ಮೈಸೂರು : ರಾಜ್ಯದಲ್ಲಿ ಯದ್ವಾತದ್ವಾ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಈ ಮೂಲಕ ರಾಜ್ಯದ ಜನರಿಗೆ ಸರ್ಕಾರ ಕರೆಂಟ್ ಶಾಕ್ ನೀಡಿದೆ.
ಇದರ ವಿರುದ್ಧ ಜೂನ್ 22 ರಂದು ಕೈಗಾರಿಕೆಗಳ ಸಂಘದಿಂದ ಕರ್ನಾಟಕ ಬಂದ್ ಗೂ ಕರೆ ನೀಡಲಾಗಿದೆ ಇದಕ್ಕೆ ಎಲ್ಲರೂ ಬೆಂಬಲ ಸೂಚಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ಯಾವುದೇ ಕಾರಣಕ್ಕೂ ವಿದ್ಯುತ್ ದರ ಕಡಿಮೆ ಮಾಡಲ್ಲ ಎಂದು ಹೇಳುತ್ತಿದ್ದಾರೆ.
ಅಂದರೆ ಇಂಡಸ್ಟ್ರೀಸ್ ಮುಚ್ಚಿಹೋಗಲಿ ಎಂಬ ಇರಾದೆ ಸರ್ಕಾರಕ್ಕೆ ಇರಬಹುದು. ನಿಮ್ಮ ಬಿಟ್ಟಿ ಭಾಗ್ಯಗಳಿಗೆ ದುಡ್ಡು ಎಲ್ಲಿಂದ ಬರಬೇಕು.
ಇಂಡಸ್ಟ್ರೀಸ್ ಗೆ ಬರೆ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ನಿಲುವನ್ನು ನಾವು ಖಂಡಿಸುತ್ತೇವೆ. ರಾಜ್ಯ ಸರ್ಕಾರದ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಗಂಡನ ದರೋಡೆ ಮಾಡಿ ಹೆಂಡತಿಗೆ ಕೊಡುವ ಕೆಲಸ : ಗಂಡನ ದರೋಡೆ ಮಾಡಿ ಹೆಂಡತಿಗೆ ಕೊಡುವ ಕೆಲಸ ಮಾಡ್ತಾ ಇದ್ದಾರೆ ಎಂದು ಗೃಹಲಕ್ಷ್ಮಿ ಯೋಜನೆ ಕುರಿತು ಸಂಸದ ಪ್ರತಾಪ್ ಸಿಂಹ ಟೀಕೆಮಾಡಿದ್ದಾರೆ.
ಗಂಡನ ಜೇಬಿಗೆ ಕತ್ತರಿಹಾಕಿ ಹೆಂಡತಿಗೆ ಮಾಸಿಕ ಎರಡು ಸಾವಿರ ಕೊಡಲು ಹೊರಟಿದ್ದಾರೆ. ಅದು ಜನರಿಗೆ ಈಗ ಅರ್ಥ ಆಗ್ತಿದೆ .
ಮದ್ಯದ ಬೆಲೆ ಏರಿಕೆ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಿಟ್ಟಿ ಭಾಗ್ಯಗಳ ಯೋಜನೆ ಜಾರಿಗೆ ಮುಂದಾಗಿದ್ದಾರೆ. ಇದು ದೋಖಾ ಸರ್ಕಾರ ಎಂಬುದು ಜನರಿಗೆ ಗೊತ್ತಾಗುತ್ತಿದೆ.

ಸಿದ್ದರಾಮಯ್ಯ ಮೊದಲ ಬಾರಿ ಸತ್ಯ ಹೇಳಿದ್ದಾರೆ ; ಮೋದಿ ಸರ್ಕಾರ 5 ಕೆಜಿ ಉಚಿತ ಅಕ್ಕಿ ಕೊಡುತ್ತಿದೆ ಎಂಬ ಸತ್ಯವನ್ನು ಈಗ ಹೇಳಿದ್ದಾರೆ. ಅದಕ್ಕಾಗಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.
ಚುನಾವಣೆ ಸಂದರ್ಭದಲ್ಲಿ 10 ಕೆಜಿ ಅಕ್ಕಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದೀರಿ. ಕೇಂದ್ರ ಸರ್ಕಾರದ 5 ಕೆಜಿ ಜೊತೆಗೆ ನಿಮ್ಮ 10 ಕೆಜಿ ಸೇರಿಸಿ ಕೊಡಬೇಕು ತಾನೆ?.
ಕೇಂದ್ರ ಸರ್ಕಾರದ ಕೇವಲ 1 ಕೆಜಿಗೆ 3 ರೂ ನಂತೆ 5 ಕೆಜಿ ಅಕ್ಕಿ ಕೊಡುತ್ತಿದ್ದರು. ಅದಕ್ಕೆ ತಮ್ಮ ಲೇಬಲ್ ಹಾಕೊಂಡು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡ್ತಿದ್ರೀ. ಮೋದಿಯ ಅಕ್ಕಿ ಸಿದ್ದರಾಮಯ್ಯನ ಜಾತ್ರೆ ಅಂತ ನೀವು ಮಾಡ್ತಾ ಇದ್ರೀ. ನೀವು ಹಣಕಾಸು ಮಂತ್ರಿಯಾಗಿ, ಎರಡು ಬಾರಿ ಉಪ ಮುಖ್ಯಮಂತ್ರಿಗಳಾಗಿ ಮುಖ್ಯಮಂತ್ರಿಗಳಾಗಿ ಇದೆಲ್ಲ ಗೊತ್ತಿಲ್ಲವೇ? ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಅಂತ ಆರೋಪ ಮಾಡುವ ಬದಲಿಗೆ ಕೆಜಿಗೆ 34 ರೂ ನಂತೆ 10 ಕೆಜಿಗೆ 340 ರೂನ ನೇರವಾಗಿ ಅವರ ಅಕೌಂಟಿಗೆ ಹಾಕಿ. ಇಲ್ಲಾ ಅಂದ್ರೆ ಓಪನ್ ಮಾರುಕಟ್ಟೆಯಲ್ಲೇ ಅಕ್ಕಿ ಖರೀದಿ ಮಾಡಿ ಕೊಡಿ ಎಂದು ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಬಗ್ಗೆ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.

