
ಬೆಂಗಳೂರು: ಕಾಂಗ್ರೆಸ್ ಸರಕಾರಕ್ಕೆ ಅನುಕೂಲ ಆಗುವ ರೀತಿಯಲ್ಲಿ ಹೇಳಿಕೆ ನೀಡದಿದ್ದರೆ ನಿಮ್ಮನ್ನು ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಲುಕಿಸುತ್ತೇವೆ ಎಂದು ಎಸ್ಐಟಿ ಅಧಿಕಾರಿಗಳು ನೊಂದ ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಸಂತ್ರಸ್ತ ಮಹಿಳೆ ಒಬ್ಬರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಕೊಟ್ಟ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.ಈ ತನಿಖೆ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. ಸಚಿವ ಕೃಷ್ಣ ಬೈರೇಗೌಡರೇ.. ಈಗ ಏನು ಹೇಳುತ್ತೀರಿ? ಕಂಡ ಕಂಡವರ ಮನೆ ಬಾಗಿಲಿಗೆ ಹೋಗಿ ಬೆದರಿಕೆ ಹಾಕುತ್ತಿದ್ದೀರಿ. ನಿಮ್ಮ ತನಿಖಾ ತಂಡದ ಅಧಿಕಾರಿಗಳು ನೊಂದ ಮಹಿಳೆಯರಿಗೆ ಬೆದರಿಕೆ ಹಾಕುತ್ತಿರುವುದು ಸುಳ್ಳೇ? ಎಲ್ಲೆಲ್ಲಿ ಏನೆಲ್ಲಾ ನಿಮ್ಮ ಅಧಿಕಾರಿಗಳು ಮಾಡುತ್ತಿದ್ದಾರೆ ಎನ್ನುವ ಮಾಹಿತಿ ನನಗೂ ಬರುತ್ತಿದೆ. ನಾವು ಹೇಳಿದ ಹಾಗೆಯೇ ಹೇಳಿಕೆ ಕೊಡದಿದ್ದರೆ ನಿಮ್ಮನ್ನು ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಲುಕಿಸುತ್ತೇವೆ ಎಂದು ನಿಮ್ಮ ಅಧಿಕಾರಿಗಳು ಬೆದರಿಕೆ ಹಾಕುತ್ತಿಲ್ಲವೇ? ನಿಜ ಹೇಳಿ. ಇದೇನಾ ತನಿಖೆ ನಡೆಸುವ ರೀತಿ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ರಕ್ಷಣೆ ಮಾಡಿರುವ ಮಹಿಳೆಯನ್ನು ಎಲ್ಲಿ ಇಟ್ಟಿದ್ದೀರಿ?
ಹಾಸನ ಅಶ್ಲೀಲ ವಿಡಿಯೋಗಳು ಹಾಗೂ ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಬಗ್ಗೆ ಕೃಷ್ಣಭೈರೇಗೌಡರು ಮಾಡಿರುವ ಟೀಕೆಗಳಿಗೆ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ ಅವರು; ಕಿಡ್ನಾಪ್ ಪ್ರಕರಣದಲ್ಲಿ ರಕ್ಷಣೆ ಮಾಡಿರುವ ಆ ಮಹಿಳೆಯನ್ನು ಎಲ್ಲಿ ಇಟ್ಟಿದ್ದೀರಿ ಎಂದು ಪ್ರಶ್ನಿಸಿದರು.ಕಿಡ್ನಾಪ್ ಆಗಿದ್ದಾರೆನ್ನಲಾದ ಮಹಿಳೆಯನ್ನು ರಕ್ಷಣೆ ಮಾಡಿದ್ದೇವೆ ಎಂದು ಹೇಳಿದ್ದೀರಿ. ಎಲ್ಲಿ ರಕ್ಷಣೆ ಮಾಡಿದಿರಿ ಅವರನ್ನು? ಆ ಮಹಿಳೆಯನ್ನು ಈಗ ಎಲ್ಲಿ ಇರಿಸಿದ್ದೀರಿ? ಇದುವರೆಗೂ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆ ಕೊಡಿಸಲಿಲ್ಲ ಯಾಕೆ? ಎಂದು ಅವರು ಸರಣಿ ಪ್ರಶ್ನೆಗಳನ್ನು ಕೇಳಿದರು. ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಕರೆದು ಕೊಂಡು ಬಂದಿದ್ದೀರಿ. ಜಾಮೀನು ಪಡೆಯಲು ಹೋದ ವಕೀಲರನ್ನು ಕರೆದುಕೊಂಡು ಬಂದಿದ್ದೀರಾ.. ಕಿಡ್ನಾಪ್ ಗೆ ಒಳಪಟ್ಟರೆನ್ನಲಾದ ಹೆಣ್ಣುಮಗಳನ್ನೂ ಕರೆದುಕೊಂಡು ಬಂದಿದ್ದೀರಿ. ಅವರಿಂದ ಏನು ಹೇಳಿಕೆ ಪಡೆದಿದ್ದೀರಿ? ಎಲ್ಲಿಂದ ಆಕೆಯನ್ನು ಕರೆದುಕೊಂಡು ಬಂದಿದ್ದೀರಿ? ಎಂದು ನೇರ ಪ್ರಶ್ನೆಗಳನ್ನು ಕೇಳಿದರು ಅವರು.

ಒಕ್ಕಲಿಗ ಸಚಿವರು, ಸಂಸದರು, ಶಾಸಕರು ನನ್ನ ವಿರುದ್ಧ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಅವರ ಉದ್ದೇಶ ಇರುವುದು ನೊಂದವರಿಗೆ ನ್ಯಾಯ ಕೊಡಿಸುವುದಲ್ಲ. ನನ್ನ ವಿರುದ್ಧ ದಾಳಿ ಮಾಡುವುದಷ್ಟೇ ಅವರ ಗುರಿ. ಅವರು ಪೆನ್ ಡ್ರೈವ್ ಗಳನ್ನು ಹಂಚಿಕೆ ಮಾಡಿದ ತಮ್ಮ ಪಕ್ಷದ, ಸರಕಾರದ ʼಖಳನಾಯಕʼನನ್ನು ರಕ್ಷಣೆ ಮಾಡಿಕೊಳ್ಳಲು ಜಾತಿ ಅಸ್ತ್ರ ಬಳಕೆ ಮಾಡಿದ್ದಾರೆ. ನಾನು ಅಂತಹ ಕೆಲಸ ಮಾಡಲ್ಲ. ಇಲ್ಲಿ ನಾನು ಜಾತಿಯನ್ನು ಎಳೆದು ತರುವುದಿಲ್ಲ. ಏಕಾಂಗಿಯಾಗಿಯೇ ಇದೆಲ್ಲವನ್ನೂ ಎದುರಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.