ರಾಜ್ಯದ ಬಿಜೆಪಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಗೆ ಜೆಡಿಎಸ್ ಪಕ್ಷ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಇದು ಅಗತ್ಯವಿಲ್ಲದ ವಿಷಯ ಎಂದು ಪಕ್ಷದ ಶಾಸಕಾಂಗ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯಲ್ಲಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು; ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ಕರೆದಿರುವುದು ಉತ್ತರ ಕರ್ನಾಟಕ ಸೇರಿದಂತೆ ರಾಜ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಅಗತ್ಯವಿಲ್ಲದ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಅಲ್ಲ. ಈ ಕಾಯ್ದೆಯನ್ನು ನಮ್ಮ ಪಕ್ಷ ಸ್ಪಷ್ಟವಾಗಿ ವಿರೋಧಿಸುತ್ತದೆ ಹಾಗೂ ಕಲಾಪದಲ್ಲಿ ಭಾಗಿಯಾಗುವ ನಮ್ಮ ಎಲ್ಲ ಶಾಸಕರು ಕೂಡ ಇದನ್ನು ವಿರೋಧಿಸುತ್ತಾರೆ ಎಂದು ತಿಳಿಸಿದರು.
ಶೇ.40 : ಎಲ್ಲರೂ ಗಾಜಿನ ಮನೆಯಲ್ಲಿ ಇದ್ದಾರೆ!
ಬಿಟ್ ಕಾಯಿನ್ ಹಗರಣ ಹಾಗೂ ಗುತ್ತಿಗೆದಾರರಿಂದ ಶೇ.40 ರಷ್ಟು ಕಮಿಷನ್ ವಸೂಲಿ ಮಾಡುವ ಬಗ್ಗೆ ಜೆಡಿಎಸ್ ಮಾತನಾಡುತ್ತಿಲ್ಲ ಎನ್ನುವ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಅವರು, ಗುತ್ತಿಗೆದಾರ ಸಂಘದ ಒಬ್ಬರು ಪ್ರಧಾನ ಮಂತ್ರಿಗಳಿಗೆ ಬರೆದಿರುವ ಪತ್ರ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಶೇ. 40 ಕಮಿಷನ್ ಅಂತ ಮಾತನಾಡುತ್ತಿದ್ದಾರೆ. ಈ ಪರ್ಸಂಟೇಜ್ ವ್ಯವಹಾರ ಬರಲು ಯಾರು ಕಾರಣ? 10%, 20%, 30%, 40% ಕಮಿಷನ್ ಅಂತ ಹೇಳುವವರಿಗೆ ಆ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ಎಲ್ಲರೂ ಗಾಜಿನ ಮನೆಯಲ್ಲಿ ಇರುವವರೇ. ಗಾಜಿನ ಮನೆಯಲ್ಲಿ ಕೂತು ಕಲ್ಲು ಯಾಕೆ ಹೊಡೆಯುತ್ತಾರೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಯಾರು ಇವತ್ತು ಕಮಿಷನ್ ಬಗ್ಗೆ ಮಾತನಾಡುತ್ತಿದ್ದಾರೆ ಅದೇ ಕಾಂಗ್ರೆಸ್ ಪಕ್ಷದ ನಾಯಕರು ಐದು ವರ್ಷ ಆಡಳಿತ ನಡೆಸಿದರಲ್ಲ, ಅವರ ಕಾಲದಲ್ಲಿ ಏನೇನಾಯ್ತು ಎಂದು ಹೇಳಬೇಕು? ಅವರ ಕಾಲದಲ್ಲಿ ಎಷ್ಟು ಪರ್ಸಂಟೇಜ್ ಇತ್ತು ಎನ್ನುವುದು ಅವರಿಗೂ ಗೊತ್ತು. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ನಿಮ್ಮ ಸರ್ಕಾರ ಇದ್ದಾಗ ಈ ಪರ್ಸಂಟೇಜ್ ವ್ಯವಹಾರದ ವಿರುದ್ಧ ಯಾಕೆ ಕ್ರಮ ಜರುಗಿಸಲು ಆಗಲಿಲ್ಲ ಎಂದು ಕೆಲವರು ಕೇಳುತ್ತಿದ್ದಾರೆ. ಸ್ವತಂತ್ರ ಸರ್ಕಾರ ನನಗೆಂದೂ ಬರಲಿಲ್ಲ. ಆದರೆ ಯಾವುದೇ ಕಾರಣಕ್ಕೂ ಪರ್ಸಂಟೇಜ್ ವ್ಯವಸ್ಥೆಯನ್ನು ನನ್ನ ಕಚೇರಿಯಲ್ಲಿ ಇಟ್ಟಿರಲಿಲ್ಲ. ನನ್ನ ಕಾಲದಲ್ಲೂ ಎಲ್ಲೆಲ್ಲಿ ಪರ್ಸಂಟೇಜ್ ಹೋಗ್ತಾ ಇತ್ತು ಎನ್ನುವ ಮಾಹಿತಿ ನನಗೆ ಇತ್ತು. ಮುಂದೆ ನಮ್ಮ ಪಕ್ಷಕ್ಕೆ ಜನರು ಸ್ವತಂತ್ರ ಅಧಿಕಾರ ಕೊಟ್ಟರೆ ಆಗ ಈ ಬಗ್ಗೆ ಚರ್ಚೆ ಮಾಡಬಹುದು ಎಂದು ವಿವರಿಸಿದರು.
ಬಿಜೆಪಿ, ಕಾಂಗ್ರೆಸ್ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಲಿ
ಪರ್ಸಂಟೇಜ್ ಬಗ್ಗೆ ಮಾತನಾಡುವ ನೈತಿಕತೆ ರಾಜ್ಯದ ಎರಡೂ ಪಕ್ಷಗಳಿಗೆ ಇಲ್ಲ. ಪ್ರತಿ ಯೋಜನೆಗೆ ಹಣಕಾಸು ಇಲಾಖೆ ಹೊಂದಿದ್ದ ನನ್ನ ಕಚೇರಿಯಿಂದ ಎಂದೂ ಪರ್ಸಂಟೇಜ್ ವ್ಯವಸ್ಥೆ ಇರಲಿಲ್ಲ. ಅಂತದ್ದಕ್ಕೆ ಪ್ರೋತ್ಸಾಹ ಕೊಟ್ಟಿಲ್ಲ. ಆಗ ನಡೆದಿರುವ ಪರ್ಸಂಟೇಜ್ ವ್ಯವಹಾರದಲ್ಲಿ ನನ್ನ ಪಾತ್ರ ಇಲ್ಲ. ಆದರೆ ಇವತ್ತು ಪರ್ಸಂಟೇಜ್ ಬಗ್ಗೆ ಯಾರು ಯಾರು ಮಾತನಾಡುತ್ತಿದ್ದಾರೆ ಅವರು ತಮ್ಮ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಲಿ ಎಂದರು.
ದೇವರಾಜ ಅರಸು ಅವರ ನಂತರ ಐದು ವರ್ಷ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಪರ್ಸಂಟೇಜ್ ವ್ಯವಹಾರ ಇರಲಿಲ್ಲವಾ? ಅವರು ಆತ್ಮ ಮುಟ್ಟಿಕೊಂಡು ಹೇಳ್ತಾರಾ? ಇಂತದ್ದನ್ನು ತಡೆಯಲು ಎಲ್ಲ ಪಕ್ಷಗಳು ಮಾತ್ರ ಅಲ್ಲ, ಜನಪ್ರತಿನಿಧಿಗಳ ಪಾತ್ರ ತುಂಬಾ ಇದೆ ಎಂದು ಅಭಿಪ್ರಾಯಪಟ್ಟರು.