ರಾಜ್ಯ ರಾಜಕೀಯದಲ್ಲಿ ʻಆರ್‌ಎಸ್‌ಎಸ್ ವಿರೋಧಿʼ ಅಲೆ ಎದ್ದಿದೆ. ಅತ್ತ ಕಾಂಗ್ರೆಸ್ ಆರ್‌ಎಸ್‌ಎಸ್ ವಿರೋಧಿ ಹೇಳಿಕೆ ಕೊಟ್ಟು ಬಿಜೆಪಿ ನಾಯಕರನ್ನು ಪೇಚಿಗೆ ಸಿಲುಕಿಸಿದ್ದರೆ, ಇತ್ತೀಚೆಗೆ ಜೆಡಿಎಸ್ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಬಹಿರಂಗವಾಗಿ, ಕಟುವಾಗಿ ಆರ್‌ಎಸ್‌ಎಸ್ ಅನ್ನು ಟೀಕಿಸುತ್ತಿದ್ದಾರೆ. ಇದು ಈಗ ರಾಜಕೀಯ ಪಡಸಾಲೆಯಲ್ಲಿ ಬಹಳ ಚರ್ಚೆಗೆ ಹಾದಿ ಮಾಡಿಕೊಟ್ಟಿದೆ. ರಾಜಕೀಯ ಬದುಕಿನ ಈ ಇಷ್ಟೂ ದಿನಗಳ ಕಾಲ ಆರ್‌ಎಸ್‌ಎಸ್ ಬಗ್ಗೆ ಸೊಲ್ಲೇ ಎತ್ತದ ಕುಮಾರಸ್ವಾಮಿ ಈಗ ʻದೇಶಕ್ಕೆ ಆರ್‌ಎಸ್‌ಎಸ್ ಕೊಡುಗೆ ಏನು.?ʼ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುವ ಮೂಲಕ ರಾಜ್ಯ ರಾಜಕೀಯದ ಕೇಂದ್ರ ಬಿಂದುವಾಗುತ್ತಿದ್ದಾರೆ. ಆದರೆ ಕುಮಾರಸ್ವಾಮಿಯ ಈ ನಡೆಯ ಹಿಂದಿನ ಉದ್ದೇಶವೇನು ಎಂಬುವುದು ಗಮನಾರ್ಹ ವಿಚಾರ.

ಆರ್‌ಎಸ್‌ಎಸ್ ಟೀಕಿಸುತ್ತಲೇ ಕಾಂಗ್ರೆಸ್ ಬಗ್ಗೆಯೂ ಕುಮಾರಸ್ವಾಮಿ ವಾಗ್ದಾಳಿ ನಡೆಸುತ್ತಿರುವುದು, ಇದು ಮುಂದಿನ ಚುನಾವಣೆಗಿರುವ ತಯಾರಿ ಎಂಬುವುದನ್ನು ನಿಚ್ಚಳವಾಗಿಸಿದೆ. ಆದರೆ ಕುಮಾರಸ್ವಾಮಿಯ ಈ ನಡೆ ತಂತ್ರಗಾರಿಕೆಯ ಭಾಗವೇ ಆದರೂ ಇದರಿಂದ ಆಗುವ ಪರಿಣಾಮ ಏನು ಎನ್ನುವುದು ಕೂಡ ಮತ್ತೊಂದು ಚರ್ಚಾವಸ್ತು. ಇತ್ತೀಚೆಗೆ ರಾಮನಾಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಆರ್‌ಎಸ್‌ಎಸ್ ಅನ್ನು ಮನಸೋಇಚ್ಛೆ ಟೀಕಿಸಿದ್ದರು. ಇದು ಸಹಜವಾಗಿಯೇ ಬಿಜೆಪಿ ನಾಯಕರನ್ನು ಕೆರಳಿಸಿತ್ತು. ಕುಮಾರಸ್ವಾಮಿಯವರ ಈ ಹಠಾತ್ತ ಬದಲಾವಣೆ ಕಾಂಗ್ರೆಸ್ ಪಾಳಿಯಲ್ಲೂ ಕೂಡ ಗುಸುಗುಸುಗೆ ಕಾರಣವಾಗಿತ್ತು. ಆದರೆ ಕುಮಾರಸ್ವಾಮಿಯ ಸದ್ಯದ ಈ ನಿಲುವು ನಿಜಕ್ಕೂ ʻಕಾಳಜಿಯುತವೇ.?ʼ ಎಂಬ ಪ್ರಶ್ನೆಯನ್ನು ಅಲ್ಲಗಳೆಯುವಂತಿಲ್ಲ.
ಜೆಡಿಎಸ್‌ನ ಕಾರ್ಯಾಗಾರ ರಾಜಕೀಯದ ಟಾರ್ಗೆಟ್ ಯಾರು.!?
ಒಂದು ವಿಮರ್ಶೆ ನಡೆಸುವುದೇ ಆದರೂ, ಕುಮಾರಸ್ವಾಮಿಯ ಸದ್ಯದ ನಿಲುವಿನಿಂದ ಬಿಜೆಪಿಗೆ ಮುಟ್ಟಿಕೊಳ್ಳುವ ಹೊಡೆತವೇನು ನೀಡಲಾರವು. ಆದರೆ ಪ್ರಾದೇಶಿಕತೆಯ ಬ್ಯ್ರಾಂಡ್ ಹೊತ್ತು ನಡೆಯುತ್ತಿರುವ ಜೆಡಿಎಸ್‌ಗೆ ಇದರಿಂದ ಕಾಂಗ್ರೆಸ್ ಪರವಾಗಿರುವ ಮತಗಳನ್ನು ತಮ್ಮತ್ತ ಸೆಳೆದುಕೊಡುವ ಸಾಧ್ಯತೆ ಹೆಚ್ಚಿದೆ. ಇದೇ ಕಾರಣಕ್ಕೆ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ʻಕಾರ್ಯಾಗಾರ ರಾಜಕೀಯʼದ ಮೊರೆ ಹೋಗಿದೆ. ಅಲ್ಪಸಖ್ಯಾಂತ ಕಾರ್ಯಾಗಾರ, ಪರಿಶಿಷ್ಟ ಪಂಗಡ ಹಾಗೂ ಜಾತಿ ಕಾರ್ಯಾಗಾರ, ಕ್ರಿಶ್ಚಿಯನ್ ಕಾರ್ಯಾಗಾರ, ಮಹಿಳಾ ಕಾರ್ಯಾಗಾರ ಹೀಗೆ ದೂರದ ಚುನಾವಣೆಗೆ ಜೆಡಿಎಸ್ ಈಗಿಂದೀಗಲೇ ತಯಾರಿ ನಡೆಸುತ್ತಿದೆ. ಜೆಡಿಎಸ್‌ನ ಈ ತಯಾರಿಗಳಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.
ಉಪ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಅಲ್ಪಸಂಖ್ಯಾತ ಅಭ್ಯರ್ಥಿಗಳು.!!
ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಯನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಜೆಡಿಎಸ್ ಉಭಯ ಕ್ಷೇತ್ರದಲ್ಲೂ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟು ಕಣಕ್ಕಿಳಿಸಿದೆ. ಇದರಿಂದ ಬಿಜೆಪಿ ವೋಟ್ ಬ್ಯಾಂಕ್ ಕದಡುವ ಯಾವುದೇ ಉದ್ದೇಶ ಜೆಡಿಎಸ್‌ಗೆ ಇದ್ದಂತಿಲ್ಲ. ಆದರೆ ಕಾಂಗ್ರೆಸ್ ಗೆ ಬೀಳುವ ಮತಗಳನ್ನು ಒಡೆಯುವ ತಂತ್ರ ಜೆಡಿಎಸ್ ನದ್ದು. ಹೀಗೆ ಮಾತಿಗೆ ಆರ್‌ಎಸ್‌ಎಸ್ ಎನ್ನುತ್ತಾ ಕುಮಾರಸ್ವಾಮಿಯವರು ಕಾಂಗ್ರೆಸ್ ಅನ್ನು ಸೋಲಿಸುವ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಿದ್ದಾರೆ. ಜೆಡಿಎಸ್‌ನ ಇಂಥಾ ನಿರ್ಧಾರಗಳು ನೇರವಾಗಿ ಬಿಜೆಪಿಗೆ ಲಾಭ ಮಾಡಿಕೊಡಲಿದೆ.
ಬಿಜೆಪಿಯ ಕೆರಳಿಸುವ ರಾಜಕೀಯಕ್ಕೆ ನೀರೆರಯುತ್ತಿರುವ ಹೆಚ್‌ಡಿಕೆ.!!

ವಿರೋಧ ಪಕ್ಷಗಳು ಯಾವುದೇ ರೀತಿಯಲ್ಲಿ ಹೇಳಿಕೆ ಕೊಟ್ಟರೂ, ನಡೆದುಕೊಂಡರೂ ಅದನ್ನು ತಮಗೆ ಸಕರಾತ್ಮಕ ರೀತಿಯಲ್ಲಿ ತಿರುಗಿಸಿಕೊಂಡು ರಾಜಕೀಯ ಲಾಭ ಪಡೆದುಕೊಳ್ಳುವ ಕಲೆ ಬಿಜೆಪಿಗಿದೆ. ಹೀಗಾಗಿ ಕುಮಾರಸ್ವಾಮಿ ಆರ್‌ಎಸ್‌ಎಸ್, ಹಿಂದುತ್ವ ಇತ್ಯಾದಿ.. ಇತ್ಯಾದಿ ಏನೇ ಮಾತನಾಡಿದರೂ ಇದರಿಂದ ಕಾಂಗ್ರೆಸ್ ಮತಗಳೇ ದಿಕ್ಕು ತಪ್ಪ ಬೇಕೇ ಹೊರತು ಇದರಿಂದ ಬಿಜೆಪಿ ಮತಗಳು ಸಾಸಿವೆ ಕಾಳಿನಷ್ಟೂ ಬದಲಾವಣೆಯಾಗುವುದಿಲ್ಲ. ಹೀಗಾಗಿ ಕುಮಾರಸ್ವಾಮಿಯ ಆರ್‌ಎಸ್‌ಎಸ್ ವಿರೋಧಿ ನಿಲುವು ಸದ್ಯಕ್ಕೆ ಬಿಜೆಪಿಗಿಂತ ಕಾಂಗ್ರೆಸ್‌ಗೆ ಹೆಚ್ಚು ಅಪಾಯಕಾರಿ. ಈ ಮೂಲಕ ಬಿಜೆಪಿಯ ಕೆರಳಿಸುವ ರಾಜಕೀಯಕ್ಕೆ ಪರೋಕ್ಷವಾಗಿ ಜೆಡಿಎಸ್ ಪುಷ್ಟಿನೀಡುತ್ತಿದೆ.

ಸಿದ್ದರಾಮಯ್ಯನವರನ್ನು ಹಣೆಯಲು ಜೆಡಿಎಸ್‌ನಿಂದ ಮತ್ತೊಂದು ತಂತ್ರ.!?
ಆರ್‌ಎಸ್‌ಎಸ್ ವಿರುದ್ಧ ಆಗಾಗ್ಗೆ ಕತ್ತಿ ಮಸೆಯುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇದೆ. ಯಾವ ಕಾರಣಕ್ಕೆ ನಾನು ಆರ್‌ಎಸ್‌ಎಸ್ ಅನ್ನು ವಿರೋಧಸ ಬೇಕು ಎನ್ನುವ ಸ್ಪಷ್ಟತೆ ಸಿದ್ದರಾಮಯನ್ನವರಿಗಿದೆ. ಆದರೆ, ನಾನು ಇತ್ತೀಚೆಗೆ ಆರ್‌ಎಸ್‌ಎಸ್ ಕುರಿತಾದ ಪುಸ್ತಕ ಓದಲು ಶುರು ಮಾಡಿದ್ದೇನೆ. ಅವರ ಅಸಲಿ ಮುಖ ಈಗ ನನಗೆ ಅರ್ಥವಾಗುತ್ತಿದೆ ಎಂದೇಳಿ ಈವರೆಗೆ ನೀಡಿರುವ ಅಷ್ಟೂ ಹೇಳಿಕೆಗಳಿಂದ ಕುಮಾರಸ್ವಾಮಿಯವರ ಸೈದ್ಧಾಂತಿಕ ಸ್ಪಷ್ಟತೆಯ ಬಗ್ಗೆ ಗುಮಾನಿ ಮೂಡುವಂತೆ ಮಾಡಿದೆ. ಸಿದ್ದರಾಮಯ್ಯನವರಿಂದ ಸ್ಪೂರ್ತಿ ಪಡೆದಿರುವ ಕುಮಾರಸ್ವಾಮಿಯವರು ಈಗ ಆರ್‌ಎಸ್‌ಎಸ್ ವಿರುದ್ಧ ತೊಡೆ ತಟ್ಟಿದ್ದಾರೆ ಎಂಬ ಮತ್ತೊಂದು ಟೂಲ್ ಕಿಟ್ ಅನ್ನು ಬಿಜೆಪಿ ಐಟಿ ಸೆಲ್ ಈಗಾಗಲೇ ತೇಲಿ ಬಿಟ್ಟಿದೆ. ಹೀಗಾಗಿ ಕುಮಾರಸ್ವಾಮಿ ಏನೇ ಮಾತನಾಡಿದರೂ ಅದು ಕಾಂಗ್ರೆಸ್ ಅನ್ನು ಡ್ಯಾಮೇಜ್ ಮಾಡುವ ಸಾಧ್ಯತೆ ಇದೆ. ಬಹುಶಃ ಇದೇ ಆಗಿತ್ತಾ ಕುಮಾರಸ್ವಾಮಿಯವರ ಉದ್ದೇಶ.? ಈ ಒಂದು ಪ್ರಶ್ನೆಯನ್ನೂ ತಳ್ಳಿಹಾಕುವಂತಿಲ್ಲ.
ಹೀಗೆ ಕುಮಾರಸ್ವಾಮಿ ಆರ್‌ಎಸ್‌ಎಸ್ ಜಪ ಮಾಡುತ್ತಾ ಕಾಂಗ್ರೆಸ್ ಪುಡಗಟ್ಟುವ ಕೆಲಸ ತೆರೆಮರೆಯಲ್ಲಿ ಮಾಡುತ್ತಿದೆ ಎಂಬುವುದಕ್ಕೆ ಇಂಥಾ ಬೆಳವಣಿಗೆಗಳೇ ಸಾಕ್ಷ್ಯ. ಆದರೆ ಒಂದು ಪ್ರಾದೇಶಿಕ ಪಕ್ಷವಾಗಿ ಯಾವತ್ತಿಗೂ ಪೂರ್ಣಪ್ರಮಾಣದ ಗೆಲುವು ಪಡೆಯಲು ಕಷ್ಟ ಸಾಧ್ಯ. ಹೀಗಾಗಿ ಸಾಧ್ಯವಾದಷ್ಟು ಮುಂದಿನ ಚುನಾವಣೆಯನ್ನು ಅತಂತ್ರ ಸ್ಥಿತಿಗೆ ದೂಡಿ ಮತ್ತೆ ಕಿಂಗ್ ಮೇಕರ್ ಆಗಲಿರುವ ʻDirty Politics’ ಇವು ಎಂದರೆ ತಳ್ಳಿಹಾಕಲು ಸಾಧ್ಯವೇ.?.












