ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್ ಪಕ್ಷ ಹಾಗೂ ದೇಶದ ಆಸ್ತಿ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕಿದೆ. ಗಾಂಧಿ ಕುಟುಂಬದಿಂದ ದೇಶಕ್ಕಾಗಿ ಅಧಿಕಾರ ಹಾಗೂ ಪ್ರಾಣ ತ್ಯಾಗ. “ನ್ಯಾಷನಲ್ ಹೆರಾಲ್ಡ್ ಈ ದೇಶದ ಆಸ್ತಿ. ದ್ವೇಷ ರಾಜಕಾರಣ ಬಿಜೆಪಿ ಆಸ್ತಿ. ಸತ್ಯಕ್ಕೆ ಸಾವಿಲ್ಲ, ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ ಎಂಬುದಕ್ಕೆ ಮಂಗಳವಾರ ಬಂದ ನ್ಯಾಯಾಲಯದ ಆದೇಶವೇ ಸಾಕ್ಷಿ. ಸತ್ಯ ಮೇವ ಜಯತೆ, ಬಿಜೆಪಿಗಿಲ್ಲ ಘನತೆ. ನಮ್ಮನ್ನು ಪಿತೂರಿಯಿಂದ ಸೋಲಿಸಲು ಸಾಧ್ಯವಿಲ್ಲ, ದ್ವೇಷದಿಂದ ಕುಗ್ಗಿಸಲು ಸಾಧ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಬುಧವಾರ ನಡೆದ ಧರಣಿಯಲ್ಲಿ ಹಾಗೂ ನಂತರ ಮಾಧ್ಯಮಗಳ ಜೊತೆ ಕೆಪಿಸಿಸಿ ಅಧ್ಯಕ್ಷರೂ ಆದ ಶಿವಕುಮಾರ್ ಅವರು ಮಾತನಾಡಿದರು. “Justice for Congress, Face loss for BJP. End of BJP Conspiracy, Victory for Democracy. ಬಿಜೆಪಿ ಎಷ್ಟೇ ಪಿತೂರಿ ಮಾಡಿದರೂ ನಮಗೆ ನ್ಯಾಯ ಸಿಕ್ಕಿದೆ.

ಬಿಜೆಪಿ ಎಂದರೆ ಬುರುಡೆ ಜನತಾ ಪಕ್ಷವಾಗಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಜೈಲಿಗೆ ಹಾಕಲು ಪಿತೂರಿ ಮಾಡಲಾಗಿದೆ. ಈ ದ್ವೇಷ ರಾಜಕಾರಣ ಇಲ್ಲಿಗೆ ಕೊನೆಯಾಗಬೇಕು. ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಈ ಪ್ರತಿಭಟನೆ ಮುಂದುವರಿಯಲಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಜೊತೆ ನಿಂತು ಅವರ ಕೈ ಬಲಪಡಿಸೋಣ” ಎಂದು ಕರೆ ನೀಡಿದರು..

“ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದರು. ನಂತರ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನವನ್ನು ತಂದುಕೊಟ್ಟರು. ಅವರ ನೆನಪಿನಲ್ಲಿ ನಾವು ಈ ಸುವರ್ಣ ವಿಧಾನಸೌಧದ ಆವರಣದಲ್ಲಿ ಗಾಂಧೀಜಿ ಅವರ ಪ್ರತಿಮೆ ಮುಂದೆ ಧರಣಿ ಮಾಡುತ್ತಿದ್ದೇವೆ” ಎಂದರು.
ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕಿದೆ.
“ನಾನು ಸಂಪಾದನೆ ಮಾಡಿರುವ ಹಣವನ್ನು ನಾನು ಯಾರಿಗೆ ಬೇಕಾದರೂ ನೀಡಬಹುದು. ಕಾಂಗ್ರೆಸ್ ಪಕ್ಷಕ್ಕೆ ನೀಡುತ್ತೇನೆ. ನಮ್ಮ ಶಾಸಕರು ತಮ್ಮ ವೇತನದಲ್ಲಿ 25 ಸಾವಿರ ಹಣವನ್ನು ಕಾಂಗ್ರೆಸ್ ಕಚೇರಿ ನಿರ್ಮಾಣದ ನಿಧಿಗೆ ದೇಣಿಗೆ ನೀಡಿದ್ದಾರೆ. ಇವರು ದೇಣಿಗೆ ನೀಡಿದರು ಎಂಬ ಕಾರಣಕ್ಕೆ ನಾಳೆ ಇವರಿಗೆ ನೋಟೀಸ್ ನೀಡಲು ಆಗುತ್ತದೆಯೇ? ಇದೇ ರೀತಿ ನಾನು ನ್ಯಾಷನಲ್ ಹೆರಾಲ್ಡ್ ಸಂಸ್ಧೆಗೆ ದೇಣಿಗೆ ನೀಡಿದ್ದೆ. ಈಗ ಅವರು ಲೆಕ್ಕ ಕೇಳುತ್ತಿದ್ದಾರೆ. ಇ.ಡಿ ಸಂಸ್ಥೆ ನನ್ನ ವಿರುದ್ಧ ಪಿಎಂಎಲ್ಎ ಪ್ರಕರಣ ದಾಖಲಿಸಿತ್ತು. ನಂತರ ಸುಪ್ರೀಂ ಕೋರ್ಟ್ ಶಿವಕುಮಾರ್ ಮೇಲೆ ದಾಖಲಿಸಿರುವ ಈ ಪ್ರಕರಣ ಸರಿಯಿಲ್ಲ ಎಂದು ವಜಾ ಮಾಡಿದರು. ಅ ರೀತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮೇಲೆ ಸುಳ್ಳು ಕೇಸ ದಾಖಲಿಸಿದ್ದಾರೆ. ಈ ಪ್ರಕರಣ ಸರಿಯಿಲ್ಲ ಎಂದು ನ್ಯಾಯಾಲಯ ತಿಳಿಸಿದೆ” ಎಂದರು.

“ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ಭಾಷಣ ಮಾಡಿದ್ದಕ್ಕೆ ಅವರ ಸಂಸತ್ ಸದಸ್ಯ ಸ್ಥಾನದಿಂದ ಅವರನ್ನು ವಜಾ ಮಾಡಿದರಲ್ಲಾ ಈ ದೇಶದ ಸಂವಿಧಾನ, ನ್ಯಾಯಾಂಗ ವ್ಯವಸ್ಥೆಯನ್ನು ಈ ರೀತಿ ದುರುಪಯೋಗ ಮಾಡಿದ್ದು ಎಲ್ಲಾದರೂ ಉಂಟೆ? ನಂತರ ಆ ಪ್ರಕರಣಕ್ಕೆ ತಡೆಯಾಜ್ಞೆ ತಂದು ಮತ್ತೆ ಸಂಸತ್ ಸದಸ್ಯರಾಗಿ ಆಯ್ಕೆಯಾಗಿ ಲೋಕಸಭೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಗಾಂಧಿಜಿ ಅವರು ಕೊಟ್ಟ ಆದರ್ಶ, ಮಾರ್ಗದರ್ಶನ ಪಾಲನೆ ಮಾಡಿಕೊಂಡು ಬರುತ್ತಿದ್ದೇವೆ. ಕಾಂಗ್ರೆಸ ಪಕ್ಷ ಈ ದೇಶಕ್ಕೆ ರಾಷ್ಟ್ರಗೀತೆ, ರಾಷ್ಟ್ರಧ್ವಜ ನೀಡಿದೆ” ಎಂದು ಹೇಳಿದರು.
ಗಾಂಧಿ ಕುಟುಂಬದಿಂದ ದೇಶಕ್ಕಾಗಿ ಅಧಿಕಾರ ಹಾಗೂ ಪ್ರಾಣ ತ್ಯಾಗ

“ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ದೇಶದ ಪ್ರಧಾನಮಂತ್ರಿಯಾಗಬಹುದಾಗಿತ್ತು. ಆದರೆ ದೇಶಕ್ಕೆ ಆರ್ಥಿಕ ತಜ್ಞರ ನಾಯಕತ್ವ ಅಗತ್ಯವಿದೆ ಎಂದು ಮನಮೋಹನ್ ಸಿಂಗ್ ಅವರಿಗೆ ಆ ಹುದ್ದೆ ತ್ಯಾಗ ಮಾಡಿದರು. ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ತಮ್ಮ ಪ್ರಾಣ ತ್ಯಾಗ ಮಾಡಿದರು. ಹೀಗೆ ಗಾಂಧಿ ಕುಟುಂಬ ದೇಶಕ್ಕಾಗಿ ಅಧಿಕಾರ ತ್ಯಾಗ, ಪ್ರಾಣ ತ್ಯಾಗ ಮಾಡಿದ್ದಾರೆ. ನರೇಗಾ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಈಗ ನಾವು ಮಾತನಾಡುವುದಿಲ್ಲ. ಇದಕ್ಕೆ ಪ್ರತ್ಯೇಕವಾಗಿ ಕಾರ್ಯಕ್ರಮ ರೂಪಿಸುತ್ತೇವೆ. ಗಾಂಧೀಜಿ ಅವರ ಹೆಸರಿನಲ್ಲಿ ಬಡವರಿಗೆ ಉದ್ಯೋಗ ನೀಡುವ ಕಾನೂನನ್ನು ಕಾಂಗ್ರೆಸ್ ತಂದಿತ್ತು. ಅದನ್ನು ಸಮಾಧಿ ಮಾಡಲು ಮುಂದಾಗಿದ್ದಾರೆ” ಎಂದು ಕಿಡಿಕಾರಿದರು.







