ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 1700 ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಅಲ್ಲದೇ 9 ಡಿಎಆರ್, 8 ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಜೊತೆಗೆ ನಗರಸಭೆ ವತಿಯಿಂದ 70 ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ
ಹುಣಸೂರಿನಲ್ಲಿ ಇಂದು 29ನೇ ವರ್ಷದ ಹನುಮ ಜಯಂತಿ ಆಚರಣೆ ಮಾಡಲಾಗುತ್ತಿದೆ. ಹನುಮಂತೋತ್ಸವ ಸಮಿತಿಯ ವತಿಯಿಂದ ಆಯೋಜಿಸಿರುವ ಹನುಮ ಜಯಂತಿ ಹಿನ್ನೆಲೆಯಲ್ಲಿ ಪಟ್ಟಣದಲ್ಲೆಡೆ ಸಂಭ್ರಮದ ವಾತಾವರಣ ಮನೆ ಮಾಡಿದೆ.
ಹನುಮ ಜಯಂತಿ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10ಕ್ಕೆ ಪಟ್ಟಣದ ರಂಗನಾಥ ಬಡಾವಣೆಯಿಂದ ಹನುಮಂತನ ವಿಗ್ರಹದೊಂದಿಗೆ ಹಾಗೂ ವಿವಿಧ ಕಲಾತಂಡಗಳು ಹಾಗೂ ಸ್ತಬ್ಧ ಚಿತ್ರಗಳ ಮರವಣಿಗೆ ನಡೆಯಲಿದೆ. ಹನುಮ ಜಯಂತಿ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಪಟ್ಟಣದೆಲ್ಲಡೆ ಅಗತ್ಯ ಮುನ್ನೆಚ್ಚರಿಕೆವಹಿಸಲಾಗಿದೆ. ಹನುಮ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 1700 ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಅಲ್ಲದೇ 9 ಡಿಎಆರ್, 8 ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಜೊತೆಗೆ ನಗರಸಭೆ ವತಿಯಿಂದ 70 ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ.
ಅಲ್ಲದೇ ತಾಲೂಕಿನಾದ್ಯಂತ ಮೂರು ದಿನ ಮದ್ಯ ಮಾರಾಟ ನಿಷೇಧ ಮಾಡಲಾಗಿದ್ದು, ಹುಣಸೂರಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇದಲ್ಲದೇ ಪಟ್ಟಣದ ಜೆಎಲ್‌ಬಿ ರಸ್ತೆ, ಬಜಾರ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಬೆಳಗ್ಗೆ 11ರಿಂದ ಸಂಜೆ 5 ಗಂಟೆವರೆಗೆ ನಿಷೇಧ ವಿಧಿಸಲಾಗಿದೆ. ಅಲ್ಲದೇ ಮೆರವಣಿಗೆಯಲ್ಲಿ ಕೇವಲ ಅನುಮತಿ ಪಡೆದ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನು ಮೆರವಣಿಗೆ ಸಂದರ್ಭದಲ್ಲಿ ಡಿಜೆ ಬಳಕೆಗೆ ಪೊಲೀಸರು ಅವಕಾಶವನ್ನ ನೀಡಿಲ್ಲ.
ಹನುಮ ಜಯಂತಿ ಮೆರವಣಿಗೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಎಲ್ಲಾ ಮುನ್ನೆಚ್ಚರಿಕೆವಹಿಸಲಾಗಿದೆ. ಮೆರವಣಿಗೆ ಸಾಗುವ ಎಲ್ಲಾ ಮಾರ್ಗಗಳ ಪರಿಶೀಲನೆ ಸಹ ಮಾಡಲಾಗಿದೆ. ಪ್ರಮುಖವಾಗಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 30 ಮಂದಿ ಆರೋಪಿತರ ಪಟ್ಟಿಯನ್ನ ತಯಾರಿಸಿರುವ ಪೊಲೀಸರು, ಇವರುಗಳ ಚಲನವಲನದ ಮೇಲೆ ನಿಗಾವಹಿಸಿದ್ದಾರೆ. ಅಲ್ಲದೇ ಪಟ್ಟಣ ಪ್ರವೇಶಿಸುವ 6 ಕಡೆ, ಜಿಲ್ಲೆಯ ಎರಡು ಕಡೆಯಲ್ಲಿ ಚೆಕ್‌ಪೋಸ್ಟ್ ತೆರೆದು ವಾಹನಗಳ ತಪಾಸಣೆಯನ್ನ ಸಹ ಮಾಡಲಾಗುತ್ತಿದೆ.
ಸಾರ್ವಜನಿಕರು ಯಾವುದೇ ದೂರುಗಳಿದ್ದರೂ ಸಹಾಯವಾಣಿ ಸಂಖ್ಯೆ 112ಗೆ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ. ಜೊತೆಗೆ ನಗರಸಭೆಯ ಅನುಮತಿಯೊಂದಿಗೆ ನಿಗದಿತ ಸ್ಥಳದಲ್ಲಿ ಮಾತ್ರ ಬಾವುಟ, ಫ್ಲೆಕ್ಸ್ ಅಳವಡಿಕೆಗೆ ಅವಕಾಶ ನೀಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಅವರು ಮೆರವಣಿಗೆ ಸಾಗಲಿರುವ ಮಾರ್ಗಗಳಲ್ಲಿ ಸೂಕ್ತ ಪರಿಶೀಲನೆ ನಡೆಸಿದ್ದಾರೆ.