ನಿನ್ನೆಯಷ್ಟೇ ಹಾಸನಾಂಬೆ ದೇವಸ್ಥಾನದ (Hasanambe temple) ಗರ್ಭ ಗುಡಿಯ ಬಾಗಿಲನ್ನು ಶಾಸ್ತೋಕ್ತವಾಗಿ ಮುಚ್ಚಲಾಗಿದ್ದು, ಇಂದು ದೇವಾಲಯದ ಹುಂಡಿ ಎಣಿಕೆ ಕಾರ್ಯ ಆರಂಭವಾಗಿದೆ. ಹಾಸನಾಂಬೆ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ 500 ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಹುಂಡಿ ಎಣಿಕೆ ಕಾರ್ಯ ನಡೆಸುತ್ತಿದ್ದಾರೆ.

ಇನ್ನು ಸಿಬ್ಬಂದಿ ಜೊತೆಗೆ ಹುಂಡಿ ಎಣಿಕೆ ಕಾರ್ಯದಲ್ಲಿ ಬ್ಯಾಂಕ್‌ನ ಸಿಬ್ಬಂದಿ ಕೂಡ ಭಾಗಿಯಾಗಿದ್ದಾರೆ. ಈ ವರ್ಷ ಅಕ್ಟೋಬರ್ 24 ರಿಂದ ನವೆಂಬರ್ 3 ರವರೆಗೆ ನಡೆದಿದ್ದ ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಮಾರಾಟದಿಂದ ಕೋಟಿ ಕೋಟಿ ಆದಾಯ ಬಂದಿದೆ.

ಹಾಸನಾಂಬೆ ದೇವಾಲಯದಲ್ಲಿ ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಮಾರಾಟದಿಂದ 9 ಕೋಟಿ 67 ಲಕ್ಷದ 27 ಸಾವಿರದ 180 ರೂಪಾಯಿ ದಾಖಲೆಯ ಆದಾಯ ಸಂಗ್ರಹವಾಗಿದೆ. ಸದ್ಯ ಇದೀಗ ನಡೆಯುತ್ತಿರುವ ಹುಂಡಿ ಎಣಿಕೆ ಕಾರ್ಯ ಹಾಸನಾಂಬೆಯ ಇತಿಹಾಸದಲ್ಲಿಯೇ ದಾಖಲೆ ಹಣ ಸಂಗ್ರಹವಾಗುವ ಸಾಧ್ಯತೆಗಳಿವೆ.