍ರವರ ಆಲೋಚನೆಗಳನ್ನು ವಿರೋಧಿಸುವವರೇ ಆಗಿರುತ್ತಾರೆ.

ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿರುವ ರೋಹಿತ್ ಚಕ್ರತೀರ್ಥರವರ ಶೈಕ್ಷಣಿಕ ಹಿನ್ನೆಲೆಯಾಗಲಿ ಅಥವಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಾಗೂ ಸಾರಸ್ವತ ಲೋಕಗಳಲ್ಲಿ ಇವರ ಸ್ಥಾನಮಾನದ ಬಗ್ಗೆ ಎಲ್ಲವೂ ನಿಗೂಢವಾಗಿದೆ. ಮನುಕುಲದ ಪ್ರವಾದಿ ಶೂದ್ರ ಪ್ರಪಂಚದ ಮೌಢ್ಯಕ್ಕೆ ತನ್ನ ಜ್ಞಾನ ಕಿರಣಗಳನ್ನು ಹರಿಸಿ ಮಲಗಿದ್ದವರನ್ನು ಎಬ್ಬಿಸಿದ ಮಹಾನ್‍ಚೇತನ ಕುವೆಂಪುರವರ ಬಗ್ಗೆಯೂ ಸಹ ಅಗೌರವ ತೋರಿಸುವ ಕುತ್ಸಿತ ಕ್ರಿಮಿಗಳು ವಿರಾಜಮಾನರಾಗುತ್ತಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಬಹುಶ: ಇವರ ಪ್ರಯತ್ನಗಳು ಇತಿಹಾಸವನ್ನು ತಿರುಚಲು ಎಳೆ ಪ್ರಾಯದ ಮಕ್ಕಳೇ ಸೂಕ್ತ ವೇದಿಕೆ ಎಂದು ಮುಂದೆ ಹೊರಟಂತೆ ಕಾಣುತ್ತದೆ. ಗಾಂಧಿಯನ್ನು ಬಲಿತೆಗೆದುಕೊಂಡ ದೇಶ ಭಕ್ತರಿಗೆ ಸಹಜವಾಗಿಯೇ ಕೇಶವ್ ಬಲಿರಾಂ ಹೆಡ್ಗೆವಾರ್‍ರವರು ಸ್ವಾತಂತ್ರ್ಯ ಹೋರಾಟಗಾರರಾಗಿ ಕಾಣುವುದು ಸಮಂಜಸವಾಗಿಯೇ ಇದೆ. ಆದ್ದರಿಂದಲೇ ತಾವು ಉಂಡ ನಂಜು ಮುಂದಿನ ಜನಾಂಗಕ್ಕೂ ಉಣಿಸಬೇಕೆಂದು ಪ್ರಾಥಮಿಕ ಹಂತದ ಪಠ್ಯಪುಸ್ತಕದಲ್ಲಿಯೇ ವಿಷಪ್ರಾಸನ ಮಾಡಲು ಹೊರಟಿದ್ದಾರೆ. ಚಕ್ರತೀರ್ಥರಿಗೆ, ಚಕ್ರವರ್ತಿಗಳಿಗೆ ಪ್ರತಾಪಸಿಂಹರುಗಳಿಗೆ ಜಗತ್ತಿನ ಇತಿಹಾಸದ ಅರಿವು ಇದೆಯೋ ಇಲ್ಲವೋ ಗೊತ್ತಿಲ್ಲ.
ಮಾನ್ಯರೆ, ಕಳೆದ 45 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಇಂಥ ಯಾವುದೇ ಸಂದಿಗ್ಧತೆ ಬಂದಾಗ ನಾನು ಯಾವುದೇ ಸ್ಥಾನದಲ್ಲಿದ್ದರೂ ಮುಕ್ತ ಮನಸ್ಸಿನಿಂದ ನಿರ್ಭಯವಾಗಿ ವಿಧಾನಸಭೆಯಲ್ಲಿ ನನ್ನ ನಿಲುವನ್ನು ವ್ಯಕ್ತಪಡಿಸುತ್ತಿದ್ದೆ. ಪ್ರಸ್ತುತ ಸನ್ನಿವೇಶದಲ್ಲಿ ವಿಧಾನಸಭೆಯ ಅಧಿವೇಶನ ಇಲ್ಲದ ಕಾರಣ ಈ ಪತ್ರಿಕಾ ಹೇಳಿಕೆ ನನ್ನ ನಿಲುವನ್ನು ಬಹಿರಂಗಪಡಿಸಲು ಅನಿವಾರ್ಯವಾಗಿದೆ. ಪ್ರಜಾತಂತ್ರದ ಹಿತದೃಷ್ಟಿಯಿಂದ ಸಂವಿಧಾನದ ಆಶಯಗಳನ್ನು ಗೌರವಿಸುವ ದೃಷ್ಟಿಯಿಂದ ಮಾನ್ಯ ಮುಖ್ಯಮಂತ್ರಿಗಳು ಈ ಗೊಂದಲಕ್ಕೆ ಇತಿಶ್ರೀ ಹಾಡಬೇಕೆಂದು ಆಗ್ರಹಪೂರ್ವಕವಾಗಿ ವಿನಂತಿಸುತ್ತೇನೆ.