ಚಿಕ್ಕಬಳ್ಳಾಪುರ: ಡಾ. ಹೆಚ್ ನರಸಿಂಹಯ್ಯನವರ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಬೇಕಿತ್ತು. ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರಕ್ಕೆ ಆಗಮಿಸುವ ಟೂರ್ ಪ್ಲ್ಯಾನ್ ಫಿಕ್ಸ್ ಆಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಹಬ್ಬದ ರೀತಿ ಶೃಂಗಾರ ಮಾಡಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳ ಡಾ. ಹೆಚ್ ನರಸಿಂಹಯ್ಯ ಭಾವಚಿತ್ರ ಮೆರವಣಿಗೆ ಮಾಡಲಾಯ್ತು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ಶಾಲಾ ಮಕ್ಕಳು ಕೂಡ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಡಾ. ಹೆಚ್ ನರಸಿಂಹಯ್ಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ. ಎಂಸಿ ಸುಧಾಕರ್, ನರಸಿಂಹಯ್ಯ ಅವರಿಗೆ ನಮ್ಮ ತಂದೆ ಕಂಡರೆ ತುಂಬಾ ಇಷ್ಟ. ಅವರು ವಿದೇಶದಲ್ಲಿ ಓದಿದ ಅನುಭವದಲ್ಲಿ ಬೆಂಗಳೂರಿನಲ್ಲಿ ಕಾಲೇಜು ಮಾಡಿದರು. ವಿದೇಶದಲ್ಲಿ ಈಗ ಮಾಡುತ್ತಿರುವ ವಿನ್ಯಾಸಗಳನ್ನು ಅವರು ಈ ಹಿಂದೆಯೇ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಇಂದು ಸಿಎಂ ಭಾಗವಹಿಸಬೇಕಿತ್ತು. ಆದರೆ ಈ ಕಾರ್ಯಕ್ರಮಕ್ಕೆ ತಯಾರಿ ಆಗಬೇಕಾದರೆ, ಜಾರಿ ಬಿದ್ದು ಗಾಯವಾಗಿದೆ. ಹಾಗಾಗಿ ಇವತ್ತಿನ ಕಾರ್ಯಕ್ರಮವನ್ನು ರದ್ದು ಮಾಡಿದರು. ಇವತ್ತು ಮುಖ್ಯಮಂತ್ರಿಗಳ ಬಳಿ ಇಟ್ಟಿದ್ದ ಮನವಿಯನ್ನ ತಿಳಿಸುತ್ತೇವೆ. ಕೆಪಿಎಸ್ ಶಾಲೆಗಳ ಆರಂಭಿಸಲು ಈಗಾಗಲೇ ತಯಾರಿ ನಡೆಸಿದ್ದೇವೆ ಎಂದಿದ್ದಾರೆ.
ಡಾ. ನರಸಿಂಹಯ್ಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಡಾ. ಕೆ ಸುಧಾಕರ್, ಮುಖ್ಯಮಂತ್ರಿಗಳಿಂದ ಶಾಲೆಗೆ ಏನಾದರೂ ಅನುದಾನ ತೆಗೆದುಕೊಳ್ಳಬೇಕು ಎಂದುಕೊಂಡಿದ್ದರು. ಸಚಿವರ ಮೂಲಕ ನಿಮ್ಮ ಬೇಡಿಕೆಗಳನ್ನ ಸಿಎಂಗೆ ತಲುಪಿಸಿ. ನರಸಿಂಹಯ್ಯನವರು ಶಿಕ್ಷಣ ಕ್ಷೇತ್ರದಲ್ಲಿ ದೂರದೃಷ್ಟಿ ಹೊಂದಿದ್ದರು. ನಮ್ಮ ಜಿಲ್ಲೆಯಲ್ಲಿ ಎರಡು ರತ್ನಗಳು ಹುಟ್ಟಿವೆ. ಒಂದು ಡಾ. ಹೆಚ್ ನರಸಿಂಹಯ್ಯ ಮತ್ತು ಡಾ ಎಂ ವಿಶ್ವೇಶ್ವರಯ್ಯ. ವಿಜ್ಞಾನ ಮತ್ತು ವೈಚಾರಿಕತೆಯ ಬಗ್ಗೆ ಬಹಳ ದೂರದೃಷ್ಟಿ ಹೊಂದಿದ್ದರು. ಶಿಕ್ಷಣ ಮತ್ತು ಆರೋಗ್ಯ ಸರಿಯಾಗಿದ್ದರೆ, ಸಮಾಜ ಏಳಿಗೆ ಆಗುತ್ತದೆ. ಶಾಲೆಗೆ ಹೋಗುವ ವೇಳೆ ಪ್ರತಿಯೊಂದು ಹಂತದಲ್ಲಿಯೂ ಕಷ್ಟ ಎದುರಿಸಿದ್ದರು. ಒಬ್ಬ ಶಿಕ್ಷಕನ ಮಗ, ನಾನೂ ಕೂಡ ಶಿಕ್ಷಕರ ಮಗ. ಶಿಕ್ಷಕರೇ ಈಗ ತಂದೆ ತಾಯಿಗಳು ಎಂದಿದ್ದಾರೆ.
ನರಸಿಂಹಯ್ಯನವರು ವಿದೇಶದಲ್ಲಿ ಓದಿದ್ದರು. ಇಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಗ್ರಾಮೀಣ ಪ್ರದೇಶದ ರೈತರ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂದು ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆದರು. ಯಾವುದೇ ಖಾಸಗಿ ಶಾಲೆಗಳನ್ನು ತೆಗೆಯಲಿಲ್ಲ ಎಂದು ಡಾ ಹೆಚ್. ನರಸಿಂಹಯ್ಯ ಅವರನ್ನು ನೆನಪು ಮಾಡಿಕೊಂಡರು. ಹೆಚ್. ನರಸಿಂಹಯ್ಯ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದು, ನ್ಯಾಷನಲ್ ಕಾಲೇಜು ಸ್ಥಾಪನೆ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಜ್ಯೋತಿ ಆಗಿದ್ದಾರೆ. ಇಂದಿಗೂ ನ್ಯಾಷನಲ್ ಕಾಲೇಜು ತನ್ನದೇ ಆದ ಪ್ರಾಮುಖ್ಯತೆ ಉಳಿಸಿಕೊಳ್ಳುವುದರಲ್ಲಿ ಹೆಚ್. ನರಸಿಂಹಯ್ಯ ಅವರ ಕೊಡುಗೆ ಅಪಾರ ಎನ್ನಬಹುದು.