ಬಂಟ್ವಾಳ: ಕಾಲೇಜ್‌ಗೆ ಹೋಗಲೆಂದು ಬಸ್ ಹತ್ತಿದ ವಿದ್ಯಾರ್ಥಿನಿಗೆ ಪ್ರಯಾಣಿಕನಿಂದ ಕಿರುಕುಳ,ಪ್ರಶ್ನೆ ಮಾಡಿದ ವಿದ್ಯಾರ್ಥಿನಿಯನ್ನೇ ಬೆದರಿಸಿದ ಕಿರಾತಕನ ಚಳಿ ಬಿಡಿಸಿದ ಪೊಲೀಸರು..!
ಬೆಳಗ್ಗೆ ಕಾಲೇಜ್‌ಗೆಂದು ಹೋಗುತ್ತಿದ್ದ ವೇಳೆ ವಿದ್ಯಾರ್ಥಿನಿಯೋರ್ವಳಿಗೆ ಬಸ್ ಹತ್ತುವಾಗ ಅಪರಿಚಿತ ಪ್ರಯಾಣಿಕನೊರ್ವ ಕಿರುಕುಳ ನೀಡಿದ ಘಟನೆ ನಡೆದಿದೆ.
ವಿದ್ಯಾರ್ಥಿನಿ ಬಂಟ್ವಾಳದ ಅಗ್ರಾರ್ ನಿವಾಸಿಯಾಗಿದ್ದು, ಮಂಗಳೂರು ಕಾಲೇಜಿಗೆ ತೆರಳುವ ಸಮಯದಲ್ಲಿ ಬಿಸಿರೋಡು ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.ವಿದ್ಯಾರ್ಥಿನಿ ಕಾಲೇಜಿಗೆ ಹೋಗುವ ಉದ್ದೇಶದಿಂದ ಕೆ.ಎಸ್.ಆರ್.ಟಿ.ಸಿ ಬಸ್ ಹತ್ತುವ ಸಮಯದಲ್ಲಿ ಹಿಂಬದಿಯಿಂದ ಇದ್ದ ಅಪರಿಚಿತ ವ್ಯಕ್ತಿ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಆತ ವಿದ್ಯಾರ್ಥಿನಿಗೆ ಬೆದರಿಸಿದ್ದಲ್ಲದೇ, ಮುಂದೆಯೇ ಇದೇ ರೀತಿ ಕಿರುಕುಳ ನೀಡುತ್ತೇನೆ ಏನು ಮಾಡುತ್ತಿಯಾ ನಾನು ನೋಡ್ತೀನಿ ಎಂದು ಹೆದರಿಸಿದ್ದಾನೆ ಎಂದು ಹೇಳಲಾಗಿದೆ.
ಈ ಬಗ್ಗೆ ನಿರ್ವಾಹಕನಿಗೆ ವಿದ್ಯಾರ್ಥಿನಿ ದೂರು ನೀಡಿದ್ದು, ಪ್ರಯಾಣಿಕ ಹಾಗೂ ನಿರ್ವಾಹಕನ ನಡುವೆ ಮಾತಿಗೆ ಮಾತು ಬೆಳೆದಿದೆ ಎನ್ನಲಾಗಿದೆ.ಬಸ್ ನಲ್ಲಿ ನಡೆದ ಘಟನೆ ಬಗ್ಗೆ ಸ್ಥಳದಿಂದಲೇ ವಿದ್ಯಾರ್ಥಿನಿ ಪೋನ್ ಮಾಡಿ ಮನೆಯವರಿಗೆ ತಿಳಿಸಿದ್ದಾಳೆ.ಪೋಷಕರು ಮತ್ತು ವಿದ್ಯಾರ್ಥಿನಿ ಕೂಡಲೇ ಪೋಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ದೂರು ನೀಡಿದ ಕೂಡಲೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾದ ನಗರ ಠಾಣಾ ಪೋಲೀಸರು ಅಪರಿಚಿತ ಆರೋಪಿಯನ್ನು ಪತ್ತೆ ಹಚ್ಚಿ ಆತನ ಮೇಲೆ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.