ಗುಂಡ್ಲುಪೇಟೆ: ಸಾಲದಭಾದೆ ತಾಳಲಾರದೆ ಕ್ರಿಮಿನಾಶಕ ಸೇವಿಸಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಸುಣ್ಣದಕೇರಿ ಬೀದಿಯಲ್ಲಿ ನಡೆದಿದೆ.ಪಟ್ಟಣದ ಸುಣ್ಣದಕೇರಿ ಬೀದಿಯ ಅವಿವಾಹಿತೆ ಕುಳ್ಳಮ್ಮ(52) ಮತ್ತು ಸಹೋದರ ಕೃಷ್ಣ (50)ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಪಟ್ಟಣದ 11ನೇ ವಾರ್ಡ್‌ನ ಸುಣ್ಣದ ಕೇರಿ ನಾಯಕರ ಬೀದಿಯಲ್ಲಿ ವಾಸವಾಗಿದ್ದ ಕುಳ್ಳಮ್ಮ ಮತ್ತು ಸಹೋದರ ಕೃಷ್ಣ ಅವಿವಾಹಿತರಾಗಿದ್ದು ಇಬ್ಬರ ಒಟ್ಟಿಗೆ ವಾಸವಾಗಿದ್ದರು, ಮನೆ ಖರ್ಚು ಮತ್ತು ವ್ಯವಸಾಯದ ಉದ್ದೇಶಕ್ಕಾಗಿ ಮಹಿಳಾ ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದರು. ಕೃಷಿಯಲ್ಲಿ ಸರಿಯಾಗಿ ಬೆಳೆ ಬಾರದ ಕಾರಣ ನಷ್ಟ ಉಂಟಾಗಿದ್ದರಿಂದ ಸಂಘ ಗಳಲ್ಲಿ ಮಾಡಿಕೊಂಡಿದ್ದ ಸಾಲದ ಕಂತಿನ ಹಣವನ್ನು ಮರು ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದ ಮನನೊಂದ ಕುಳ್ಳಮ್ಮ ಮತ್ತು ಕೃಷ್ಣ ಬುಧವಾರ ರಾತ್ರಿ ಸುಮಾರು 10.30 ಗಂಟೆಯಲ್ಲಿ ಸುಣ್ಣದಕೇರಿ ಮನೆಯಲ್ಲಿ ಕ್ರಿಮಿನಾಶಕ ಔಷಧಿಯನ್ನು ಸೇವಿಸಿದ್ದಾರೆ.
ವಿಷಯ ತಿಳಿದ ಸ್ಥಳೀಯರು ಇಬ್ಬರನ್ನೂ ಚಿಕಿತ್ಸೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ .ಪಟ್ಟಣದ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಖಾಸಗಿ ಹಣಕಾಸು ಸಂಸ್ಥೆಗಳಿಂದ ಕಿರುಕುಳ ಆರೋಪ: ಮಧ್ಯಮ ವರ್ಗದ ಜನರಿಗೆ ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ನೀಡಿ ಸಾಲ ವಸೂಲಾತಿಯ ಸಂದರ್ಭದಲ್ಲಿ ರಾತ್ರಿಯವರೆಗೂ ಸಾಲಗಾರರ ಮನೆ ಮುಂದೆ ಬಂದು ಕಿರುಕುಳ ನೀಡುತಿದ್ದಾರೆ ಇದಕ್ಕೆ ಜಿಲ್ಲಾಧಿಕಾರಿಗಳು ಕಡಿವಾಣ ಹಾಕಬೇಕೆಂದು ಜಾರಕಿಹೊಳಿ ಬ್ರಿಗೇಡ್ ನ ಗೋವಿಂದ ನಾಯಕ್ ಒತ್ತಾಯಿಸಿದ್ದಾರೆ.