- ಸಚಿವರಾದ ಕೆ.ಜೆ.ಜಾರ್ಜ್, ಈಶ್ವರ ಖಂಡ್ರೆ ಅವರಿಂದ ಶಂಕುಸ್ಥಾಪನೆ
- 2.75 ಕೋಟಿ ರೂ. ವೆಚ್ಚದಲ್ಲಿ ಹೆಣ್ಣೂರು ಜೀವ ವೈವಿದ್ಯ ಪಾರ್ಕ್‌ಗೆ ಕಾಯಕಲ್ಪ
- ಹೆಚ್.ಬಿ.ಆರ್. ಲೇಔಟ್‌ನಲ್ಲಿ ವೈಟ್ ಟ್ಯಾಪಿಂಗ್ ರಸ್ತೆ ಉದ್ಘಾಟನೆ

ಬೆಂಗಳೂರು, ಫೆ. 21, 2025: ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ (ಕೆ.ಪಿ.ಟಿ.ಸಿ.ಎಲ್)ವು ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲಿದ್ದು, ಹೆಚ್.ಬಿ.ಆರ್. ಲೇಔಟ್‌ನ 5 ನೇ ಬ್ಲಾಕ್‌ನ ಕೆ.ಪಿ.ಟಿ.ಸಿ.ಎಲ್. ಸ್ಟೇಷನ್ ಬಳಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಮತ್ತು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಜತೆಯಾಗಿ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ಹೆಚ್.ಬಿ.ಆರ್. ಲೇಔಟ್ ನ 5 ನೇ ಬ್ಲಾಕ್‌ನ ಕೆ.ಪಿ.ಟಿ.ಸಿ.ಎಲ್. ಸ್ಟೇಷನ್ ಪಕ್ಕದಲ್ಲಿ ಅಂದಾಜು 4.65 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ ಅಭಿವೃದ್ದಿ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ತರಬೇತಿ ಕೇಂದ್ರ ಹಾಗೂ ಗ್ರಾಮೀಣ ಆಟಗಳನ್ನು ಪ್ರೋತ್ಸಾಹಿಸುವ ಕೇಂದ್ರ ಇರಲಿದ್ದು, ಬಯಲು ರಂಗಮಂದಿರ, ವಾಕಿಂಗ್ ಪಾಥ್ ಹಾಗೂ ಓಪನ್ ಜಿಮ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ವ್ಯವಸ್ಥೆ ಇರಲಿದೆ ಎಂದು ಹೇಳಿದರು. ಅಲ್ಲದೆ, ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.

2.75 ಕೋಟಿ ರೂ. ವೆಚ್ಚದಲ್ಲಿ ಹೆಣ್ಣೂರು ಜೀವ ವೈವಿದ್ಯ ಕೇಂದ್ರಕ್ಕೆ ಕಾಯಕಲ್ಪ
ಇದಕ್ಕೂ ಮುನ್ನ ಸಚಿವರಾದ ಕೆ.ಜೆ.ಜಾರ್ಜ್ ಮತ್ತು ಈಶ್ವರ ಖಂಡ್ರೆ ಅವರು, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹೆಣ್ಣೂರು ಜೀವ ವೈವಿದ್ಯ ಉದ್ಯಾನವನವನ್ನು 2.75 ಕೋಟಿ ರೂ. ವೆಚ್ಚದಲ್ಲಿ ರೂಪಾಂತರಗೊಳಿಸುವ ಕುರಿತಂತೆ ಪರಿಶೀಲನೆ ನಡೆಸಿದರು.
ಜೀವ ವೈವಿದ್ಯ ಉದ್ಯಾನದದಲ್ಲಿ ವಿಶೇಷ ಪ್ರಬೇಧದ ಸಸ್ಯಗಳನ್ನು ಬೆಳೆಸಿ, ವೈಜ್ಞಾನಿಕ ಹೆಸರನ್ನು ಪ್ರದರ್ಶಿಸಬೇಕು. ಉತ್ತಮ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಹಾಗೂ ವಾಯು ವಿಹಾರಿಗಳಿಗೆ ನಡಿಗೆ ಪಥ ನಿರ್ಮಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜೀವ ವೈವಿಧ್ಯ ಉದ್ಯಾನಕ್ಕೆ 2.75 ಕೋಟಿ ವೆಚ್ಚದಲ್ಲಿ ಕಾಯಕಲ್ಪ ನೀಡಲಾಗುತ್ತಿದ್ದು, ಅರಣ್ಯ ಇಲಾಖೆ 2 ಕೋಟಿ ನೀಡಲಿದೆ. ಇದೇ ವೇಳೆ ಸಚಿವ ಕೆ.ಜೆ.ಜಾರ್ಜ್ ಅವರು, ಯೋಜನೆಗೆ ಸಿಎಸ್ಆರ್ ಅನುದಾನದಡಿ 75 ಲಕ್ಷ ರೂ. ಒದಗಿಸುವುದಾಗಿ ಘೋಷಿಸಿದರು.

ವೈಟ್ ಟ್ಯಾಪಿಂಗ್ ರಸ್ತೆ ಉದ್ಘಾಟನೆ
ಹೆಚ್.ಬಿ.ಆರ್. ಲೇಔಟ್ ನ 5 ನೇ ಬ್ಲಾಕ್ ನೂತನವಾಗಿ ನಿರ್ಮಾಣವಾಗುತ್ತಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮುಂಭಾಗ ವೈಟ್ ಟಾಪಿಂಗ್ ರಸ್ತೆಯನ್ನು ಇಂಧನ ಸಚಿವಕೆ.ಜೆ.ಜಾರ್ಜ್ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಜತೆಗೂಡಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ಕ್ಷೇತ್ರದಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸುವುದಾಗಿ ನೀಡಿದ ಭರವಸೆಯಂತೆ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.