ಬೆಂಗಳೂರು: ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡು ದಾಖಲೆ ನಿರ್ಮಿಸಿರುವುದಲ್ಲದೆ, 100 ಕ್ಕೂ ಹೆಚ್ಚಿನ ಬಂಗಾರದ ಪದಕಗಳನ್ನು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗಳಿಸಿರುವ, ಭಾರತದ ಪ್ರಮುಖ ಪ್ರಶಸ್ತಿಗಳಾದ ಮಿಸ್ಟರ್ ಇಂಡಿಯಾ, ಭಾರತ ಶ್ರೀ, ಭಾರತ ಶ್ರೇಷ್ಠ ಹಾಗೂ ಕರ್ನಾಟಕದ ಪ್ರಮುಖ ಪ್ರಶಸ್ತಿ ಕರ್ನಾಟಕ ಶ್ರೇಷ್ಠ, ಕರ್ನಾಟಕ ಶ್ರೀ ಸೇರಿದಂತೆ ಏಕಲವ್ಯ ಪ್ರಶಸ್ತಿಯನ್ನು ಪಡೆದುಕೊಂಡಿರುವ ಎ.ವಿ.ರವಿ (ಜಿಮ್ ರವಿ) ಅವರು ದಕ್ಷಿಣ ಭಾರತದ ಹೆಸರಾಂತ ನಟರಲ್ಲಿ ಕೂಡ ಒಬ್ಬರು.

ಇಂತಹ ಪ್ರತಿಭಾವಂತ ಎ.ವಿ.ರವಿ ಅವರ ಜೀವನ ಚರಿತ್ರೆ ಈಗ ಪುಸ್ತಕರೂಪದಲ್ಲಿ ಬರುತ್ತಿದೆ. ಆ ಪುಸ್ತಕಕ್ಕೆ “ರವಿ ನೀನು ಆಗಸದಲ್ಲಿ” ಎಂದು ಹೆಸರಿಡಲಾಗಿದೆ. ಡಾ||ಮಂಜುನಾಥ ಮಾಗೋದಿ ಅವರು ಬರೆದಿರುವ ಈ ಪುಸ್ತಕದ ಅನಾವರಣ ಸಮಾರಂಭ ಸೆಪ್ಟೆಂಬರ್ 8 ರ ಮಂಗಳವಾರ ಸಂಜೆ 4 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಶ್ರೀಶ್ರೀ ಜಗದ್ಗುರು ಶ್ರೀನಿರಂಜನಾನಂದಪುರಿ ಸ್ವಾಮೀಜಿಯವರು, ಕಾಗಿನೆಲೆ ಮಹಾ ಸಂಸ್ಥಾನ, ಕನಕ ಗುರುಪೀಠ, ಕಾಗಿನೆಲೆ ಇವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಈ ಸಮಾರಂಭಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ.ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಶ್ರೀಸಿದ್ದರಾಮಯ್ಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀಚಂದ್ರಶೇಖರ ಕಂಬಾರ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಬಂಜಗೆರೆ ಜಯಪ್ರಕಾಶ್, ಸನ್ಮಾನ್ಯ ಕೃಷಿ ಸಚಿವರಾದ ಶ್ರೀನರೇಂದ್ರ ಸ್ವಾಮಿ, ಕೃತಿಕಾರರಾದ ಶ್ರೀ ಡಾ|| ಮಂಜುನಾಥ ಮಾಗೋದಿ ಹಾಗೂ ದಕ್ಷಿಣ ಭಾರತದ ಹೆಸರಾಂತ ನಟರಾದ ಕರುನಾಡ ಚಕ್ರವರ್ತಿ ಶ್ರೀ ಶಿವರಾಜಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.






