ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಗೈರು ಹಾಜರಾಗಿರುವುದಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸರ್ಮಥಿಸಿಕೊಂಡಿದ್ದು, ಸದನಕ್ಕೆ ನಾನು ಏಕೆ ಹಾಜರಾಗಬೇಕಿತ್ತು, ಸಂಸದೀಯ ವ್ಯವಸ್ಥೆ ನಾಶಪಡಿಸುವುದನ್ನು ನೋಡಲು ನಾನು ಅಲ್ಲಿರಬೇಕಿತೆ ಎಂದು ಪತ್ರಕರ್ತರಿಗೆ ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೇಕೆ ಅಲ್ಲಿರಬೇಕಿತ್ತು ಅಧಿವೇಶನದ ಮೊದಲ ವಾರದ ಸಾಧನೆ ಏನು? ಮೊದಲ ಐದು ದಿನ ಅಧಿವೇಶನ ನಡೆದ ರೀತಿ ನೋಡಿದರೆ ನಿಮ್ಮಗೆ ತಿಳಿಯುತ್ತದೆ. ರಾಜ್ಯದ ಯಾವುದಾದರು ಅಭಿವೃದ್ದಿ ವಿಷಯದ ಕುರಿತು ಚರ್ಚೆಯಾಗಿದೆಯಾ ಎಂದು ಪ್ರಶ್ನಿಸಿದ್ದಾರೆ. ನಾನು ಸದನಕ್ಕೆ ಗೈರು ಹಾಜರಾಗಿರುವ ಬಗ್ಗೆ ಸಭಾಧ್ಯಕ್ಷರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ಡಿಸೆಂಬರ್ 13ರಂದು ಪ್ರಾರಂಭವಾಗಿತ್ತು. ಕಲಾಪದ ಮೊದಲ ದಿನ ಹೆಚ್.ಡಿ.ಕೆ ನವದೆಹಲಿಯಲ್ಲಿ ತಮ್ಮ ತಂದೆ ಹೆಚ್.ಡಿ.ದೇವೇಗೌಡರ ಜೀವನಚರಿತ್ರೆ ಪುಸ್ತಕ ಬಿಡುಗಡೆ ಸಲುವಾಗಿ ದೆಹಲಿಗೆ ಹೋಗಿದ್ದರು.
ನಾನು ದೆಹಲಿಯಲ್ಲಿದ್ದಾಗ ಸದನದ ಕಾರ್ಯ ಕಲಾಪಗಳನ್ನು ಗಮನಿಸಿದ್ದೇನೆ. ಮಾಜಿ ಸ್ಪೀಕರ್ ಒಬ್ಬರು ಮಹಿಳೆಯರ ಬಗ್ಗೆ ಮಾಡಿರುವ ಟೀಕೆಗಳು ಹೊರ ಬಂದಿವೆ. ತನ್ನಗೆ ಯಾರು ಸರಿಸಾಟಿಯಿಲ್ಲ ಎಂದು ಮಾತನಾಡುವ ಅನುಭವಿ ರಾಜಕಾರಣಿಯ ದೊಡ್ಡ ಸಾಧನೆ ಇದು, ನಾನು ಸದನದಲ್ಲಿದಿದ್ದರೆ ವಿಷಯಗಳು ವಿಭಿನ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದವು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೆಸರನ್ನು ಪ್ರಸ್ತಾಪಿಸದೇ ವ್ಯಂಗವಾಡಿದ್ದಾರೆ.
ನಮ್ಮ ಸಂಸದೀಯ ವ್ಯವಸ್ಥೆ ಯಾವ ಮಟ್ಟದಲ್ಲಿದೆ ಮತ್ತದನ್ನು ರಾಜ್ಯದ ಈ ಮಹಾನ್ ನಾಯಕರು ನಾಶಪಡಿಸುವುದನ್ನು ನೋಡಲು ನಾನು ಅಲ್ಲಿರಬೇಕಿತೆ. ನಾನು ಡಿಸೆಂಬರ್ 20ರ ನಂತರ ಕಲಾಪದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ..