ದೆಹಲಿಯ ರೋಹಿಣಿ ನ್ಯಾಯಾಲಯದೊಳಗೆ ನಡೆದ ಶೂಟೌಟ್ ಘಟನೆಯಲ್ಲಿ ಮೂವರು ಗ್ಯಾಂಗ್‌ಸ್ಟರ್‌ಗಳು ಮೃತಪಟ್ಟಿದ್ದಾರೆ. ವಕೀಲರ ವೇಷದಲ್ಲಿ ಬಂದಿದ್ದ ದುಷ್ಕರ್ಮಿಗಳು ಕೋರ್ಟಿಗೆ ಹಾಜರಾಗಿದ್ದ ಗ್ಯಾಂಗ್‌ಸ್ಟರ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಸಂಪೂರ್ಣ ಭದ್ರತೆಯಿಂದ ಕೂಡಿದ್ದ ಕೋರ್ಟ್ ಕೊಠಡಿಯಲ್ಲೇ ಶೂಟೌಟ್ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ. ಶೂಟೌಟ್ ನಡೆದ ವೇಳೆಯ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕನಿಷ್ಟ ಮೂವತ್ತು ಗುಂಡುಗಳನ್ನು ಸಿಡಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ಹೇಳಿದೆ.
ಕುಖ್ಯಾತ ಗ್ಯಾಂಗ್‌ಸ್ಟರ್ ಜಿತೆಂದರ್ ಗೊಗಿ ಪ್ರಕರಣವೊಂದರ ವಿಚಾರಣೆ ಸಂಬಂಧಿಸಿದಂತೆ ನ್ಯಾಯಲಯಕ್ಕೆ ಹಾಜರಾಗಿದ್ದು, ಮೊದಲೇ ಯೋಜನೆ ಹಾಕಿಕೊಂಡಿದ್ದ ದುಷ್ಕರ್ಮಿಗಳಿಬ್ಬರು ವಕೀಲರ ಸೋಗಿನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಧೀಶರ ಮುಂದೆ ಹಾಜರಾಗಲೆಂದು ಬಂದಿದ್ದ ಜಿತೆಂದರ್ ಗೊಗಿ ಮೇಲೆ ಮೂರು ಸುತ್ತಿನ ಗುಂಡು ಹಾರಿಸಿದ ಇಬ್ಬರು ದುಷ್ಕರ್ಮಿಗಳ ಮೇಲೆ ಪೊಲೀಸರು ಮರು ದಾಳಿ ನಡೆಸಿದ್ದು, ದುಷ್ಕರ್ಮಿಗಳಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೊಗಿ ಕೂಡಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪ್ರಾಥಮಿಕ ತನಿಖೆ ವೇಳೆ ಇದೊಂದು ಹಳೆ ವೈಷಮ್ಯದ ಹಗೆ ಸಾಧಿಸುವಿಕೆಯ ಕೃತ್ಯ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಗೊಗಿ ಗ್ಯಾಂಗ್‌ನ ಎದುರಾಳಿಯಾದ ತಿಲ್ಲು ತಾಜ್‌ಪೂರಿಯಾ ಗ್ಯಾಂಗ್ ಸದಸ್ಯರೇ ಗೊಗಿ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.