ಉತ್ತರಾಖಂಡದಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಸುರಿಯುತ್ತಿರುವ ಭೀಕರ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಪ್ರಾಣವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ೧೫ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಈಗಾಗಲೇ ಮುನ್ನೂರಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ. ವಿಶೇಷವಾಗಿ ಕುಮಾವೂಂ ಪ್ರದೇಶದಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದ್ದು, ಭೂಕುಸಿತದಿಂದಾಗಿ ಮನೆಗಳು ಕುಸಿದು ಬಿದ್ದಿವೆ. ಈಗಾಗಲೇ ಮೃತಪಟ್ಟವರ ಸಂಖ್ಯೆ 41 ಕ್ಕೆ ಏರಿಕೆಯಾಗಿದೆ. ಮಣ್ಣಿನಡಿಯಲ್ಲಿ ಹೂತು ಹೋದವರ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.
ಸಾವನ್ನಪ್ಪಿದವರ ಕುಟುಂಬಕ್ಕೆ ಹಾಗೂ ಮನೆಗಳನ್ನು ಕಳೆದು ಕೊಂಡವರಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪರಿಹಾರ ಘೋಷಿಸಿದ್ದಾರೆ. ಪ್ರವಾಹಸಂತ್ರಸ್ಥರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಹಾಗೂ ಮನೆ ಕಳೆದುಕೊಂಡವರಿಗೆ 1.9 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದಾದ ಬಳಿಕ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಪ್ರವಾಹ ತೀವ್ರತೆಯ ಬಗ್ಗೆ ಪುಷ್ಕರ್ ಸಿಂಗ್ ಮಾತುಕತೆ ನಡೆಸಿದ್ದು, ರಾಜ್ಯದಲ್ಲಿ ಮಳೆಯಿಂದ ಉಂಟಾಗಿರುವ ಹಾನಿಯ ಬಗ್ಗೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿಯವರು ಅಗತ್ಯವಿರುವ ಎಲ್ಲಾ ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ.