ಅಕ್ರಮ ಗಣಿಗಾರಿಕೆಯಿಂದ ಕೆಆರ್‌ಎಸ್ ಜಲಾಶಯಕ್ಕೆ ತೊಂದರೆಯಾಗುತ್ತಿದೆ ಎಂಬ ಕೂಗು ಇತ್ತೀಚೆಗೆ ಕೇಳಿ ಬರುತ್ತಿರೋದಲ್ಲ, ಬದಲಿಗೆ ಎಷ್ಟೋ ವರ್ಷಗಳದ್ದು. ಮಂಡ್ಯದ ರೈತ ಸಂಘವೂ ಎಷ್ಟೋ ವರ್ಷಗಳಿಂದ ಅಕ್ರಮ ಗಣಿಗಾರಿಕೆ ನಿಲ್ಲಿಸಿ, ಇದರಿಂದ ಕೆಆರ್‌ಎಸ್‌ಗೆ ಸಮಸ್ಯೆಯಾಗಲಿದೆ ಎಂದು ಹೋರಾಟ ಮಾಡಿದರೂ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿರಲಿಲ್ಲ. ಆದರೀಗ, ಜನಪ್ರಿಯ ನಟಿ ಮತ್ತು ಸಂಸದೆ ಸುಮಲತಾ ಅಂಬರೀಶ್ ಕೆಆರ್‌ಎಸ್ ಡ್ಯಾಂ ಬಗ್ಗೆ ಮಾತಾಡೋಕೆ ಶುರು ಮಾಡಿದ ಕೂಡಲೇ ಇದು ರಾಷ್ಟ್ರೀಯ ಸುದ್ದಿ. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಈ ವಿಚಾರಕ್ಕೆ ತಲೆ ಹಾಕಿದ ಮೇಲೆ ಇದರದ್ದೇ ಇಡೀ ದಿನ ಚರ್ಚೆ.

ಮಂಡ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮಾಲೀಕರಲ್ಲಿ ಬಹುತೇಕರು ಜೆಡಿಎಸ್ ಬೆಂಬಲಿಗರು. ಹೀಗಾಗಿ ಸುಮಲತಾ ಅಕ್ರಮ ಗಣಿಗಾರಿಕೆ ವಿರುದ್ಧ ಸೆಟೆದು ನಿಂತರಾದರೂ ಇದು ಕೇವಲ ರಾಜಕೀಯಕ್ಕಾಗಿಯೇ ಅನ್ನೋದು ಮಾತ್ರ ವಾಸ್ತವ. ಅಂಬರೀಶ್ ಪತ್ನಿ ಎಂಟ್ರಿ ಕೊಟ್ಟಿದೇ ತಡ ಬೇಬಿ ಬೆಟ್ಟದಲ್ಲಿ ಸುಮಾರು 70ಕ್ಕೂ ಹೆಚ್ಚು ಗಣಿಗಾರಿಕೆಗಳು ನಿಂತು ಹೋದವು. ಇದರಿಂದ ಸುಮಲತಾ ವಿರುದ್ಧ ರೊಚ್ಚಿಗೆದ್ದ ಜೆಡಿಎಸ್ ಪಕ್ಷದ ನಾಯಕರು ಸರ್ಕಾರದ ಮೇಲೆ ಕುಮಾರಸ್ವಾಮಿ ಮೂಲಕ ಒತ್ತಡ ಹೇರಲು ಪ್ರಾರಂಭಿಸಿದರು.
ರಾಜ್ಯ ಸರ್ಕಾರವೇ ಕೆಆರ್‌ಎಸ್ ಬಿರುಕು ಬಿಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದರೂ ಸುಮಲತಾ ಮಾತ್ರ ಅದೇ ವಿಚಾರ ಪದೇಪದೇ ಪ್ರಸ್ತಾಪಿಸುತ್ತಿದ್ದಾರೆ. ಖುದ್ದು ಮಂಡ್ಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬೇಬಿ ಬೆಟ್ಟ ಮತ್ತು ಕೆಆರ್‌ಎಸ್ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ರಾಜಕೀಯ ವಿದ್ಯಮಾನಗಳು ನೋಡಿದರೆ ಬಿರುಕು ಬಿಟ್ಟಿರುವುದು ಸುಮಲತಾ ಮತ್ತು ಜೆಡಿಎಸ್ ನಾಯಕರು ನಡುವೆಯೇ ಹೊರತು ಕೆಆರ್‌ಎಸ್ ಡ್ಯಾಂ ಅಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.

ಕೆಆರ್‌ಎಸ್ ಡ್ಯಾಂ ವಿಚಾರದಲ್ಲಿ ಎಚ್.ಡಿ ಕುಮಾರಸ್ವಾಮಿ ಎಂಟ್ರಿ ಕೊಟ್ಟಿರುವ ಉದ್ದೇಶ ಕೇವಲ ಜೆಡಿಎಸ್ ಬೆಂಬಲಿಗರ ಮೇಲಿನ ಕಾಳಜಿಗಲ್ಲ, ಬದಲಿಗೆ ತನ್ನ ಸುಪುತ್ರ ನಿಖಿಲ್ ರಾಜಕೀಯ ಭವಿಷ್ಯದ ಬಗ್ಗೆ ಇರುವ ಭಯಕ್ಕೆ. ಇದಕ್ಕೆ ಸಾಕ್ಷಿಯೇ ಸುಮಲತಾ ವಿರುದ್ಧ ಎಚ್‌ಡಿಕೆ ಕೆಂಡಕಾರುತ್ತಿರುವುದು ಮತ್ತು ವೈಯಕ್ತಿವಾಗಿ ನಿಂದಿಸುತ್ತಿರುವುದು. ಇದಕ್ಕೆ ಸುಮಲತಾ ಅವರು ಕೂಡ ಹೊರತಲ್ಲ. ಇವರು ರೈತ ಸಂಘದವರನ್ನು ದಿಕ್ಕು ತಪ್ಪಿಸಿ ಮುಂದಿನ ಚುನಾವಣೆ ಗೆಲ್ಲುವ ಸಲುವಾಗಿಯೇ ಇದನ್ನು ರಾಜಕೀಯ ಮಾಡುತ್ತಿದ್ದಾರೆ ಎಂಬುದು ಮಂಡ್ಯ ಜನರ ಮಾತು.
ಸುಮಲತಾ ವಿರುದ್ಧ ಎಚ್.ಡಿ ಕುಮಾರಸ್ವಾಮಿ ಹೀಗೆ ಕಠಿಣ ಪದಗಳನ್ನು ಬಳಸಿ ದಾಳಿ ಮಾಡಲು ಕಾರಣ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ತನ್ನ ಪುತ್ರ ಸೋತಿರುವುದು. ಪುತ್ರನ ಸೋಲು ಅರಗಿಸಿಕೊಳ್ಳಲಾಗದೆ ಬೇಕಂತಲೇ ಕುಮಾರಸ್ವಾಮಿ ಸುಮಲತಾ ವಿರುದ್ಧ ಕೆಂಡಕಾರುತ್ತಿದ್ದಾರೆ. ಇದನ್ನೇ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವ ಸುಮಲತಾ ತನ್ನ ಮಗ ಅಭಿಶೇಕ್ ರಾಜಕೀಯ ಭವಿಷ್ಯಕ್ಕೆ ಬುನಾದಿ ಹಾಕುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಮಂಡ್ಯ ಜೆಡಿಎಸ್ ಭದ್ರಕೋಟೆ. ಈ ಜೆಡಿಎಸ್‌ಗೆ ಈಗ ಎದುರಾಗಿರುವುದು ಸುಮಲತಾ ಅಂಬರೀಶ್. ಹೇಗಾದರೂ ಸರಿ ಮುಂದಿನ ಚುನಾವಣೆ ವೇಳೆಗೆ ಪಾಂಡವಪುರದ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಲ್ಲಿ ಜೆಡಿಎಸ್ ಶಾಸಕ ಸಿ. ಎಸ್. ಪುಟ್ಟರಾಜು ಪಾಲಿರುವುದು ಸಾಬೀತುಪಡಿಸಬೇಕು. ಮಂಡ್ಯ ಗೆಲ್ಲೋಕೆ ಜೆಡಿಎಸ್‌ಗೆ ಇರುವ ಅವಕಾಶವನ್ನು ತಪ್ಪಿಸಬೇಕು ಎಂಬುದು ಸುಮಲತಾ ಉದ್ದೇಶ. ಹೀಗಾಗಿ ಈ ವಿಚಾರ ಸುಮಲತಾ ಮತ್ತು ಜೆಡಿಎಸ್ ಸುತ್ತಲೇ ಗಿರಕೆ ಹೊಡೆಯುತ್ತಿದೆ.
ಸರ್ಕಾರ ಮತ್ತು ಇಂಜಿಯರ್ಸ್ ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ ಮೇಲೂ ಸುಮಲತಾ ಮಾತ್ರ ಸುಮ್ಮನಾಗುತ್ತಿಲ್ಲ. ಅಷ್ಟಕ್ಕೂ ಒಂದು ಜಲಾಶಯ ಬಿರುಕು ಕಾಣಿಸಿಕೊಂಡರೆ ಯಾರು ಸುಮ್ಮನೇ ಕೂರೋದಿಲ್ಲ. ಹೀಗಿರುವಾಗ ಸುಮಲತಾ ಪದೇಪದೇ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡೋದು, ಜೆಡಿಎಸ್ ನಾಯಕರ ಬಗ್ಗೆಯೇ ಮಾತಾಡೋದು ಎಲ್ಲವೂ ರಾಜಕೀಯ ಎಂಬುದು ಖಂಡಿತವಾಗಿಯೂ ಅರ್ಥವಾಗುತ್ತದೆ.

ಮಂಡ್ಯದ ಕೆಆರ್‌ಎಸ್ ಈಗ ಜೆಡಿಎಸ್ ಮತ್ತು ಸುಮಲತಾರ ರಾಜಕೀಯ ಅಡ್ಡ. ಇದನ್ನೇ ಮುಂದಿಟ್ಟುಕೊಂಡು ಮುಂದಿನ ಚುನಾವಣೆಗೆ ಹೋಗಲು ಸುಮಲತಾ ನಿರ್ಣಯಿಸಿರುವುದಂತೂ ದುರಂತ. ಸುಮಲತಾ ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರಲಿದ್ದಾರೆ. ಇದರ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯನವರ ಕೈವಾಡ ಇದೆ. ಹೀಗಾಗಿ ಈ ಕೆಆರ್‌ಎಸ್ ಡ್ಯಾಂ ವಿವಾದದ ಹಿಂದಿನ ಮಾಸ್ಟರ್ ಮೈಂಡ್ ಸಿದ್ದರಾಮಯ್ಯ ಎನ್ನಲಾಗುತ್ತಿದೆ. ಹೀಗಿರುವಾಗ ಸುಮಲತಾಗೆ ಸಪೋರ್ಟ್ ಮಾಡುತ್ತಿರುವ ಬಿಜೆಪಿಗರ ಪಾಲಂತೂ ಹೇಳತೀರದು.