ಸಿಎಂ ಸಿದ್ದರಾಮಯ್ಯ ವಿರುದ್ಧ ಕಟು ಟೀಕೆ; 60% ಕಮೀಶನ್, ಹಿಟ್ ಅಂಡ್ ರನ್ ಮುಖ್ಯಮಂತ್ರಿ ಎಂದು ಲೇವಡಿ, ದಾಖಲೆ ಕೊಡಿ ಎಂದ ಸಿಎಂ ವಿರುದ್ಧ ವಾಗ್ದಾಳಿ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ಗುತ್ತಿಗೆದಾರರಿಂದ 60% ಕಮೀಶನ್ ಸುಲಿಗೆ ಮಾಡುತ್ತಿದೆ ಎಂದು ಮತ್ತೆ ಆರೋಪ ಮಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ದಾಖಲೆ ಕೊಡಿ ಎಂದ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವರು; 60% ಕಮೀಶನ್, ಆಧಾರವಿಲ್ಲದೆ ಆರೋಪದ ಮಾತೆಲ್ಲಿ ಬಂತು ಮಾನ್ಯ ಮುಖ್ಯಮಂತ್ರಿಗಳೇ? ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಪಕ್ಷದ ಪರವೇ ಇರುವ ಗುತ್ತಿಗೆದಾರರು, ತುಮಕೂರಿನ ನಿಮ್ಮ ಕಾಂಗ್ರೆಸ್ ಪಕ್ಷದ ಮುಖಂಡರೇ ಮಾಡಿರುವ ಆರೋಪವಿದು. ನಮ್ಮ ಪಕ್ಷದ ಸರಕಾರಕ್ಕಿಂತ ಹಿಂದಿನ ಬಿಜೆಪಿ
ಸರಕಾರವೇ ವಾಸಿ ಇತ್ತು ಎಂದು ಅವರು ಅಲವತ್ತುಕೊಂಡಿದ್ದರು ನಿಮ್ಮ ಪಕ್ಷದ ಗುತ್ತಿಗೆದಾರರು! ಕಾಂಗ್ರೆಸ್ ಸರಕಾರದಲ್ಲೂ 40% ಕಮೀಶನ್ ಸುಲಿಗೆ ಮಾಡಲಾಗುತ್ತಿದೆ ಎಂಬುದು ಅವರ ನೇರವಾಗಿ ಆರೋಪ ಎಂದು ಸಚಿವರು ಟಾಂಗ್ ನೀಡಿದ್ದಾರೆ.
ಕಮೀಶನ್ ವ್ಯವಹಾರ ಇಲ್ಲ ಎಂದಾದರೆ, ‘ಯಾಕಪ್ಪಾ ಹಾಗೆ ಹೇಳಿದಿರಿ?’ ಎಂದು ಅವರನ್ನೇ ಕರೆದು ಕೇಳಬೇಕಿತ್ತು. ಕೇಳಲಿಲ್ಲ ಯಾಕೆ? ಪ್ರತಿ ಆರೋಪಕ್ಕೂ ಈಗ ದಾಖಲೆ ಕೇಳುವ ನೀವು, ಬಿಜೆಪಿ ಸರಕಾರದ ಮೇಲೆ 40% ಕಮೀಶನ್ ಆರೋಪ ಮಾಡಿ, ಪುಟಗಟ್ಟಲೇ ಜಾಹೀರಾತು ಕೊಟ್ಟರಲ್ಲಾ.. ಆಗ ಎಷ್ಟು ದಾಖಲೆ ನೀಡಿದ್ದೀರಿ? ನಿಮ್ಮ ರಾಜಕೀಯ ಜೀವನದಲ್ಲಿ ಎಂದಾದರೂ ದಾಖಲೆ ಇಟ್ಟು ಆರೋಪ ಮಾಡಿದ್ದೀರಾ? ಎಂದು ಖಾರವಾಗಿ ಕೇಳಿದ್ದಾರೆ.
ದಾವಣಗೆರೆ ಗುತ್ತಿಗೆದಾರನೊಬ್ಬ ದಯಾಮರಣ ಕರುಣಿಸಿ ಎಂದು ನಿಮ್ಮ ಘನ ಸನ್ನಿಧಾನಕ್ಕೆ ಹಾಗೂ ಮಾನ್ಯ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅವರಿಗೆ ಬಾಕಿ ಹಣ ಕೊಡಿಸುತ್ತೀರೋ ಅಥವಾ ದಯಾಮರಣ ಕರುಣಿಸುತ್ತೀರೋ..? ಕಮೀಶನ್ ದುರಾಸೆ ಬಿಟ್ಟು ಮೊದಲು ಆ ಗುತ್ತಿಗೆದಾರನನ್ನು ರಕ್ಷಿಸಿ ಎಂದು ಒತ್ತಾಯಿಸಿರುವ ಕೇಂದ್ರ ಸಚಿವರು; 60% ಕಮೀಶನ್! ಮುಖ್ಯಮಂತ್ರಿ ಹಿಟ್ ಅಂಡ್ ರನ್!! ಎಂದು ತಮ್ಮನ್ನು ಹಿಟ್ ಅಂಡ್ ರನ್ ಎನ್ನುತ್ತಿದ್ದ ಸಿಎಂಗೆ ಚಾಟಿ ಬೀಸಿದ್ದಾರೆ.