ಸದಾ ಅನ್ಯರ ತಪ್ಪು ಹುಡುಕುವ ಸಿದ್ದರಾಮಯ್ಯ ಅವರ ಸುತ್ತ ಪರಮ ಭ್ರಷ್ಟರೇ ತುಂಬಿದ್ದಾರೆ. ಗೋವಿಂದ ರಾಜ್, ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಡಾ.ಎಚ್.ಸಿ.ಮಹಾದೇವಪ್ಪ, ಕೆಂಪಯ್ಯ, ಜಮೀರ್ ಎಲ್ಲರೂ ತೆರಿಗೆ ಕಳ್ಳರು, ಪರಮ ಭ್ರಷ್ಟರು. ನಿಮ್ಮ ಸುತ್ತಲಿರುವ ಜನರಿಂದ ನೀವು ಎಂಥವರು ಎಂದು ನಿರ್ಧರಿಸಬಹುದಲ್ಲವೇ, ಸಿದ್ದರಾಮಯ್ಯ? ಎಂದು ರಾಜ್ಯ ಬಿಜೆಪಿ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಪ್ರಶ್ನಿಸಿತ್ತು. ಇದಕ್ಕೆ ಸಕ್ಕತ್ತಾಗೆ ಉತ್ತರಿಸಿರುವ ಎಚ್.ಸಿ ಮಹಾದೇವಪ್ಪ, ಜನ ಸಾಮಾನ್ಯರ ರಕ್ತ ಹೀರಿದವರು ಯಾರು? ಎಂಬ ಸಂಗತಿಯು ಎಲ್ಲರಿಗೂ ತಿಳಿದಿದೆ ಎಂದು ಪೇಸ್ ಬುಕ್ ನಲ್ಲಿ ಬರೆದು ಟಾಂಗ್ ನೀಡಿದ್ದಾರೆ.
ಈ ಕುರಿತು ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಎಚ್.ಸಿ ಮಹಾದೇವಪ್ಪ, ಉತ್ತಮ ಆಡಳಿತ ನೀಡಿ ಜನ ಸಾಮಾನ್ಯರಿಗೆ ನೆರವಾದವರು ಯಾರು, ಕರೋನಾ ಅವಧಿಯಲ್ಲೂ ಲೂಟಿ ಹೊಡೆದು ಜನ ಸಾಮಾನ್ಯರ ರಕ್ತ ಹೀರಿದವರು ಯಾರು? ಎಂಬ ಸಂಗತಿಯು ಎಲ್ಲರಿಗೂ ತಿಳಿದಿದೆ. ಸುಮ್ಮನೇ ಮಾತಾಡಿ ಏಕೆ ನಗೆಪಾಟಲಿಗೀಡಾಗುತ್ತೀರಿ? ಎಂದು ಹೇಳಿದ್ದಾರೆ.
ಮುಂದುವರೆದು, ತೆರಿಗೆ ಕಳ್ಳರು ಯಾರು? ಜೈಲು ಸೇರಿದವರು ಯಾರು ಮತ್ತು ಏಕೆ? ಎಂಬ ಸಂಗತಿಯನ್ನು ಅರ್ಥ ಮಾಡಿಕೊಳ್ಳದಿರುವಷ್ಟು ಯಾರೂ ದಡ್ಡರಲ್ಲ. ನಿಮ್ಮ ಕೆಲಸವು ರಾಜ್ಯದ ಜನರಿಗೆ ಕೆಲಸ ಮಾಡುವುದೇ ಹೊರತು, ಸಿದ್ದರಾಮಯ್ಯ ಅವರನ್ನು ಟೀಕಿಸುವುದಲ್ಲ ಎಂದು ಬಿಜೆಪಿಗೆ ಚಾಟಿ ಬೀಸಿದ್ದಾರೆ.