ಕಾಂಗ್ರೆಸ್ ವಯಸ್ಸಾದ ಪಕ್ಷ ಅದನ್ನು ವಿಸರ್ಜಿಸಬೇಕು ಎಂದು ಬೊಮ್ಮಾಯಿ ಹೇಳಿದ್ದಾರೆ. ಅವರಿಗೆ ತಿಳಿಸಬಯಸುತ್ತೇನೆ. ಪಕ್ಷಗಳು ಸಿಂಬಲ್ ಮೇಲೆ ಮಾತ್ರ ನಿಂತಿರುವುದಿಲ್ಲ. ಸಿದ್ಧಾಂತಗಳ ಮೇಲೆ ನಿಂತಿರುತ್ತವೆ. ಬಿಜೆಪಿಯವರ ಸಿದ್ಧಾಂತ ಯಾವುದು? ಮನುವಾದ ಅಲ್ಲವೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಸಿದ್ಧಾಂತವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ನಮ್ಮ ಸಂವಿಧಾನವು ಸಂಪೂರ್ಣ ಅಳಿಸಿ ಹಾಕಿದೆ. ಸಮಾನತೆ, ಭ್ರಾತೃತ್ವ, ನ್ಯಾಯ, ಸಾಮಾಜಿಕ ನ್ಯಾಯ, ಸರ್ವೋದಯ ತತ್ವ ಮುಂತಾದವುಗಳು ನಮ್ಮ ಸಂವಿಧಾನದ ಪ್ರಮುಖ ಆಶಯಗಳು. ಕನಿಷ್ಠ ಎರಡೂವರೆ ಸಾವಿರ ವರ್ಷಗಳಷ್ಟು ಓಬೀರಾಯನ ಕಾಲದ ಮನುವಾದವನ್ನು ಅಳವಡಿಸಿಕೊಂಡ ಬಿಜೆಪಿಯನ್ನು ವಿಸರ್ಜಿಸಬೇಕೋ, ಸಾಮಾಜಿಕ ನ್ಯಾಯವನ್ನು ಸಿದ್ದಾಂತವಾಗಿಸಿಕೊಂಡ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕೊ ಎಂದು ಬೊಮ್ಮಾಯಿಯವರೇ ಹೇಳಲಿ ಎಂದಿದ್ದಾರೆ.
ಈ ಕಾಲಕ್ಕೆ ಹೊಂದಿಕೆಯಾಗದ ಪಳಿಯುಳಿಕೆಯಂಥ ಸಿದ್ಧಾಂತವನ್ನು ಹೊತ್ತುಕೊಂಡು ಓಡಾಡುತ್ತಿರುವ ಬಿಜೆಪಿಯನ್ನು ವಿಸರ್ಜನೆ ಮಾಡಬೇಕೆ ಹೊರತು ಯುಗಧರ್ಮದ ಜೊತೆ ಹೆಜ್ಜೆ ಹಾಕುತ್ತಿರುವ ಕಾಂಗ್ರೆಸ್ ಪಕ್ಷವನ್ನಲ್ಲ ಎಂದ ಹೇಳಿದ್ಧಾರೆ.
ಬಾಬಾ ಸಾಹೇಬರು ಮನು ಸಿದ್ಧಾಂತವನ್ನು ತಿರಸ್ಕರಿಸಿ ಬೌದ್ಧರಾಗಿ ಪರಿನಿಬ್ಬಾಣಗೊಂಡ ಪವಿತ್ರ ದಿನ ಇಂದು. ಅವರು ಯಾಕೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಎಂದು ಇತಿಹಾಸದ ಪುಟಗಳನ್ನು ತಿರುವಿ ನೋಡಿ. ಸತ್ಯ ನಿಮಗೆ ತಿಳಿಯುತ್ತದೆ ಎಂದಿದ್ದಾರೆ.

ನೀವು ಕೂಡ ಮನುಷ್ಯ ವಿರೋಧಿಯಾದ ಮನು ಸಿದ್ಧಾಂತವನ್ನು ತೊರೆದು ಹೊರ ಬನ್ನಿ ಎಂದು ತಿಳಿಸಬಯಸುತ್ತೇನೆ. ಕನಿಷ್ಟ ಪಕ್ಷ ಸುಳ್ಳು ಹೇಳುವುದನ್ನು ನಿಲ್ಲಿಸಿ; ಕಳಬೇಡ, ಕೊಲಬೇಡ, ಹುಸಿಯ ನಡಿಯಲು ಬೇಡ ಎಂದ ಬಸವಣ್ಣನವರ ತತ್ವವನ್ನು ಹಾಗೂ ಬಾಬಾ ಸಾಹೇಬರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಆಗ್ರಹಿಸುತ್ತೇನೆ ಎಂದಿ ಹೇಳಿದ್ದಾರೆ.