ವಿಜಯಪುರ: ಮೇಲಾಧಿಕಾರಿಗಳ ಕಿರುಕುಳ ತಾಳಲಾರದೇ ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಬಳಿ ಮರಕ್ಕೆ ನೇಣು ಹಾಕಿಕೊಂಡು ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ವರದಿಯಾಗಿದೆ.
ತಾಲ್ಲೂಕಿನ ಸಾಸಾಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಮಲ್ಲಪ್ಪ ನಾಯಕಲ್(54) ಆತ್ಮಹತ್ಯೆ ಮಾಡಿಕೊಂಡವರು.
ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ಪೊಲಿಸ್ ತನಿಖೆಯ ವೇಳೆ ಮರಣ ಪೂರ್ವ ಶಿಕ್ಷಕ ಬರೆದ ಪತ್ರ ಪತ್ತೆಯಾಗಿದೆ. ತನ್ನ ಆತ್ಮಹತ್ಯೆಗೆ ಸಾಸಬಾಳ ಶಾಲೆಯ ಹಿಂದಿನ ಮುಖ್ಯೋಪಾಧ್ಯಾಯ ಎಸ್.ಎಲ್. ಭಜಂತ್ರಿ, ಸಿಂದಗಿ ಬಿಇಓ ಎಂ.ಎಚ್.ಹರನಾಳ, ಗೋಲಗೇರಿ ಸಿಆರ್‌ಪಿ ಜಿ.ಎನ್.ಪಾಟೀಲ ಹಾಗೂ ಸದರಿ ಶಾಲೆಯ ಶಿಕ್ಷಕ ಬಿ.ಎನ್.ತಳವಾರ ಇವರು ನೀಡುತ್ತಿರುವ ಕಿರುಕುಳ ತಾಳದೇ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ಡೆತ್’ನೋಟ್’ನಲ್ಲಿ ಏನಿದೆ ?
ಸದರಿ ಶಾಲೆಯ ಹಿಂದಿನ ಮುಖ್ಯೋಪಾಧ್ಯಾಯ ಎಸ್. ಎಲ್. ಭಜಂತ್ರಿ, ಮುಖ್ಯೋಪಾಧ್ಯಾಯ ಹುದ್ದೆಗೆ ಸಂಬಂಧಿಸಿದಂತೆ ನನಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಹಸ್ತಾಂತರ ಮಾಡದೇ, ಬಸವರಾಜ ಎಂಬವರಿಗೆ ಬಿಟ್ಟು ಕೊಟ್ಟಿದ್ದರು. ಅಧಿಕಾರ ಬಿಟ್ಟುಕೊಟ್ಟ ಬಳಿಕ ಭಜಂತ್ರಿ ಸತಾಯಿಸಿದ್ದಾರೆ. ಈ ಬಗ್ಗೆ ಸಿಂದಗಿ ಬಿಇಒ ಅವರ ಗಮನಕ್ಕೆ ತಂದಿದ್ದರೂ ಕ್ರಮಕೈಗೊಂಡಿಲ್ಲ. ಬದಲಾಗಿ ಸಿಂದಗಿ ಬಿಇಓ ಎಚ್.ಎಂ. ಹರಿನಾಳ ತನಗೇ ನೋಟಿಸ್ ಕೊಡುವ ಮೂಲಕ ಕಿರುಕುಳ ನೀಡುತ್ತಿದ್ದರು. ಗ್ರಾಮದ ಸಂಗಮೇಶ ಚಿಂಚೋಳಿ ಎಂಬವರಿಂದ ನನ್ನ ವಿರುದ್ಧ ಆರೋಪ ಮಾಡಿಸಿ ಸಿಆರ್ ಪಿ ಹಾಗೂ ಸಂಗಮೇಶ ಇವರು ನನ್ನಿಂದ ಹಣ ಪಡೆದಿದ್ದರು ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.
ಬಿಸಿಯೂಟ ಯೋಜನೆ ಅಡಿಯಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿ ತೋರಿಸಿ ಹಣ ಲಪಟಾಯಿಸುತ್ತಿದ್ದ ಎಂದು ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದರು. ನನಗಿಂತ ನನ್ನ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಆಗಿದೆ ಎಂದು ಪತ್ರದಲ್ಲಿ ತಮ್ಮ ಸಾವಿಗೆ ಕಾರಣವಾದ ಮೇಲಾಧಿಕಾರಿಗಳು, ಅವರು ನೀಡುತ್ತಿದ್ದ ಕಿರುಕುಳದ ಕುರಿತು ವಿವರಿಸಿದ್ದಾರೆ.
ನನ್ನ ಸಾವಿನ ಬಳಿಕ ನನ್ನ ಹೆಂಡತಿ, ಓರ್ವ ಮಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂವರು ಸಸ್ಪೆಂಡ್
ಗೋಲಗೇರಿ ವಲಯ ಶಿಕ್ಷಣ ಇಲಾಖೆ ಸಿಆರ್‌ಪಿ ಜಿ.ಎನ್.ಪಾಟೀಲ, ಸಾಸಾಬಾಳ ಜಿಪಿಟಿ ಸಹಶಿಕ್ಷಕ ಬಿ.ಎಂ.ತಳವಾರ, ಮಾಡಬಾಳ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಎಸ್.ಎಲ್.ಭಜಂತ್ರಿ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉಮೇಶ ಶಿರಹಟ್ಟಿಮಠ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕ್ಷೇತ್ರಶಿಕ್ಷಣಾಧಿಕಾರಿ ಹರನಾಳ ಅವರನ್ನು ಅಮಾನತುಗೊಳಿಸುವ ಕುರಿತಾಗಿ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ.