ಸೂರತ್ ಸೇರಿದಂತೆ ಗುಜರಾತಿನ ಆರು ನಗರಗಳ ಸ್ಥಳೀಯ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಎಲ್ಲಾ ಕಡೆ ಮತ್ತೆ ಅಧಿಕಾರ ಹಿಡಿದಿದೆ. ಆದರೆ, ಅಚ್ಚರಿಯ ಬೆಳವಣಿಗೆಯಲ್ಲಿ ಸೂರತ್ ನಗರಸಭೆಯಲ್ಲಿ ಆಮ್ ಆದ್ಮಿ ಪಾರ್ಟಿ ಅನಿರೀಕ್ಷಿತ ಸಾಧನೆ ಮಾಡಿದ್ದು, ಬಿಜೆಪಿಯ ಭದ್ರಕೋಟೆಯಲ್ಲಿ ಎಎಪಿಯ ಈ ಸಾಧನೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.
ಸೂರತ್ ನಗರಸಭೆಯ ಒಟ್ಟು 120 ಸ್ಥಾನಗಳ ಪೈಕಿ ಆಡಳಿತಪಕ್ಷ ಬಿಜೆಪಿ 93 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರ ಹಿಡಿದಿದೆ. ಇದೇ ಮೊದಲ ಬಾರಿಗೆ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಎಎಪಿ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದ್ದರೆ, ಕಾಂಗ್ರೆಸ್ ಈ ಬಾರಿ ಖಾತೆಯನ್ನೇ ತೆರೆಯದೆ ಹೀನಾಯ ಪ್ರದರ್ಶನ ನೀಡಿದೆ.
ಆ ಮೂಲಕ ಸೂರತ್ ನಲ್ಲಿ ಬಿಜೆಪಿಯ ಭಾರೀ ಪ್ರಭಾವ ಮತ್ತು ಪ್ರಚಾರದ ಹೊರತಾಗಿಯೂ ಪ್ರತಿ ಬಾರಿ ಕಾಂಗ್ರೆಸ್ಸಿನ ಬೆಂಬಲಕ್ಕೆ ನಿಲ್ಲುತ್ತಿದ್ದ ಪಟಿದಾರ್ ಸಮುದಾಯ ಕೂಡ ಈ ಬಾರಿ ಆ ಪಕ್ಷದಿಂದ ದೂರ ಸರಿದಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ. ಅದರಲ್ಲೂ ಪಟಿದಾರ್ ಹೋರಾಟದ ಮೂಲಕ ದೇಶದ ಗಮನ ಸೆಳೆದ ಹಾರ್ದಿಕ್ ಪಟೇಲ್ ಸ್ವತಃ ಗುಜರಾತ್ ಕಾಂಗ್ರೆಸ್ಸಿನ ಕಾರ್ಯಾಧ್ಯಕ್ಷರಾಗಿರುವಾಗ ಸೂರತ್ ನಲ್ಲಿ ಪಕ್ಷದ ಈ ಹೀನಾಯ ಪ್ರದರ್ಶನ , ಪಕ್ಷದೊಂದಿಗೆ ಹಾರ್ದಿಕ್ ಪಟೇಲ್ ಪಾಲಿಗೂ ದೊಡ್ಡ ಹಿನ್ನಡೆ ಎಂದೇ ಹೇಳಲಾಗುತ್ತಿದೆ.

ನಿರುದ್ಯೋಗ, ಉದ್ಯೋಗನಷ್ಟದಂತಹ ಮರ್ಮಾಘಾತಕ ಪೆಟ್ಟುಗಳ ಮೇಲೆ ಪ್ರಧಾನಿ ಮೋದಿಯವರ ಬಿಜೆಪಿ ಸರ್ಕಾರದ ದುಬಾರಿ ತೆರಿಗೆ ಹೇರಿಕೆಯಿಂದಾಗಿ ಪೆಟ್ರೋಲ್- ಡೀಸೆಲ್ ಬೆಲೆ ಗಮನಕ್ಕೇರಿರುವುದು, ದವಸ ಧಾನ್ಯ ಬೆಲೆ ನಿರಂತರ ಗಗನಮುಖಿಯಾಗಿರುವುದು, ಮುಂತಾದ ಸಮಸ್ಯೆಗಳ ಜೊತೆಗೆ, ರೈತ ಹೋರಾಟದಂತಹ ರಾಷ್ಟ್ರೀಯ ಗಮನ ಸೆಳೆದ ಬಿಜೆಪಿ ವಿರೋಧಿ ಬೆಳವಣಿಗೆಯ ನಡುವೆಯೂ ಒಂದು ಕಡೆ ಕಾಂಗ್ರೆಸ್ ಹೀಗೆ ಸೋಲು ಕಂಡಿದ್ದರೆ, ಮತ್ತೊಂದು ಕಡೆ ಅಚ್ಚರಿ ಎಂಬಂತೆ ಎಎಪಿ ದೆಹಲಿಯ ಹೊರಗೆ ತನ್ನ ನೆಲೆ ವಿಸ್ತರಿಸುವ ಮಹತ್ವದ ಹೆಜ್ಜೆ ದಾಖಲಿಸಿದೆ.
ಎಎಪಿ ಅಭ್ಯರ್ಥಿಗಳು ಬಹುತೇಕ ಉತ್ತಮ ಅಂತರದಲ್ಲೇ ಗೆಲುವು ಸಾಧಿಸಿದ್ದಾರೆ. ಸೂರತ್ ವಾರ್ಡ್ ನಂಬರ್ 17ರಲ್ಲಿ ಎಎಪಿ ಅಭ್ಯರ್ಥಿ ಬರೋಬ್ಬರಿ 20 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದ್ದರೆ, ವಾರ್ಡ್ ನಂಬರ್ 2, 4, 5, 6 ಮತ್ತು 16ರಲ್ಲಿ ಕೂಡ ದೊಡ್ಡ ಅಂತರದ ಜಯ ದಾಖಲಿಸಿದ್ದಾರೆ. ಹಾಗಾಗಿ ಇದು ಕೇವಲ ಆಕಸ್ಮಿಕ ಗೆಲುವಲ್ಲ ಎಂಬುದನ್ನು ಈ ಅಂತರ ಹೇಳುತ್ತಿದೆ. ಸೂರತ್ ಅಷ್ಟೇ ಅಲ್ಲದೆ, ಚುನಾವಣೆ ನಡೆದ ಇತರೆ ಸ್ಥಳೀಯ ಸಂಸ್ಥೆಗಳಲ್ಲಿ ಎಎಪಿ ಯಾವುದೇ ಸ್ಥಾನ ಗಳಿಸದೇ ಹೋದರೂ, ಪಕ್ಷದ ಅಭ್ಯರ್ಥಿಗಳು ಸಾಕಷ್ಟು ಪೈಪೋಟಿ ನೀಡಿದ್ದು, ಪಕ್ಷದ ಒಟ್ಟಾರೆ ಪ್ರದರ್ಶನ ಕುತೂಹಲ ಮೂಡಿಸಿದೆ.
ಅಲ್ಲದೆ, ಇತ್ತೀಚೆಗೆ ನಡೆದ ಗೋವಾ ಮತ್ತು ಕಾಶ್ಮೀರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೂಡ ಪಕ್ಷ ಸಾಕಷ್ಟು ಒಳ್ಳೆಯ ಸಾಧನೆ ತೋರಿದೆ ಎಂಬ ಹಿನ್ನೆಲೆಯಲ್ಲಿ ಎಎಪಿ ದೆಹಲಿ ಮತ್ತು ಪಂಜಾಬಿಗೆ ಸೀಮಿತವಾಗಿ ಉಳಿದ ಪಕ್ಷ ಎಂಬ ಹಣೆಪಟ್ಟಿ ಕಳಚಿ, ದೇಶಾದ್ಯಂತ ತನ್ನ ನೆಲೆ ವಿಸ್ತರಣೆಗೆ ಈ ಗೆಲುವುಗಳು ಮಹತ್ವದ ಹೆಜ್ಜೆಗಳಾಗಿವೆ.

ಆ ಹಿನ್ನೆಲೆಯಲ್ಲಿ ಪಕ್ಷದ ಈ ಹೊಸ ದಿಗ್ವಿಜಯವನ್ನು ವಿಶೇಷವಾಗಿ ಸಂಭ್ರಮಿಸಲು ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿರ್ಧರಿಸಿದ್ಧಾರೆ. ಫೆ.26ರಂದು ಸೂರತ್ ಗೆ ಕೇಜ್ರಿವಾಲ್ ಭೇಟಿ ನೀಡಲಿದ್ದು, ಅಂದು ರೋಡ್ ಶೋ ಮೂಲಕ ಗೆದ್ದ ಅಭ್ಯರ್ಥಿಗಳ ವಿಜಯೋತ್ಸಾಹ ನಡೆಯಲಿದೆ ಎಂದು ಪಕ್ಷದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಬಿಜೆಪಿಯ ಭದ್ರಕೋಟೆಗೆ ಕನ್ನ ಹಾಕಿದ್ದೇವೆ. ಪಕ್ಷ ಗುಜರಾತಿನ ಸ್ಥಳೀಯ ಸಂಸ್ಥೆಗಳಲ್ಲಿ ಗಣನೀಯ ಜಯ ದಾಖಲಿಸಿದೆ. ಕೇಜ್ರಿವಾಲ್ ಅವರ ದೆಹಲಿ ಮಾದರಿ, ಗುಜರಾತಿನ ಜನತೆಗೆ ಹೊಸ ಭರವಸೆಯಾಗಿ ಕಂಡಿದೆ. ಎಎಪಿಯ ಶಿಕ್ಷಣ ಮತ್ತು ಆರೋಗ್ಯ ನೀತಿಗಳ ಬಗ್ಗೆ ಅವರು ವಿಶ್ವಾಸವಿಟ್ಟು ಮತ ನೀಡಿ ಪಕ್ಷದ ಅಭ್ಯರ್ಥಿಗಳಿಗೆ ಅವಕಾಶ ನೀಡಿದ್ದಾರೆ. ರಾಜ್ಯದಲ್ಲಿ ಹೊಸ ನೀತಿ, ಹೊಸ ರಾಜಕಾರಣಕ್ಕೆ ಅವಕಾಶ ನೀಡಿದ ಗುಜರಾತಿನ ಜನತೆಗೆ ಹೃದಯಪೂರ್ವಕ ಅಭಿನಂದನೆಗಳು” ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡುವ ಮೂಲಕ ಪಕ್ಷದ ಹೊಸ ವಿಸ್ತರಣೆಯ ಹೆಜ್ಜೆಯನ್ನು ಸಂಭ್ರಮಿಸಿದ್ದಾರೆ.
ಭಾನುವಾರ ಗುಜರಾತಿನ ಸೂರತ್, ಅಹಮದಾಬಾದ್, ವಡೋದರ, ರಾಜ್ ಕೋಟ್, ಜಾಮ್ ನಗರ ಮತ್ತು ಭಾವನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಆರು ಸ್ಥಳೀಯ ಸಂಸ್ಥೆಗಳ ಒಟ್ಟು 577 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಸ್ಥಾನಗಳಿಗೆ ಸ್ಪರ್ಧಿಸಿದ್ದರೆ, ಕಾಂಗ್ರೆಸ್ 566 ಸ್ಥಾನಗಳಿಗೆ ಮತ್ತು ಎಎಪಿ 470 ಸ್ಥಾನಗಳಿಗೆ ಸ್ಪರ್ಧಿಸಿದ್ದವು.