ಬೆಂಗಳೂರು : ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ವಿಪಕ್ಷ ಬಿಜೆಪಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದೆ. ಆರೋಗ್ಯ ಇಲಾಖೆಯ ಅಧಿಕಾರಿಯನ್ನು ಅಬಕಾರಿ ಇಲಾಖೆಗೆ ಟ್ರಾನ್ಸ್‌ಫರ್ ಮಾಡಿರುವ ಸರ್ಕಾರದ ನಡೆಯನ್ನು ಖಂಡಿಸಿದೆ. ಈ ಕುರಿತು ವರ್ಗಾವಣೆ ಆದೇಶದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬಿಜೆಪಿ ಶಾಸಕ ವಿ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರ ಹಳಿ ತಪ್ಪಿದ ಆಡಳಿತದ ಕ್ಲಾಸಿಕ್ ಉದಾಹರಣೆ. ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಮೈಸೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಡಿಸಿಯಾಗಿ ನಿಯೋಜಿಸುವಂತೆ ಖುದ್ದು ಮುಖ್ಯಮಂತ್ರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ನಿರ್ದೇಶನ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ನೂತನ ನಾಯಕನಿಂದ ಬಾಂಗ್ಲಾದಲ್ಲಿ ಹೊಸ ರಾಜಕೀಯ ಶಕೆ ಆರಂಭ : ತಾರಿಕ್ ರೆಹಮಾನ್‌ಗೆ ಮೋದಿ ಶುಭಹಾರೈಕೆ..
ಇದು ಅಬಕಾರಿ ಹಾಗೂ ಆರೋಗ್ಯ ಇಲಾಖೆಯ ವೃಂದ ನಿಯಮಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಸಿದ್ದರಾಮಯ್ಯನವರೂ “ಇಂದ್ರೀಯ” ವಶವಾಗಿ ಆಡಳಿತದ ಹದ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಇದು ನಿದರ್ಶನವಾಗಿದೆ.
ಅಬಕಾರಿ ಇಲಾಖೆಯಲ್ಲಿ ನಡೆದಿರುವ 6000 ಕೋಟಿ ರೂ.ಗೂ ಅಧಿಕ ಮೊತ್ತದ ಅವ್ಯವಹಾರ ಹಾಗೂ ಕಿಕ್ ಬ್ಯಾಕ್ ದಂಧೆಯ ಹಿಂದೆ ಇಂಥ ಅವೈಜ್ಞಾನಿಕ ಹಾಗೂ ನಿಯಮ ಬಾಹಿರ ವರ್ಗಾವಣೆಯ ಸೂಚನೆಗಳು ಕೆಲಸ ಮಾಡಿರುವ ಸಾಧ್ಯತೆಗಳು ದಟ್ಟವಾಗಿದೆ ಎಂದು ಸ್ಫೋಟಕ ಮಾಹಿತಿ ಹೊರಗೆಡವಿದ್ದಾರೆ.

ಮುಖ್ಯಮಂತ್ರಿಗಳೇ ಆಯಕಟ್ಟಿನ ಇಲಾಖೆಗೆ ಮಾತ್ರ ನೀವು ಈ ರೀತಿ ಎರವಲು ಸೇವೆಯ ಶಿಫಾರಸು ಮಾಡುತ್ತೀರಾ ? ಅಥವಾ ನಿಮ್ಮಿಂದ ಮಾಡಿಸುತ್ತಾರಾ ? ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರತೆಯಿಂದ ಸಾರ್ವಜನಿಕರು ನರಳುತ್ತಿರುವಾಗ ಜಿಲ್ಲಾ ವೈದ್ಯಾಧಿಕಾರಿಯೊಬ್ಬನನ್ನು ಅಬಕಾರಿ ಇಲಾಖೆಗೆ ನಿಯೋಜನೆ ಮಾಡುವಂತೆ ನೀವೇ ಖುದ್ದಾಗಿ ನಿರ್ದೇಶನ ನೀಡುತ್ತೀರೆಂದರೆ ಅದೆಂತ ಒತ್ತಡ ಹಾಗೂ ವ್ಯಾಮೋಹ ನಿಮ್ಮನ್ನು ಕಾಡುತ್ತಿರಬಹುದು ? ಅಥವಾ ಅಧಿಕಾರ ಹಸ್ತಾಂತರದ ಚಿಂತೆ ನಿಮ್ಮನ್ನು ಆವರಿಸಿದೆಯೋ ? ಎಂದು ಸುನೀಲ್ ಕುಮಾರ್ ನೇರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.






