ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಕಾನೂನು ಚರ್ಚೆ ಮುನ್ನೆಲೆಗೆ ಬಂದಿದೆ. ಸುಪ್ರೀಂಕೋರ್ಟ್ 2019ರಲ್ಲಿ ನೀಡಿದ್ದ ಐತಿಹಾಸಿಕ ತೀರ್ಪಿನಲ್ಲಿ ಉಲ್ಲೇಖಿಸಿದ ನಿಖರವಾದ ಜಾಗದಲ್ಲಿಯೇ ರಾಮಮಂದಿರ ನಿರ್ಮಾಣವಾಗಿದೆಯೇ ಎಂಬುದನ್ನು ಪರಿಶೀಲಿಸಲು ಸಮಿತಿ ಅಥವಾ ಆಯೋಗ ರಚಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ.
2019ರ ನವೆಂಬರ್ 9ರಂದು ಸುಪ್ರೀಂಕೋರ್ಟ್ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಪ್ರಕಟಿಸಿತ್ತು. ವಿವಾದಿತ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ್ದ ನ್ಯಾಯಾಲಯ, ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಮಂಡಳಿಗೆ ಅಯೋಧ್ಯೆಯಲ್ಲೇ ಐದು ಎಕರೆ ಪರ್ಯಾಯ ಜಮೀನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಇದೀಗ ಆ ತೀರ್ಪಿನಲ್ಲಿ ಉಲ್ಲೇಖಿಸಲಾದ ಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಮೀಕ್ಷೆ ನಡೆಸಬೇಕು ಎಂದು ಶ್ರೀ ರಾಮ ಜನ್ಮಭೂಮಿ ಕೇಸ್ ಟ್ರಸ್ಟ್ ಅರ್ಜಿಯಲ್ಲಿ ಮನವಿ ಮಾಡಿದೆ. ಈ ಸಂಬಂಧ ಸಮಿತಿ ಅಥವಾ ಆಯೋಗ ರಚಿಸಿ ಸ್ಥಳ ಪರಿಶೀಲನೆ ನಡೆಸುವಂತೆ ಕೋರಲಾಗಿದೆ.
ಇನ್ನೊಂದೆಡೆ, ಅಯೋಧ್ಯೆಯ ರಾಮಮಂದಿರ ಸಂಕೀರ್ಣದ ನಿರ್ಮಾಣ ಕಾಮಗಾರಿಗಳೂ ಅಂತಿಮ ಹಂತ ತಲುಪಿವೆ. ಒಟ್ಟು 150 ಕಾಮಗಾರಿಗಳ ಪೈಕಿ 148 ಕಾಮಗಾರಿಗಳು ಪೂರ್ಣಗೊಂಡಿದ್ದು, ಅವುಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದೆ ಎಂದು ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
ನಿರ್ಮಾಣ ಸಮಿತಿಯ ಸಭೆಯ ಬಳಿಕ ಮಾತನಾಡಿದ ಅವರು, ದೇವಾಲಯದ ಹೊರ ಆವರಣದ ಪಾರ್ಕೋಟಾ ನಿರ್ಮಾಣ ಸೇರಿದಂತೆ ಎರಡು ಕಾಮಗಾರಿಗಳು ಬಾಕಿ ಉಳಿದಿವೆ ಎಂದು ಮಾಹಿತಿ ನೀಡಿದ್ದಾರೆ.ಬಾಕಿ ಉಳಿದಿರುವ ಕಾಮಗಾರಿಗಳನ್ನೂ ನವೆಂಬರ್ 15ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.ಹೀಗೆ ಒಂದೆಡೆ ರಾಮಮಂದಿರ ಸಂಕೀರ್ಣದ ನಿರ್ಮಾಣ ಕಾರ್ಯಗಳು ಪೂರ್ಣಗೊಳ್ಳುವ ಹಂತದಲ್ಲಿದ್ದರೆ, ಮತ್ತೊಂದೆಡೆ ಮಂದಿರ ನಿರ್ಮಾಣವಾಗಿರುವ ಸ್ಥಳದ ಕುರಿತು ಸಲ್ಲಿಕೆಯಾಗಿರುವ ಅರ್ಜಿ ಕಾನೂನು ವಲಯದಲ್ಲಿ ಗಮನ ಸೆಳೆದಿದೆ.






