ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಬಜರಂಗ ದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ತನಿಖೆ ಕ್ಷಿಪ್ರವಾಗಿ ನಡೆಯುತ್ತಿದೆ. ಆದರೆ, ಈ ಮಧ್ಯೆ ತನಿಖಾಧಿಕಾರಿಗಳ ತಂಡಕ್ಕೆ ಹೊಸದೊಂದು ಸವಾಲು ಎದುರಾಗಿದ್ದು, ಕರಾವಳಿ ಭಾಗದಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವ ಫೇಸ್ಬುಕ್ ಪೇಜ್ ಹಿಂದಿನ ಕೈಗಳನ್ನು ಹುಡುಕಬೇಕಾದ ಅನಿವಾರ್ಯತೆ ಒದಗಿ ಬಂದಿದೆ.
ಈ ಹಿಂದೆಯೂ ರಾಜ್ಯದ ಕರಾವಳಿ ಭಾಗವಾದ ಮಂಗಳೂರು, ಉಡುಪಿಯಲ್ಲಿ ಯಾವುದೇ ಕೋಮುಗಲಭೆ ಉಂಟಾದಾಗ, ಮಂಗಳೂರು ಮುಸ್ಲಿಮ್ಸ್ ಎಂಬ ಪೇಜ್ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗುವ ಪೋಸ್ಟ್’ಗಳನ್ನು ಹಾಕುತ್ತಲೇ ಬಂದಿದೆ. ಈಗ ಹರ್ಷ ಕೊಲೆಯ ಸಂದರ್ಭದಲ್ಲೂ ಈ ಪೇಜ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಇಲಾಖೆಯ ಪ್ರಕಾರ ಈ ಪೇಜ್ ಹಿಂದಿರುವ ಕಾಣದ ಕೈಗಳನ್ನು ಬಂಧಿಸುವುದು ಹರ್ಷ ಕೊಲೆ ಕೇಸಿನ ಪ್ರಮುಖ ಬೆಳವಣಿಗೆಯಾಗಲಿದೆ.
ಸೂಕ್ಷ್ಮವಾಗಿ ಗಮನಿಸಿದರೆ, ಸುಮಾರು 2015ರಿಂದಲೂ ಮಂಗಳೂರು ಮುಸ್ಲಿಮ್ಸ್ ಪೇಜ್’ನಲ್ಲಿ ಹರ್ಷ ವಿರುದ್ದ ಪೋಸ್ಟ್’ಗಳನ್ನು ಹಾಕಲಾಗುತ್ತಿದೆ. ಪ್ರವಾದಿ ಮೊಹಮ್ಮದರನ್ನು ಹರ್ಷ ಅಪಮಾನಿಸಿದ್ದು ಅವನ ವಿರುದ್ದ ಕ್ರಮಿನಲ್ ಪ್ರಕರಣ ದಾಖಲಿಸಬೇಕು ಎಂದು ಪೋಸ್ಟ್ ಹಾಕಲಾಗಿತ್ತು. ಹರ್ಷ ಕೊಲೆಗೀಡಾದ ಆರು ದಿನಗಳ ಬಳಿಕ ಮತ್ತೆ ಹಳೆಯ ಪೋಸ್ಟ್’ನ ಸ್ಕ್ರೀನ್ ಶಾಟ್ ತೆಗೆದು ರಿಪೋಸ್ಟ್ ಮಾಡಲಾಗಿತ್ತು. ಮಾತ್ರವಲ್ಲದೇ, ಶಿವಮೊಗ್ಗದಲ್ಲಿ ಕೋಮು ಗಲಭೆ ಉಂಟುಮಾಡಲು ಬಿಜೆಪಿಯ ಸಚಿವರೇ ಹಣ ನೀಡಿ ಹರ್ಷನನ್ನು ಕೊಲೆಗೈದಿದ್ದಾರೆ ಎಂದು ಬರೆಯಲಾಗಿತ್ತು.
2019ರಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಕಾರಣಕ್ಕೆ ಕನ್ನಡದ ಸುದ್ದಿ ನಿರೂಪಕರಾದ ಅಜಿತ್ ಹನುಮಕ್ಕನವರ್’ಗೆ ಜೀವ ಬೆದರಿಕೆಯನ್ನೂ ಹಾಕಲಾಗಿತ್ತು.
ಹರ್ಷ ಕೊಲೆಯ ಬೆನ್ನಲ್ಲೇ ಈ ಎಲ್ಲಾ ಪೋಸ್ಟ್’ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಹಲವಾರು ಹಿಂದೂಪರ ಸಂಘಟನೆಗಳು ಮಂಗಳೂರು ಮುಸ್ಲಿಮ್ಸ್ ಪೇಜ್ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದವು.
ಫೆಬ್ರವರಿ 21ರಂದು ಮಂಗಳೂರು ಪೊಲೀಸರು ಈ ಪೇಜ್ ವಿರುದ್ದ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದರು.
ಬಹುತೇಕವಾಗಿ ಈ ಪೇಜ್ ಕುವೈತ್ ಅಥವಾ ಸೌದಿ ಅರೇಬಿಯಾದಿಂದ ನಿರ್ವಹಿಸಲ್ಪಡುವುದಾಗಿ ತಾಂತ್ರಿಕ ಸಾಕ್ಷ್ಯಾಧಾರಗಳು ತೋರಿಸುತ್ತಿದೆ. ಆದರೆ, ಈ ವಿಪಿಎನ್ ಎಂಬ ತಂತ್ರಜ್ಞಾನ ಬಳಸಿ ಈ ಪೇಜನ್ನು ಭಾರತದಿಂದಲೇ ನಿರ್ವಹಿಸಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಸಂದೇಹಿಸಿದ್ದಾರೆ.
ಹರ್ಷ ಕುರಿತು ಇತ್ತೀಚಿಗೆ ಪೋಸ್ಟ್ ಹಾಕಿರುವ ಪ್ರೊಫೈಲ್ ಹೊಸತಾಗಿದ್ದು, ಇದೇ ಹೆಸರಿನಲ್ಲಿ ಈ ಹಿಂದೆ ಇದ್ದ ಪ್ರೊಫೈಲ್ಗಳನ್ನು ಬ್ಯಾನ್ ಮಾಡಲಾಗಿತ್ತು.
2016ರಲ್ಲಿ ಮಂಗಳೂರಿನ ದುರ್ಗಾ ಪರಮೇಶ್ವರಿ ದೇವಸ್ಥಾನದ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ ಕಾರಣಕ್ಕೆ ಪ್ರಕರಣ ದಾಖಲಾಗಿತ್ತು. ಪ್ರೊಫೈಲನ್ನು ಬ್ಯಾಣ್ ಮಾಡಲು ಜಿಲ್ಲಾ ನ್ಯಾಯಾಲಯ ಸಮ್ಮತಿ ಸೂಚಿಸಿತ್ತು. ಆದರೆ, ಈ ಪೇಜ್’ನ ಅಡ್ಮಿನ್’ಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದರು.
ಕರಾವಳಿಯ ಆರ್ಎಸ್ಎಸ್ ಮುಖಂಡ ಹಾಗೂ ಕೋಮು ಪ್ರಚೋದನಕಾರಿ ಹೇಳಿಕೆ ನೀಡುವಲ್ಲಿ ನಿಸ್ಸೀಮರಾಗಿರುವ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ದವೂ 2017ರಲ್ಲಿ ಪೋಸ್ಟ್ ಹಾಕಲಾಗಿತ್ತು. ಈ ಕುರಿತಾಗಿ ಮಂಗಳೂರಿನ ಬಿಜೆಪಿ ಮುಖಂಡ ಕ್ಯಾ. ಬ್ರಿಜೇಶ್ ಚೌಟ ಅವರು ಪೊಲೀಸರಿಗೆ ದೂರು ದಾಖಲಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ.
ಹರ್ಷ ಕೊಲೆಯ ನಂತರ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇರಿಸಿದ್ದು, ಈಗಾಗಲೇ ಎರಡು ಪ್ರಕರಣಗಳನ್ನು ದಾಖಲಿಸಿ 17 ವರ್ಷದ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಹರ್ಷ ಕೊಲೆಯ ಬಳಿಕ ಇನ್ಸ್ಟಾಗ್ರಾಮ್ ಪೇಜ್’ನಲ್ಲಿ ಮುಸ್ಲೀಂ ಬಾವುಟ ಮತ್ತು ಹಿಂದೂ ದೇವಾಲಯ ಕುರಿತ ವೀಡಿಯೋ ಒಂದನ್ನು ಪೋಸ್ಟ್ ಮಾಡಿದ ಕಾರಣಕ್ಕಾಗಿ ಬಾಲಕನನ್ನು ಬಂಧಿಸಲಾಗಿದೆ. ಈತ ಯಾವುದೇ ಸಂಘಟನೆಗೆ ಸೇರಿಲ್ಲ ಎಂದು ಪೊಲೀಸರು ತನಿಖೆಯ ಬಳಿಕ ಸ್ಪಷ್ಟನೆ ನೀಡಿದ್ದಾರೆ.
ಆದರೆ, ಮಂಗಳುರು ಮುಸ್ಲೀಮ್ಸ್ ಎಂಬ ಪೇಜ್ ಕುರಿತು ಮಾತ್ರ ಹಲವು ವರ್ಷಗಳಿಂದ ತನಿಖೆ ನಡೆಸುತ್ತಿದ್ದರೂ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಪೇಜ್ ಹಿಂದಿನ ಶಕ್ತಿಗಳಿಗೂ, ಹರ್ಷ ಕೊಲೆಗೂ ಗಾಢವಾದ ಸಂಬಂಧವಿದೆ ಎಂದು ನಂಬಿರುವ ಪೊಲೀಸರು ಮುಂದೆ ಯಾವ ರೀತಿ ತನಿಖೆ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.