ಶಿಕಾರಿಪುರ ನಗರಸಭೆಯಿಂದ ವಿಧಾನಸಭೆವರೆಗೆ 40 ವರ್ಷ ರಾಜಕೀಯ ಮಾಡಿ, ಉತ್ತರ ಭಾರತೀಯರ ಪಕ್ಷ, ಬ್ರಾಹ್ಮಣ-ಬನಿಯಾ-ಮಾರ್ವಾಡಿಗಳ ಪಕ್ಷ ಎನಿಸಿಕೊಂಡಿದ್ದ ಭಾರತೀಯ ಜನತಾ ಪಕ್ಷಕ್ಕೆ ಭದ್ರ ಬುನಾದಿ ಹಾಕಿಯೂ ಅವಕಾಶ ಸಿಕ್ಕಾಗ ಕಾಡಿ ಬೇಡಿ ಮುಖ್ಯಮಂತ್ರಿ ಆದವರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ಅವರು ಒಂದಲ್ಲ ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ರಾಜಕೀಯ ಅನಿಶ್ಚಿತತೆ, ಅಸುರಕ್ಷತೆಗಳು ಅವರನ್ನು ಬಿಡಲಿಲ್ಲ. ಈಗಲೂ ಅದೇ ಅತಂತ್ರ ಸ್ಥಿತಿಯೇ ಮುಂದುವರೆದಿದೆ. ಮುಖ್ಯಮಂತ್ರಿ ಆದ ಮರುಗಳಿಗೆಯಲ್ಲೇ ಅವರನ್ನು ಕೆಳಗಿಳಿಸುವ ಹುನ್ನಾರವೂ ಹುಟ್ಟುಕೊಂಡಿದೆ. ಹೀಗೆ ಅವರನ್ನು ಸದಾಕಾಲ ಕಾಡಿದ ಪಾತ್ರಗಳು ಬದಲಾಗಿವೆಯಷ್ಟೇ. ಹಿಂದೆ ದಿವಂಗತ ಅನಂತಕುಮಾರ್, ಈಗ ಬಿ.ಎಲ್. ಸಂತೋಷ್.

ಯಡಿಯೂರಪ್ಪ ಬಲಿಪಶು!
ಯಡಿಯೂರಪ್ಪ ಶ್ರಮಜೀವಿಯಾದ ಕಾರಣ, ಸ್ವಸಾಮರ್ಥ್ಯ ಹೊಂದಿರುವ ಕಾರಣಕ್ಕೆ ದೆಹಲಿ ನಾಯಕರ ಸಂಪರ್ಕ-ಸಂಬಂಧ ಇಲ್ಲದಿದ್ದರೂ, ಹಿಂದಿ-ಇಂಗ್ಲೀಷ್ ಭಾಷೆ ಗೊತ್ತಿಲ್ಲದಿದ್ದರೂ ಎಂದು ಕೂಡ ಅನಂತಕುಮಾರ್ ಅಥವಾ ಬಿ.ಎಲ್. ಸಂತೋಷ್ ಮೇಲೆ ಅವಲಂಭಿತರಾದವರಲ್ಲ. ಅಷ್ಟೇ ಅಲ್ಲ ಬಿಜೆಪಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂಬ ಅನಂತಕುಮಾರ-ಸಂತೋಷ್ ಹಪಹಪಿತನಕ್ಕೆ ಸೊಪ್ಪು ಹಾಕಿದವರಲ್ಲ. ಸದಾ ತನಗೆ ಸರಿ ಎನಿಸಿದ್ದನ್ನೇ ಮಾಡಿದರು. ಮಾಡಿದ್ದನ್ನು ಅರಗಿಸಿಕೊಂಡರು. ಇದಕ್ಕೆ ಉದಾಹರಣೆ ಅವರು ಬಿಜೆಪಿ ಬಿಟ್ಟು ಕೆಜಿಪಿ ಕಟ್ಟುವ ವೇಳೆ ಅಂದಿನ ಬಿಜೆಪಿಯ ಅಗ್ರ ನಾಯಕ ಲಾಲಕೃಷ್ಣ ಅಡ್ವಾಣಿ ಬಗ್ಗೆಯೇ ಕಟುವಾಗಿ ಮಾತನಾಡಿದ್ದರು. ಕೆಜೆಪಿ ಕಟ್ಟಿ ಬಿಜೆಪಿಯನ್ನು ಸೋಲಿಸಿದರು. ಕೆಜೆಪಿ ಗೆಲ್ಲದೇ ಇದ್ದರೂ ಪರವಾಗಿಲ್ಲ, ಬಿಜೆಪಿ ಸೋಲಿಸಿದ ಸಮಾಧಾನ ಇದೆ ಎಂದು ಬಹಿರಂಗವಾಗಿ ಹೇಳಿದರು. ಇಷ್ಟೆಲ್ಲಾ ಆದ ಮೇಲೆ ಮತ್ತೆ ಬಿಜೆಪಿ ಸೇರುವಲ್ಲೂ ಯಶಸ್ವಿಯಾದರು. ರಾಜ್ಯಾಧ್ಯಕ್ಷ ಪಟ್ಟವನ್ನು ಧಕ್ಕಿಸಿಕೊಂಡರು. ಅಂತಿಮವಾಗಿ ಸಂಖ್ಯಾಬಲ ಇಲ್ಲದಿದ್ದರೂ ಹೈಕಮಾಂಡ್ ಅನುಮತಿ ನೀಡದಿದ್ದರೂ ಆಪರೇಷನ್ ಕಮಲ ಮಾಡಿ ಮುಖ್ಯಮಂತ್ರಿ ಆಗುವುದರಲ್ಲೂ ಯಶಸ್ವಿಯಾದರು.
ಯಡಿಯೂರಪ್ಪ ಈ ಕಲ್ಲು-ಮುಳ್ಳಿನ ಹಾದಿಯನ್ನು ಸಮರ್ಥವಾಗಿ ಪೂರೈಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದು ಅವರಿಗಿದ್ದ ಜಾತಿಯ ಬಲ. ಇದು ಕ್ರಮೇಣ ಹೇಗಾಯಿತು ಎಂದರೆ ರಾಜ್ಯದಲ್ಲಿ ‘ಲಿಂಗಾಯತ ಮತಗಳಿಂದ ಮಾತ್ರ ಬಿಜೆಪಿ’ ಎನ್ನುವಂತಾಯಿತು. ಈ ‘ಅವಲಂಬನೆ ತಪ್ಪಿಸಬೇಕು’ ಎಂಬುದು ರಾಜಕೀಯ ಪಕ್ಷವಾಗಿ ಯೋಚಿಸುವುದು ಸೂಕ್ತವಾದ ಕ್ರಮವೇ. ಆದರೆ ಯಡಿಯೂರಪ್ಪ ವಿಚಾರದಲ್ಲಿ ಬೇರೆಯದೇ ರೀತಿ ಆಗುತ್ತಿದೆ.

ಈ ವಿಷಯದಲ್ಲಿ ಅನಂತಕುಮಾರ್ ಧೋರಣೆ ‘ಲಿಂಗಾಯತ ಮತಗಳು ಬೇಕು, ಯಡಿಯೂರಪ್ಪ ಬೇಡ’ ಎಂಬಂತಿತ್ತು. ಸದ್ಯ ರಾಜ್ಯ ಬಿಜೆಪಿಯನ್ನು ನಿಯಂತ್ರಿಸುತ್ತಿರುವ ಬಿ.ಎಲ್. ಸಂತೋಷ್ ಲೆಕ್ಕಾಚಾರ ‘ಯಡಿಯೂರಪ್ಪ ಅವರನ್ನು ಅವರದೇ ಸಮುದಾಯದಲ್ಲಿ ಖಳನಾಯಕನ್ನಾಗಿ ಬಿಂಬಿಸಿ, ನಗಣ್ಯ ಮಾಡಿ, ಕಡೆಗೆ ಲಿಂಗಾಯತ ಮತಗಳು ಸಾರಾಸಗಟಾಗಿ ಬಿಜೆಪಿ ಬುಟ್ಟಿಗೆ ಬಂದು ಬೀಳುವಂತೆ ಮಾಡುವುದು’. ಸದ್ಯ ಸಂತೋಷ್ ಅವರ ಈ ‘ಸ್ಕ್ರಿಪ್ಟ್’ ಪ್ರಕಾರವೇ ರಾಜಕೀಯ ವಿದ್ಯಾಮಾನ ನಡೆಯುತ್ತಿರುವುದು.

ಮೊದಲನೆಯದಾಗಿ ಹಿಂದೆ ಸಮುದಾಯದವರೇ ಪ್ರಸ್ತಾಪಿಸಿದ್ದ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ‘ಧರ್ಮ ಹೊಡೆಯುವ ಪ್ರಯತ್ನ ಮಾಡಿದರು’ ಎಂಬ ಅಪಪ್ರಚಾರ ಮಾಡಲಾಯಿತು. ಆದರೆ ನಿಜ ಅರ್ಥದಲ್ಲಿ ಆರ್‌ಎಸ್‌ಎಸ್ ನಾಯಕರು ಮತ್ತು ಬಿ.ಎಲ್. ಸಂತೋಷ್ ಪಂಚಮಸಾಲಿಗಳನ್ನು ಎತ್ತಿಕಟ್ಟಿ ಲಿಂಗಾಯಿತರನ್ನು ಹೊಡೆದಿದ್ದಾರೆ. ಪಂಚಮಸಾಲಿಗಳನ್ನು ಹಿಂದುಳಿದ ಜಾತಿಗೆ ಸೇರಿಸುವುದು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ ಯಡಿಯೂರಪ್ಪ ವಿರುದ್ಧ ಪಂಚಮಸಾಲಿ ಶಾಸಕರು ಮತ್ತು ಮಠಾಧೀಶರನ್ನು ಪ್ರಚೋದಿಸಿದರು. ಈಗ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಧಾರವಾಡ ಪಶ್ಚಿಮ ಕ್ಷೇತ್ರದಾಚೆಗೆ ‘ಏನೇನೂ ಅಲ್ಲದ’ ಶಾಸಕ ಅರವಿಂದ ಬೆಲ್ಲದ ಅವರನ್ನು ಯಡಿಯೂರಪ್ಪ ವಿರುದ್ಧ ಅಖಾಡಕ್ಕಿಳಿಸಿದ್ದಾರೆ.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಅರವಿಂದ ಬೆಲ್ಲದ ಅವರನ್ನು ಮುಖ್ಯಮಂತ್ರಿ ಮಾಡಿದರೆ ಲಿಂಗಾಯತರ ಪೈಕಿ ಅತಿಹೆಚ್ಚು ಶಾಸಕರಿರುವ ಪಂಚಮಸಾಲಿಗಳು ವಿರೋಧಿಸುವುದಿಲ್ಲ, ಲಿಂಗಾಯತರು ವಿರೋಧಿಸುವುದಿಲ್ಲ, ಲಿಂಗಾಯತ ಮತಗಳು ಚದುರುವುದಿಲ್ಲ ಎಂಬುದು ಬಿ.ಎಲ್. ಸಂತೋಷ್ ಲೆಕ್ಕಾಚಾರ ಎನ್ನಲಾಗಿದೆ. ಇದರ ಭಾಗವಾಗಿ ಲಿಂಗಾಯತ ಸಮುದಾಯದ ಪ್ರಮುಖ ಮಠಾಧಿಪತಿಗಳಿಗೆ ತರಹೇವಾರಿ ಆಮಿಷಗಳನ್ನು ಒಡ್ಡಲಾಗಿದೆ. ಕೆಲವರಿಗೆ ಮುಂದೆ ‘ನಿಮಗೂ ಎಂಎಲ್ ಎ-ಎಂಪಿ ಟಿಕೆಟ್ ಕೊಡಲಾಗುವುದು’ ಎಂಬ ಭರವಸೆ ನೀಡಲಾಗಿದೆ. ಸದಾ ‘ಸಾಮ್ರಾಜ್ಯ ವಿಸ್ತರಣೆಯ ಹಪಹಪಿ ಇರುವ’ ಕೆಲ ಮಠಾಧೀಶರಿಗೆ ಮುಂದಿನ ಸರ್ಕಾರದಲ್ಲಿ ಅವರ ‘ಮಹತ್ಕಾರ್ಯಕ್ಕೆ’ ನೆರವು ನೀಡುವ ಆಸೆ ಹುಟ್ಟಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ‘ಹಿಂದು ಒಂದು’ ಎಂಬ ಮಂಕುಬೂದಿಯನ್ನು ಎರಚಲಾಗಿದೆ ಎನ್ನುತ್ತವೆ ಆರ್‌ಎಸ್‌ಎಸ್-ಬಿಜೆಪಿ ಮೂಲಗಳು.

ಯಡಿಯೂರಪ್ಪ ಅವರ ಹೆಸರು ಕೆಟ್ಟಿದೆ, ವಯಸ್ಸೂ ಆಗಿದೆ, ಪುತ್ರ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪವೂ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಪಕ್ಕಕ್ಕೆ ಸರಿಸಿದರೆ ಲಿಂಗಾಯತರಿಗೂ ‘ಕನ್ವಿನ್ಸ್’ ಆಗುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಬಿಟ್ಟರೆ ಲಿಂಗಾಯತರಿಗೂ ಬೇರೆ ಗತಿ ಇಲ್ಲ ಎಂಬ ಲೆಕ್ಕಾಚಾರ ಇದೆ. ಬಿಜೆಪಿಗೆ ಟೇಕನ್ ಫಾರ್ ಗ್ರಾಂಟೆಡ್ ಆಗಿದ್ದಾರಾ ಲಿಂಗಾಯತರು? ಎಂಬ ಪ್ರಶ್ನೆಗೆ ಉತ್ತರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಲಭಿಸಲಿದೆ.




