ಗುಜರಾತಿನ ಶವ ಸಂಸ್ಕಾರ ಕೇಂದ್ರಗಳಲ್ಲಿ ಕೈಲಾಶ್ ಮುಕ್ತಿ ಧಾಮ್ ಕೂಡಾ ಒಂದು. ಅದರಲ್ಲಿ ಮೃತದೇಹವನ್ನು ಹೊತ್ತಿಸುವ ನಾಲ್ಕು ಕುಲುಮೆಗಳಿವೆ. ದಿನದ 24 ಗಂಟೆಯೂ ಬಿಡುವಿಲ್ಲದೆ ನಿರಂತರ ಚಿತೆ ಉರಿಸಿದ್ದರಿಂದ ಅದರ ಕಬ್ಬಿಣದ ಚೌಕಟ್ಟು ಕರಗಿ ಶಿಥಿಲಾವಸ್ಥೆಗೆ ತಲುಪಿದೆ.
ಕರೋನಾ ಸಾವಿನ ವಿಷಯದಲ್ಲಿಯೂ ಸುಳ್ಳು ಹೇಳುತ್ತಿದೆ ಸರ್ಕಾರ!
ʼಇಲ್ಲಿ ಸುಮಾರು ಒಂದು ತಿಂಗಳ ಕಾಲ ದಿನದ 24 ಗಂಟೆಯೂ ನಿರಂತರ ಚಿತೆ ಉರಿಯುತ್ತಿತ್ತುʼ ಎನ್ನುತ್ತಾರೆ ಕೈಲಾಶ್ ಮುಕ್ತಿ ಧಾಮ್‌ನಲ್ಲಿ ಸ್ವಯಂ ಸೇವಕರಾಗಿ ದುಡಿಯುವ ರೈತ ಮಘನ್‌ಭಾಯ್. 2021 ರ ಎಪ್ರಿಲ್—ಮೇ ತಿಂಗಳ ಕರೋನಾ ಭೀಕರತೆಯನ್ನು ಅವರು ಮಾತುಗಳಲ್ಲಿ ವಿವರಿಸುತ್ತಿದ್ದರು. ಚಿತಾಗಾರದಲ್ಲಿ ಶವ ಸಂಸ್ಕಾರಕ್ಕೆ ಸೌದೆ ಕೊರತೆಯುಂಟಾಗಿ ಕೊನೆಗೆ ಸ್ಥಳೀಯ ಪತ್ರಿಕೆಗಳಲ್ಲಿ ಕಟ್ಟಿಗೆಗಳಿಗಾಗಿ ಜಾಹಿರಾತು ನೀಡುವಂತಾಗಿತ್ತು. ಚಿತಾಗಾರ ನಿರ್ವಹಣೆ ಮಾಡುತ್ತಿದ್ದ 20 ಜನರ ತಂಡದಲ್ಲಿನ ಮೂವರನ್ನು ಕೋವಿಡ್ ಬಲಿ ಪಡೆದುಕೊಂಡಿತ್ತು.
ಎರಡು ತಿಂಗಳಲ್ಲಿ 1,161 ಅಂತ್ಯ ಸಂಸ್ಕಾರಗಳು ಇಲ್ಲಿನ ಎರಡು ಚಿತಾಗಾರದಲ್ಲಿ ನಡೆದಿವೆ. ಆ ಚಿತಾಗಾರಗಳಲ್ಲಿ ಅಂತ್ಯ ಸಂಸ್ಕಾರ ನಡೆಸಲು ಸಾಧ್ಯವಿರುವ ಗರಿಷ್ಟ ಸಂಖ್ಯೆ ಅದು. ಹಾಗಾಗಿ ಹೆಚ್ಚಿನ ಮೃತದೇಹಗಳನ್ನು ಸಮೀಪದ ಗ್ರಾಮಗಳ ಬೇರೆ ಚಿತಾಗಾರಗಳಿಗೆ ರವಾನಿಸಲಾಗಿತ್ತು. ಹಾಗೂ, ಸ್ಥಳೀಯ ಮುಸ್ಲಿಂ ದಫನಭೂಮಿಯಲ್ಲಿ ನೂರರಷ್ಟು ಮೃತದೇಹಗಳನ್ನು ಹೂಳಲಾಗಿದೆ. ತುಂಬಾ ಮೃತದೇಹಗಳಿದ್ದರಿಂದ ಜೆಸಿಬಿ ಮೂಲಕ ಗುಂಡಿ ತೋಡಿ ದೇಹಗಳನ್ನು ದಫನ ಮಾಡಲಾಗಿತ್ತು.
ಭಾರತದ ಇತರ ಎಲ್ಲಾ ಭಾಗಗಳಂತೆ ಗುಜರಾತಿನ ಎಲ್ಲ ಪಟ್ಟಣಗಳಲ್ಲೂ ಕೋವಿಡ್ ಎರಡನೇ ಅಲೆಯ ವಿನಾಶಕಾರಿ ತೀವ್ರತೆ ಇತ್ತು. ಕೋವಿಡ್ ಸಾವುಗಳ ನಿಖರ ದಾಖಲಾತಿಯನ್ನು ಇಟ್ಟುಕೊಂಡಿರಬೇಕು ಎಂದು ಗುಜರಾತ್ ಹೈಕೋರ್ಟ್ ಆದೇಶಿಸಿದ್ದರೂ, 2020 ರಿಂದ ಇದುವರೆಗೆ (ಆಗಸ್ಟ್ 16) ಗುಜರಾತಿನಲ್ಲಿ ಕೋವಿಡ್ ಸಾವುಗಳ ಸಂಖ್ಯೆ 10,075 ಎಂದಷ್ಟೇ ರಾಜ್ಯ ಸರ್ಕಾರ ದಾಖಲಿಸಿದೆ. ಅದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರು, ಗುಜರಾತ್ ಸರ್ಕಾರ ಕೋವಿಡ್ ಬಿಕ್ಕಟ್ಟನ್ನು ಸರಿಯಾಗಿ ನಿರ್ವಹಿಸಿದೆ ಎಂದು ಬೆನ್ನು ತಟ್ಟಿ ಶ್ಲಾಘಿಸಿದ್ದಾರೆ.
ಚಿತಾಗಾರದ ಮುಂದೆ ಸಾಲುಗಟ್ಟಿದ ಮೃತದೇಹಗಳು; ಕೋವಿಡ್ ಸಾವುಗಳಲ್ಲಿ ಸರ್ಕಾರದ ಹಸ್ತಕ್ಷೇಪ?
ಆದರೆ ಈಗ ದೊರೆತಿರುವ ದಾಖಲೆಗಳು, ಕೋವಿಡ್ ಸಾವುಗಳ ನಿಖರ ದತ್ತಾಂಶವನ್ನು ಗುಜರಾತ್ ಸರ್ಕಾರ ಮುಚ್ಚಿಟ್ಟಿದೆ ಎಂದು ಸಾರುತ್ತಿವೆ.
ಗುಜರಾತಿನ ಒಟ್ಟು 170 ಪುರಸಭೆಗಳಲ್ಲಿ 68 ಪುರಸಭೆಗಳ ಕೋವಿಡ್ ಮರಣ ದಾಖಲಾತಿಗಳು ಲಭ್ಯವಾಗಿವೆ. ಸಾವು ಮತ್ತು ಸಾವಿನ ಕಾರಣವನ್ನು ಆಯಾ ಪುರಸಭೆಯ ಅಧಿಕಾರಿಗಳೇ ಬರೆದಿಟ್ಟ ದಾಖಲೆಗಳು ಇವು. ಜನವರಿ 2019 ರಿಂದ ಎಪ್ರಿಲ್ 2021 ರ ಅವಧಿಯಲ್ಲಿ ಕೈಯಿಂದಲೇ ಬರೆದ ಮರಣ ದಾಖಲೆಗಳು ಇವು. ಸಾವಿರಾರು ಪುಟಗಳಲ್ಲಿರುವ ಈ ದತ್ತಾಂಶಗಳನ್ನು ರಾಜ್ಯ ಸರ್ಕಾರದ ದತ್ತಾಂಶಗಳೊಂದಿಗೆ ತಾಳೆ ಹಾಕಿದಾಗ ರಾಜ್ಯ ಸರ್ಕಾರದ ದತ್ತಾಂಶಗಳು ನಿಖರವಾಗಿಲ್ಲ ಎನ್ನುವುದು ಬಯಲಿಗೆ ಬಂದಿದೆ.
ದೊರಕಿರುವ 68 ಪುರಸಭೆಗಳ ದತ್ತಾಂಶಗಳ ಪ್ರಕಾರ, ಸಾಂಕ್ರಾಮಿಕ ರೋಗದ ಹಿಂದಿನ ವರ್ಷದ ಎಲ್ಲಾ ರೀತಿಯ ಸಾವುಗಳಿಗೆ ಹೋಲಿಸಿದರೆ, ಮಾರ್ಚ್ 2020 ರಿಂದ 2021 ಎಪ್ರಿಲ್ ವರೆಗೆ ಹೆಚ್ಚುವರಿ 16,892 ಸಾವುಗಳು ಸಂಭವಿಸಿವೆ.
ಕೋವಿಡ್ ಮರಣ ಸಂಖ್ಯೆಯಲ್ಲಿ ಸುಳ್ಳು ಲೆಕ್ಕ: ದೆಹಲಿ ಅಂಕಿ ಅಂಶದಲ್ಲಿ 1000 ಕ್ಕೂ ಹೆಚ್ಚು ಕೋವಿಡ್ ಮರಣಗಳು ನಾಪತ್ತೆ
6.03 ಕೋಟಿ ಜನಸಂಖ್ಯೆ ಇರುವ ಗುಜರಾತಿನ ಕೇವಲ 6 ಶೇಕಡಾ ಜನಸಂಖ್ಯೆ ಈ 68 ಪುರಸಭೆಗಳ ವ್ಯಾಪ್ತಿಯಲ್ಲಿದೆ. ಈ ಪುರಸಭೆಗಳ ಸಾವಿನ ಸಂಖ್ಯೆಗಳನ್ನು ಇಡೀ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಲೆಕ್ಕ ಹಾಕಿದರೆ, ಕನಿಷ್ಟ 2.81 ಲಕ್ಷ ಜನರು ಕೋವಿಡ್‌ನಿಂದಾಗಿ ಸಾವನ್ನಪಿರಬೇಕು. ಇದು, ಈಗಾಗಲೇ ರಾಜ್ಯ ಸರ್ಕಾರ ನೀಡಿರುವ ಕೋವಿಡ್ ಸಾವುಗಳ ಸಂಖ್ಯೆಗಿಂತ 27 ಪಟ್ಟು ಹೆಚ್ಚು!
ಕೋವಿಡ್ ಸಾವುಗಳ ಬಹುಪಾಲು ಅಧಿಕೃತ ದಾಖಲಾಗಿಲ್ಲ ಎನ್ನುವುದನ್ನು ಪುರಸಭೆಯಲ್ಲಿ ದೊರೆತಿರುವ ಅಂಕಿ ಅಂಶಗಳು ಸಾಬೀತುಪಡಿಸುತ್ತವೆ ಎಂದು ಹಾರ್ವರ್ಡ್‌ನ ಟಿ.ಎಚ್.ಚಾನ್ ಸ್ಕೂಲ್‌ನ ಸಾಂಕ್ರಾಮಿಕ ರೋಗ ವಿಭಾಗಗಳ ಪ್ರಾಧ್ಯಾಪಕರಾದ ಡಾ. ಕ್ಯಾರೊಲಿನ್ ಬ್ಯೂಕಿ ಹೇಳುತ್ತಾರೆ.
ಸಾಂಕ್ರಾಮಿಕ ಸಮಯದ ಒಂದು ನಿರ್ದಿಷ್ಟ ಅವಧಿಯ ಒಟ್ಟು ಸಾವುಗಳನ್ನು ಹಿಂದಿನ ಸಾಮಾನ್ಯ ವರ್ಷದ ಅದೇ ಅವಧಿಯೊಂದಿಗೆ ಹೋಲಿಸುವ ಮೂಲಕ ʼಹೆಚ್ಚುವರಿ ಸಾವುಗಳನ್ನು’ ಗುರುತಿಸಲಾಗುತ್ತದೆ. ಸಾಂಕ್ರಾಮಿಕ ರೋಗದ ಸಾವುಗಳನ್ನು ಲೆಕ್ಕ ಹಾಕಲು “ಹೆಚ್ಚುವರಿ ಸಾವುಗಳು” ಅತ್ಯಂತ ನಿಖರವಾದ ಮಾರ್ಗವಾಗಿದೆ. ಅದಾಗ್ಯೂ, ಎಲ್ಲಾ ಹೆಚ್ಚುವರಿ ಸಾವುಗಳನ್ನು ಕೋವಿಡ್ ಸಾವುಗಳೆಂದೇ ಪರಿಗಣಿಸಲಾಗುವುದಿಲ್ಲ. ಆದರೆ, ಸಾಂಕ್ರಾಮಿಕ ಅಥವಾ ಅದರಿಂದುಂಟಾದ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿನ ವ್ಯತ್ಯಯದಿಂದ ಆದಂಥವುಗಳಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಆದರೂ, ಸದ್ಯ ಗುಜರಾತಿನ “ಹೆಚ್ಚುವರಿ ಸಾವು” ಗಳೆಂದು ಲೆಕ್ಕ ಹಾಕಿರುವ ಅಂದಾಜಿಗೆ ಅದರದ್ದೇ ಆದ ಮಿತಿಗಳಿವೆ. ಯಾಕೆಂದರೆ, ದತ್ತಾಂಶಗಳು ಪಡೆದುಕೊಂಡ ಪುರಸಭೆಗಳು ರಾಜ್ಯದ ಗ್ರಾಮೀಣ ಭಾಗವನ್ನು ಪ್ರತಿನಿಧಿಸುವುದಿಲ್ಲ. ರಾಜ್ಯದ ಜನ ಸಂಖ್ಯೆಯ 57% ಜನಸಂಖ್ಯೆ ಗ್ರಾಮೀಣ ಭಾಗದಲ್ಲೇ ಇವೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಆರೋಗ್ಯ ಮೂಲಭೂತ ಸೌಕರ್ಯ ಇನ್ನೂ ಕಡಿಮೆ ಪ್ರಮಾಣದಲ್ಲಿವೆ.
ಅಲ್ಲದೆ, ಈ ವರದಿಯಲ್ಲಿ 2021 ರ ಮೇ ತಿಂಗಳ ಅಂಕಿ ಅಂಶಗಳನ್ನು ಲೆಕ್ಕ ಹಾಕಿಲ್ಲ. ಮೂರು ಪುರಸಭೆಗಳಲ್ಲಿ ಮಾತ್ರ 2021 ರ ಮೇ ತಿಂಗಳ ಮಾಹಿತಿಯು ದಾಖಲಾಗಿದ್ದರಿಂದ, ಮೇ ತಿಂಗಳ ಅಂಕಿ ಅಂಶಗಳನ್ನು ಕೈ ಬಿಡಲಾಗಿದೆ. ಮೇ ತಿಂಗಳಲ್ಲಿ ಎಪ್ರಿಲ್‌ಗಿಂತಲೂ ಹೆಚ್ಚು ಕೋವಿಡ್ ಸಾವುಗಳಾಗಿತ್ತು ಎಂದು ಸರ್ಕಾರದ ಅಂಕಿ ಅಂಶಗಳೇ ಹೇಳಿದೆ. ಹಾಗಾಗಿ, ಒಟ್ಟಾರೆ ಹೆಚ್ಚುವರಿ ಸಾವುಗಳು ಈಗ ಅಂದಾಜಿಸಿರುವುದಕ್ಕಿಂತಲೂ ಹೆಚ್ಚಾಗುವ ಸಾಧ್ಯತೆ ಬಲವಾಗಿದೆ.
ಕೇವಲ ಎಪ್ರಿಲ್ ತಿಂಗಳಲ್ಲಿ ಮಾತ್ರ, ಈಗ ಲೆಕ್ಕ ಹಾಕಿರುವ 6% ಜನಸಂಖ್ಯೆಯಲ್ಲಿ 10,238 ಹೆಚ್ಚುವರಿ ಸಾವುಗಳಾಗಿವೆ. ಇದು ರಾಜ್ಯಾದ್ಯಂತ ಕೋವಿಡ್ ನಿಂದ ಸತ್ತವರ ಕುರಿತು ಸರ್ಕಾರ ಅಧಿಕೃತವಾಗಿ ನೀಡಿರುವ ಸಂಖ್ಯೆಗಳಿಗಿಂತಲೂ ಅಧಿಕ.