ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಉರುಳಿದ ಬಳಿಕ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಬೇರೆ ಬೇರೆಯಾಗಿವೆ. ಅದರಲ್ಲೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಎತ್ತಿದರೆ ಜೆಡಿಎಸ್ ವರಿಷ್ಠರು ನಖಶಿಖಾಂತ ಉರಿಯುತ್ತಿದ್ದಾರೆ. ಕಾಂಗ್ರೆಸ್ ಸಹವಾಸವೇ ಸಾಕಪ್ಪಾ ಎನ್ನುತ್ತಿದ್ದಾರೆ. ಇದರ ನಡುವೆಯೇ ಮತ್ತೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಮುಂದಾಗಿದೆ. ಇದಕ್ಕೆ ಕಾರಣ ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಹೇಗಾದರೂ ಮಾಡಿ ಮತ್ತೆ ಸಂಸತ್ ಪ್ರವೇಶಿಸುವಂತೆ ಮಾಡಬೇಕು ಎಂಬ ಯೋಚನೆ.
ಹೌದು, 2020ರ ಜೂನ್ ತಿಂಗಳಲ್ಲಿ ರಾಜ್ಯಸಭೆಯ ನಾಲ್ಕು ಸ್ಥಾನಗಳು ಖಾಲಿಯಾಗುತ್ತಿವೆ. ಕಾಂಗ್ರೆಸ್ ನ ಬಿ.ಕೆ.ಹರಿಪ್ರಸಾದ್, ಪ್ರೊ. ರಾಜೀವ್ ಗೌಡ, ಬಿಜೆಪಿಯ ಪ್ರಭಾಕರ ಕೋರೆ ಮತ್ತು ಜೆಡಿಎಸ್ ನ ಕುಪೇಂದ್ರ ರೆಡ್ಡಿ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಈ ನಾಲ್ಕೂ ಸ್ಥಾನಗಳು ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆ ಮಾಡುವಂತಹದ್ದು. ತಮ್ಮ ಪಕ್ಷದ ವರಿಷ್ಠ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಬೇಕು ಎಂದು ಬಯಸುತ್ತಿರುವ ಜೆಡಿಎಸ್ ನಾಯಕರು ಅದಕ್ಕಾಗಿ ಕಾಂಗ್ರೆಸ್ ಜತೆ ಮತ್ತೊಮ್ಮೆ ಮೈತ್ರಿ ಮಾಡಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಸಿದ್ದರಾಮಯ್ಯ ಅವರ ಕಾರಣಕ್ಕಾಗಿ ಕಾಂಗ್ರೆಸ್ ಸಹವಾಸವೇ ಸಾಕು ಎನ್ನುತ್ತಿದ್ದ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೂಡ ಇದಕ್ಕೆ ಅಸ್ತು ಎನ್ನುತ್ತಿದ್ದಾರೆ. ದೇವೇಗೌಡರಿಗಾಗಿ ಶಾಸಕರು ಕೂಡ ಇದಕ್ಕೆ ವಿರೋಧಿಸುವುದಿಲ್ಲ ಎಂಬುದು ನಾಯಕರಿಗೆ ಖಚಿತವಾಗಿದೆ.
ರಾಜ್ಯಸಭೆಯಲ್ಲಿ ಖಾಲಿಯಾಗುತ್ತಿರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಲು ಸದ್ಯದ ಲೆಕ್ಕಾಚಾರದ ಪ್ರಕಾರ 224 ಸದಸ್ಯ ಬಲದ ವಿಧಾನಸಭೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೆ 45ರಿಂದ 46 ಮತ ಬೇಕು. ಆ ಲೆಕ್ಕಾಚಾರದಲ್ಲಿ ಬಿಜೆಪಿ ಇಬ್ಬರು ಸದಸ್ಯರನ್ನು ಸುಲಭವಾಗಿ ಆಯ್ಕೆ ಮಾಡಿ ಕಳುಹಿಸಬಹುದು. ಇನ್ನೊಬ್ಬರನ್ನು ಆಯ್ಕೆ ಮಾಡಬೇಕಾದರೆ 20 ಸ್ಥಾನಗಳ ಕೊರತೆ ಇದೆ. ಇನ್ನು 68 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ ನಿಂದ ಒಬ್ಬರನ್ನು ಆಯ್ಕೆ ಮಾಡಲು ಅವಕಾಶವಿದ್ದು, ಮತ್ತೊಂದು ಸ್ಥಾನಕ್ಕೆ 17 ಅಥವಾ 18 ಸ್ಥಾನಗಳ ಕೊರತೆ ಬೀಳುತ್ತದೆ. ಆದರೆ, ಕೇವಲ 34 ಶಾಸಕರನ್ನು ಹೊಂದಿರುವ ಜೆಡಿಎಸ್ ಗೆ ಕಳೆದುಕೊಳ್ಳುತ್ತಿರುವ ಒಂದು ಸ್ಥಾನ ಭರ್ತಿ ಮಾಡಿಕೊಳ್ಳಲು ಕೂಡ ಸಾಧ್ಯವಾಗದ ಪರಿಸ್ಥಿತಿ ಇದೆ. ಹೀಗಾಗಿಯೇ ಕಾಂಗ್ರೆಸ್ ನಲ್ಲಿ ಹೆಚ್ಚುವರಿಯಾಗಿರುವ 17-18 ಶಾಸಕರ ಬೆಂಬಲ ಪಡೆದು ಮಾಜಿ ಪ್ರಧಾನಿ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಬೇಕು ಎಂಬುದು ಜೆಡಿಎಸ್ ಯೋಚನೆ.
ಈ ಚುನಾವಣೆಗೆ ಇನ್ನೂ ಆರು ತಿಂಗಳು ಇದೆಯಾದರೂ ಈಗಿನಿಂದಲೇ ಪ್ರಯತ್ನಗಳು ಆರಂಭವಾಗಿವೆ. ಕಾಂಗ್ರೆಸ್ ವಿರುದ್ಧ ಅನಗತ್ಯ ಟೀಕೆ, ಆರೋಪಗಳನ್ನು ಮಾಡದಂತೆ ಶಾಸಕರಿಗೆ ಸೂಚನೆ ಹೊರಬಿದ್ದಿದೆ. ಈ ಮಧ್ಯೆ ಕಾಂಗ್ರೆಸ್ ಜತೆ ರಾಜಿ ಪಂಚಾಯ್ತಿಯೂ ಆರಂಭವಾಗಿದ್ದು, ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರೊಂದಿಗೆ ಜೆಡಿಎಸ್ ಹಿರಿಯ ನಾಯಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಈ ವಿಚಾರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜತೆ ಪ್ರಸ್ತಾಪಿಸಿ ಅವರ ಅಭಿಪ್ರಾಯ ಏನಿದೆ ಎಂದು ತಿಳಿದುಕೊಳ್ಳುವ ಜವಾಬ್ದಾರಿಯನ್ನು ಆಜಾದ್ ಅವರಿಗೆ ವಹಿಸಲಾಗಿದೆ. ಸೋನಿಯಾ ಗಾಂಧಿ ಅವರ ಕಡೆಯಿಂದ ಪೂರಕ ಪ್ರತಿಕ್ರಿಯೆ ಬಂದರೆ ಕುಮಾರಸ್ವಾಮಿ ಅವರು ಮುಂದಿನ ಮಾತುಕತೆ ಮುಂದುವರಿಸಲು ನಿರ್ಧರಿಸಲಾಗಿದೆ.
ಕಾಂಗ್ರೆಸ್ ನಲ್ಲಿ ಖರ್ಗೆ ವರ್ಸಸ್ ಬಿ.ಕೆ.ಹರಿಪ್ರಸಾದ್
ಮತ್ತೊಂದೆಡೆ ಕಾಂಗ್ರೆಸ್ ಪಕ್ಷದಲ್ಲೂ ರಾಜ್ಯಸಭೆ ಚುನಾವಣೆ ಲೆಕ್ಕಾಚಾರಗಳು ಶುರುವಾಗಿದೆ. ಬಿ.ಕೆ.ಹರಿಪ್ರಸಾದ್ ಮತ್ತು ಪ್ರೊ.ರಾಜೀವ್ ಗೌಡ ಅವರ ಅಧಿಕಾರಾವಧಿ ಕೊನೆಗೊಳ್ಳುತ್ತಿದ್ದು, ಇಬ್ಬರೂ ಪುನರಾಯ್ಕೆಗೆ ಪ್ರಯತ್ನಿಸುತ್ತಿದ್ದಾರೆ. ಆದರೆ, 2013-19ರ ಅವಧಿಯಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಅತ್ಯುತ್ತಮವಾಗಿ ಕೆಲಸ ಮಾಡಿದ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಗೆ ಕಳುಹಿಸಬೇಕು ಎಂಬ ಯೋಚನೆ ಕಾಂಗ್ರೆಸ್ ವರಿಷ್ಠರದ್ದು. ಅಷ್ಟೇ ಅಲ್ಲ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ನಂತರದಲ್ಲಿ ಶಿವಸೇನಾ-ಬಿಜೆಪಿ ನಡುವಿನ ಬಿಕ್ಕಟ್ಟಿನ ಲಾಭ ಪಡೆದು ಅಲ್ಲಿ ಶಿವಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಅವರು ಸೋತಿದ್ದರಿಂದ ಅವರ ಸೇವೆಯನ್ನು ಸಂಸತ್ತಿನಲ್ಲಿ ಬಳಸಿಕೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಖರ್ಗೆ ಅವರನ್ನು ವಿಧಾನಸಭೆಯಿಂದ ರಾಜ್ಯಸಭೆಗೆ ಕಳುಹಿಸುವ ಆಸಕ್ತಿ ತೋರಿಸಿದ್ದಾರೆ.
ಆದರೆ, ವಿಧಾನಸಭೆಯಲ್ಲಿ ಕಾಂಗ್ರೆಸ್ ಹೊಂದಿರುವ ಸಂಖ್ಯಾಬಲ ಆಧರಿಸಿ ಒಬ್ಬರಿಗೆ ಮಾತ್ರ ಆವಕಾಶವಿದೆ. ಇದನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಬೇಕು ಎಂದು ವರಿಷ್ಠರು ಯೋಚಿಸುತ್ತಿದ್ದರೂ ಹಾಲಿ ಸದಸ್ಯ ಬಿ.ಕೆ.ಹರಿಪ್ರಸಾದ್ ಅಷ್ಟು ಸುಲಭವಾಗಿ ಅದಕ್ಕೆ ಒಪ್ಪುವ ಸಾಧ್ಯತೆ ಇಲ್ಲ. ಹರಿಪ್ರಸಾದ್ ಅವರ ವಿರೋಧ ಲೆಕ್ಕಿಸದೆ ಖರ್ಗೆ ಅವರನ್ನು ಆಯ್ಕೆ ಮಾಡಿದರೆ, ದಲಿತರಿಗಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಹರಿಪ್ರಸಾದ್ ಅವರಿಗೆ ಅನ್ಯಾಯ ಮಾಡಲಾಗಿದೆ ಎಂಬ ಆರೋಪವನ್ನು ಕಾಂಗ್ರೆಸ್ ಹೊತ್ತುಕೊಳ್ಳಬೇಕಾಗಿ ಬರಬಹುದು. ಹೀಗಾಗಿ ಜೆಡಿಎಸ್ ಬೆಂಬಲ ಪಡೆದು ಎರಡು ಸ್ಥಾನಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬುದು ಕಾಂಗ್ರೆಸ್ ರಾಜ್ಯ ನಾಯಕರ ಆಲೋಚನೆ.
ಜೆಡಿಎಸ್ ಲೆಕ್ಕಾಚಾರ ಏನು?
ಕಾಂಗ್ರೆಸ್ ನ ಈ ಲೆಕ್ಕಾಚಾರದ ಕಾರಣದಿಂದಾಗಿಯೇ ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಬದಲು ದೇವೇಗೌಡರ ಹೆಸರನ್ನು ಮುಂದೆ ಬಿಡಲಾಗಿದೆ. ಕುಪೇಂದ್ರ ರೆಡ್ಡಿ ಅವರ ಪುನರಾಯ್ಕೆಗೆ ಕಾಂಗ್ರೆಸ್ ತಗಾದೆ ತೆಗೆಯಬಹುದು. ಅದರ ಬದಲು ಕಾಂಗ್ರೆಸ್ ನಿಂದಲೇ ಇಬ್ಬರನ್ನು ಆಯ್ಕೆ ಮಾಡಲು ಬೆಂಬಲ ಕೋರಬಹುದು. ಅದರ ಬದಲಾಗಿ ದೇವೇಗೌಡರನ್ನು ಆಯ್ಕೆ ಮಾಡಿದರೆ ಅದಕ್ಕೆ ಬೆಂಬಲ ಸಿಗಬಹುದು. ಏಕೆಂದರೆ, ದೇವೇಗೌಡರು ಕಾಂಗ್ರೆಸ್ ವರಿಷ್ಠ ನಾಯಕರೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದಾರೆ. ಅಲ್ಲದೆ, ಮೈತ್ರಿ ಸರ್ಕಾರ ರಚನೆಯಾದ ಬಳಿಕ ದೇವೇಗೌಡರ ಕುಟುಂಬದ ಜತೆ ಸಂಬಂಧ ಸುಧಾರಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರೂ ಬೆಂಬಲಿಸಬಹುದು.
ಸದ್ಯ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದು, ಅದು ಕೈಗೂಡಿದರೆ ದೇವೇಗೌಡರಿಗೆ ನೀಡುವ ಸಹಕಾರ ಭವಿಷ್ಯದಲ್ಲಿ ಅವರಿಗೆ ಅನುಕೂಲ ಆಗುತ್ತದೆ. ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಲು ಸಹಕರಿಸಿದ್ದಾರೆ ಎಂಬ ಕಾರಣಕ್ಕೆ ಒಕ್ಕಲಿಗ ಸಮುದಾಯದವರು ತಮ್ಮ ಪರ ನಿಲ್ಲಬಹುದು ಎಂಬ ಯೋಚನೆ ಶಿವಕುಮಾರ್ ಮಾಡಿದರೆ ದೇವೇಗೌಡರ ಆಯ್ಕೆ ಸುಲಭವಾಗುತ್ತದೆ. ಕಾಂಗ್ರೆಸ್ ಹೈಕಮಾಂಡ್ ಮತ್ತು ಶಿವಕುಮಾರ್ ದೇವೇಗೌಡರ ಪರ ನಿಂತರೆ ಸಿದ್ದರಾಮಯ್ಯ ಕೂಡ ವಿರೋಧಿಸದೆ ತಟಸ್ಥರಾಗಬಹುದು. ಹೀಗಾಗಿ ಕಾಂಗ್ರೆಸ್ ಜತೆ ಮತ್ತೆ ಮೈತ್ರಿಗೆ ಮುಂದಾಗುವುದು ಇಷ್ಟವಿಲ್ಲದೇ ಇದ್ದರೂ ದೇವೇಗೌಡರಿಗಾಗಿ ಜೆಡಿಎಸ್ ಶಾಸಕರು ಮರುಮೈತ್ರಿಗೆ ಬೆಂಬಲವಾಗಿ ನಿಲ್ಲಲು ನಿರ್ಧರಿಸಿದ್ದಾರೆ.