ಅಕಾಲಿಕ ಮಳೆಯಿಂದಾಗಿ ರಾಜ್ಯದ ರೈತರು, ಕೂಲಿ ಕಾರ್ಮಿಕರು ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿರುವ ಇಂತಹಾ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರು ಜನಸ್ವರಾಜ್ ಯಾತ್ರೆ ಕೈಗೊಂಡಿರುವ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅರ್ಧ ರಾಜ್ಯ ಅಕಾಲಿಕ ಮಳೆಯಿಂದ ತತ್ತರಿಸಿಹೋಗಿದೆ. ಕೈಗೆ ಬಂದ ಬೆಳೆ, ಬಾಯಿಗೆ ಬರದೆ ಗದ್ದೆಯಲ್ಲಿ ಕೊಳೆಯುತ್ತಿದೆ. ರಾಜ್ಯ ಸರ್ಕಾರ ಟೂರಿಂಗ್ ಟಾಕೀಸ್ ರೀತಿ ಜನಸ್ವರಾಜ್ ಎಂಬ ನಾಟಕ ಪ್ರದರ್ಶನ ಮಾಡಿಕೊಂಡು ಹೊರಟಿದೆ. ಮುಖ್ಯಮಂತ್ರಿಗಳಾದಿಯಾಗಿ ಸಚಿವರು, ಶಾಸಕರು ತಕ್ಷಣ ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದ್ದಾರೆ
ಜನಸ್ವರಾಜ್ ಅಲ್ಲ, ಇದು ಜನಬರ್ಬಾದ್ ಯಾತ್ರೆ.
ಮಳೆ-ನೆರೆಗೆ ಸಿಕ್ಕಿ 20ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ, ಹತ್ತು ಸಾವಿರ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಾಶವಾಗಿದೆ, ಮನೆ ಬಿದ್ದು ಜನ ಬೀದಿಪಾಲಾಗಿದ್ದಾರೆ. ಇವರ ನೆರವಿಗೆ ಧಾವಿಸಬೇಕಾದ ರಾಜ್ಯ ಸರ್ಕಾರ ಜನಸ್ವರಾಜ್ ಎಂಬ ನಾಟಕ ಮಾಡುತ್ತಾ ತಿರುಗಾಡುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಹನಿಮೂನ್ ಕಾಲ ಮುಗಿದಿದೆ. ನಿಮ್ಮ ಸಚಿವರ ಈ ನಾಟಕ ಪ್ರದರ್ಶನದ ಯಾತ್ರೆಯನ್ನು ಮೊದಲು ನಿಲ್ಲಿಸಿ. ಅವರನ್ನು ಮಳೆಪೀಡಿತ ಜಿಲ್ಲೆಗಳಿಗೆ ಓಡಿಸಿ. ಕಣ್ಣೀರಿಟ್ಟು ಗೋಳಾಡುತ್ತಿರುವ ಜನರ ಕಷ್ಟಗಳನ್ನು ಆಲಿಸಿ ಪರಿಹಾರ ಕಾರ್ಯ ಕೈಗೊಳ್ಳಲು ಹೇಳಿ. ಸಾವಿರಾರು ಎಕರೆ ಭೂಮಿಯಲ್ಲಿ ಭತ್ತ,ರಾಗಿ,ಜೋಳ, ತರಕಾರಿ, ಬಾಳೆ, ತೆಂಗು ಎಲ್ಲವೂ ನಾಶವಾಗಿದೆ. ರೈತರು ಕಣ್ಣೀರಿನಿಂದ ಕೈತೊಳೆದುಕೊಳ್ಳುತ್ತಿದ್ದಾನೆ.
ಸಚಿವರು ಯಾತ್ರೆಯಲ್ಲಿದ್ದಾರೆ, ಅಧಿಕಾರಿಗಳು ಬೆಚ್ಚನೆ ಮನೆಯಲ್ಲಿದ್ದಾರೆ. ಜನ ಬೀದಿಪಾಲಾಗಿದ್ದಾರೆ. ಇಲ್ಲೊಂದು ಸರ್ಕಾರ ಇದೆಯೇ? ಮೊದಲು ಅಧಿಕಾರಿಗಳ ತಂಡ ಕಟ್ಟಿಕೊಂಡು ಮಳೆಪೀಡಿತ ಪ್ರದೇಶಗಳಿಗೆ ಸಚಿವರು ಹೋಗಿಮಳೆ ನಷ್ಟದ ಅಂದಾಜು ನಡೆಸಿ ತಾತ್ಕಾಲಿಕ ಪರಿಹಾರ ನೀಡಲು ಸೂಚನೆ ನೀಡಿ. ಗಂಜಿ ಕೇಂದ್ರಗಳನ್ನುತೆರೆಯಲು ಹೇಳಿ. ನಷ್ಟದ ಸಮೀಕ್ಷೆ ನಡೆಸಿ ಹೆಚ್ಚಿನ ಪರಿಹಾರ ನೀಡಲು ಕೇಂದ್ರಕ್ಕೆ ಮನವಿ ಮಾಡಿ ಎಂದಿದ್ದಾರೆ.