ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಪ್ರತಿಮೆ ಉದ್ಘಾಟನೆ ಬಿಜೆಪಿ ಪಕ್ಷದ ಕಾರ್ಯಕ್ರಮದಂತ್ತಿತ್ತು ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಶ್ವನಾಥ್ ಪ್ರತಿಮೆಯನ್ನು ಸ್ಥಾಪಿಸಿದ್ದು ಖುಷಿಯ ವಿಚಾರ. ಆದರೆ ಇಡೀ ನಾಡು ಸಂಭ್ರಮಿಸುವಂತೆ ಕಾರ್ಯಕ್ರಮ ಮಾಡಬೇಕಿತ್ತು. ಆದರೆ, ಇದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರನ್ನು ಆಹ್ವಾನಿಸದೆ ತಪ್ಪು ಮಾಡಿದೆ ಮತ್ತು ಕೂಡಲೇ ಆ ತಪ್ಪನ್ನು ಸರಿ ಮಾಡಬೇಕಿತ್ತು ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
ಸರ್ಕಾರದ ಹಣದಿಂದ ಪ್ರತಿಮೆಯನ್ನು ನಿರ್ಮಿಸಿರುವ ಕಾರಣ ಇದು ಸಂಪೂರ್ಣ ಸರ್ಕಾರಿ ಕಾರ್ಯಕ್ರಮವಾಗಿರಬೇಕು ಬದಲಾಗಿ ಪಕ್ಷದ ಕಾರ್ಯಕ್ರಮವಾಗಿದ್ದು ಸರಿಯಲ್ಲ ಎಂದು ಟೀಕಿಸಿದ್ದಾರೆ.