ನವದೆಹಲಿ: ಶಾಲಾ ಹಂತದಿಂದಲೇ ಭಗವದ್ಗೀತೆಯನ್ನು( Bhagavad Gita) ಮಕ್ಕಳಿಗೆ ಬೋಧಿಸಬೇಕು. ಇದು ಅತ್ಯಂತ ಉತ್ತಮ ಶೈಕ್ಷಣಿಕ ಸುಧಾರಣಾ ಕ್ರಮವಾಗುತ್ತದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ(HD Kumaraswamy) ಮತ್ತೆ ಪುನರುಚ್ಚರಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಮತ್ತು ಸಾಧನೆ ಸಂಕಿರಣದಲ್ಲಿ ಮಾತನಾಡಿದ ಅವರು, ಭಗವದ್ಗೀತೆಯನ್ನು ಬೋಧಿಸಬೇಕು ಎಂದು ನಾನು ಹೇಳಿರುವುದು ರಾಜಕೀಯ ಉದ್ದೇಶ ಅಥವಾ ಯಾವುದೇ ಧರ್ಮ ಸಂಘರ್ಷ ಉಂಟು ಮಾಡುವುದಕ್ಕಲ್ಲ. ಉತ್ತಮ ಸಮಾಜ ನಿರ್ಮಾಣ ಮಾಡುವ ಅಗತ್ಯದ ದೃಷ್ಟಿಯಿಂದ ಹೇಳಿದ್ದೇನೆ ಎಂದರು.

ಭಗವದ್ಗೀತೆಯ ಉದಾತ್ತ, ಶ್ರೇಷ್ಠ ಮೌಲ್ಯಗಳ ಬಗ್ಗೆ ಹೊಸದಾಗಿ ತಿಳಿಹೇಳುವ ಅಗತ್ಯವಿಲ್ಲ. ಆದರೆ ಸಮಾಜದಲ್ಲಿ ನೈತಿಕ ಮೌಲ್ಯಗಳು ಅಧಃಪತನ ಆಗುತ್ತಿರುವ ಸಂದರ್ಭದಲ್ಲಿ ಗೀತೆಯ ಅಗತ್ಯ ಇನ್ನೂ ಹೆಚ್ಚಿದೆ. ಮಾನವ ಕುಲಕ್ಕೆ ಕೃಷ್ಣನ ಉಪದೇಶವು ದಾರಿದೀಪವಾಗಿದೆ. ಹೀಗಾಗಿ ಮಕ್ಕಳಿಗೆ ಬೋಧಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದೇನೆ. ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವಂತೆ ಕೋರಿ ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರವನ್ನು ಕೂಡ ಬರೆದಿದ್ದೇನೆ. ಅದನ್ನೇ ಕೆಲವರು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ನಮಗೆ ಎಲ್ಲವೂ ಇದೆ, ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಬೆಳೆಯುತ್ತಿದ್ದೇವೆ. ಆದರೆ ಮೌಲ್ಯಗಳ ವಿಷಯಕ್ಕೆ ಬಂದಾಗ ಪಾತಾಳಕ್ಕೆ ಹೋಗುತ್ತಿದ್ದೇವೆ. ಯಾಕೆ ಹೀಗೆ ಆಗುತ್ತಿದೆ ಎಂಬುದನ್ನು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇವತ್ತು ಯಾರೇ ಆದರೂ ನೆಮ್ಮದಿಯಾಗಿ ನಿದ್ರೆ ಮಾಡುವ ಪರಿಸ್ಥಿತಿ ಇಲ್ಲ. ಅಂತಹ ಪ್ರಾಮಾಣಿಕತೆಯನ್ನು ಯಾರೂ ಹೊಂದಿಲ್ಲ. ಹಾಗಾದರೆ ಮುಂದಿನ ತಲೆಮಾರಿಗೆ ಏನು ಕೊಡಬೇಕು ಎಂಬುದನ್ನು ಪೋಷಕರು ತೀರ್ಮಾನ ಮಾಡಬೇಕು. ಮಾನವೀಯ ಮೌಲ್ಯಗಳು, ತಾಯಿ ಹೃದಯ ಎಲ್ಲರಿಗೂ ಅಗತ್ಯ. ಈ ಮೌಲ್ಯಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.












