ಗುಜರಾತ್ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಹಾರ್ದಿಕ್ ಪಟೇಲ್ ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅವಮಾನಕರ ಸೋಲಿನ ನಂತರ ರಾಜ್ಯ ಕಾಂಗ್ರೆಸ್ ಘಟಕದ ಕಾರ್ಯಚಟುವಟಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆಯಲ್ಲಿ ತಮಗೆ ಯಾವುದೇ ಕೆಲಸ ನೀಡಲಾಗಿಲ್ಲ ಮತ್ತು ಟಿಕೆಟ್ ವಿತರಣೆಯಲ್ಲಿ ತನ್ನ ಅಭಿಪ್ರಾಯವನ್ನು ಸಹ ಕೇಳಲಾಗಿಲ್ಲ ಎಂದು ಅವರು ದೂರಿದ್ದಾರೆ.
ಆದಾಗ್ಯೂ, ಭವಿಷ್ಯದಲ್ಲಿ ಕಾಂಗ್ರೆಸ್ ತೊರೆಯುವ ಊಹಾಪೋಹಗಳನ್ನು ತಳ್ಳಿಹಾಕಿದ ಅವರು, ತಾನು ಪಕ್ಷದಲ್ಲಿ ಉಳಿಯುವುದಾಗಿಯೂ, ಪಕ್ಷ ತನಗೆ ನೀಡಿದ ಯಾವುದೇ ಜವಾಬ್ದಾರಿಯನ್ನು ನಿಭಾಯಿಸುವುದಾಗಿ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗಿನ ಸಂದರ್ಶನವೊಂದರಲ್ಲಿ ಭಾಗಿಯಾದ ಅವರು, ಪಕ್ಷದ ಕೇಂದ್ರ ನಾಯಕತ್ವದ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುಜರಾತಿನಲ್ಲಿ ಸಮರ್ಥ ವಿರೋಧಪಕ್ಷವಾಗಲು ಕಾಂಗ್ರೆಸ್ ವಿಫಲವಾಗಿದೆ. ಪಕ್ಷವನ್ನು ಬಲಪಡಿಸಲು ಹೈಕಮಾಂಡ್ ಗುಜರಾತ್ ಅನ್ನು ಅರ್ಥಮಾಡಿಕೊಳ್ಳಬೇಕು. ಶಾಸಕರನ್ನು ಸಂಘಟನೆಯ ಕೆಲಸದಿಂದ ದೂರವಿಡಬೇಕು ಎಂದು ಪಟೇಲ್ ಅಭಿಪ್ರಾಯಿಸಿದ್ದಾರೆ.

ಪಕ್ಷದ ಸೋಲಿನ ಕಾರಣಗಳ ಬಗ್ಗೆ ಕೇಳಿದಾಗ, “ನಾವು ಸಾರ್ವಜನಿಕರ ವಿಶ್ವಾಸವನ್ನು ಗೆಲ್ಲುವಲ್ಲಿ ವಿಫಲರಾಗಿದ್ದೇವೆ. ಪ್ರತಿಪಕ್ಷವಾಗಿ ನಾವು ಕೈಗೊಳ್ಳಬೇಕಾದ ಹೋರಾಟದಲ್ಲಿ ವಿಫಲರಾಗಿದ್ದೇವೆ. ಕಾಂಗ್ರೆಸ್ ತನ್ನ ಕೆಲಸವನ್ನು ಮಾಡಲಿಲ್ಲ ಎಂದು ಸಾರ್ವಜನಿಕರು ಭಾವಿಸುತ್ತಾರೆ. ವಿರೋಧ ಪಕ್ಷವಾಗಿ ಕೆಲಸ ಮಾಡಿದಕ್ಕಾಗಿಯೇ ಆಮ್ ಆದ್ಮಿ ಪಕ್ಷವು ಅನೇಕ ಸ್ಥಳಗಳಲ್ಲಿ ಮತಗಳನ್ನು ಪಡೆದುಕೊಂಡಿದೆ ಎಂದವರು ಹೇಳಿದ್ದಾರೆ.
“ಸೂರತ್‌ನಲ್ಲಿ, ನಮ್ಮ (ಪಾಟೀದಾರ್) ಚಳವಳಿಯ ಜನರು ಕೇವಲ ಎರಡು ಟಿಕೆಟ್‌ಗಳನ್ನು ಮಾತ್ರ ಕೇಳಿದ್ದರು. ಪಕ್ಷವು ಅದನ್ನು ಸಹ ನೀಡಲಿಲ್ಲ. ಆ ಎರಡು ಸ್ಥಾನಗಳ ಕಾರಣದಿಂದಾಗಿ ನಾವು ಅಲ್ಲಿನ ಎಲ್ಲಾ 36 ಸ್ಥಾನಗಳನ್ನು ಕಳೆದುಕೊಂಡಿದ್ದೇವೆ” ಎಂದು ಪಟೇಲ್ ಹೇಳಿದ್ದಾರೆ.
ಗಮನಿಸಬೇಕಾದ ಸಂಗತಿಯೆಂದರೆ, ಕಳೆದ ಚುನಾವಣೆಗಳಲ್ಲಿ, ಸೂರತ್‌ನ ಪಾಟೀದಾರ್ ಪ್ರಾಬಲ್ಯದ ಪ್ರದೇಶಗಳಲ್ಲಿ ಕಾಂಗ್ರೆಸ್ 30 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು.

ಯಾವುದೇ ನಾಯಕನನ್ನು ಹೆಸರು ಉಲ್ಲೇಖಿಸದ ಪಟೇಲ್, “ನಾನು ಕಾರ್ಯನಿರತ ಅಧ್ಯಕ್ಷ ಆದರೂ ಟಿಕೆಟ್ ವಿತರಣೆಯಲ್ಲಿ ನನಗೆ ಯಾವುದೇ ಪಾತ್ರವಿಲ್ಲ. ಕಾರ್ಯನಿರತ ಅಧ್ಯಕ್ಷರಿಗೆ ಇದರಲ್ಲಿ ಯಾವುದೇ ಪಾತ್ರವಿಲ್ಲ ಎಂದು ನನಗೆ ತಿಳಿಸಲಾಯಿತು. ಪ್ರದೇಶ ಕಾಂಗ್ರೆಸ್ ಸಮಿತಿಯ ಯಾವುದೇ ಕೆಲಸ ನನಗೆ ನೀಡಲಾಗಿಲ್ಲ, ಅದಾಗ್ಯೂ, ನಾನು ಹಲವಾರು ಸಭೆಗಳನ್ನು ನಡೆಸಿದೆ. ” ಎಂದು ಅವರು ತಿಳಿಸಿದ್ದಾರೆ.
“ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಿದ್ಧತೆಗಳು ಮೂರು ತಿಂಗಳಿಂದ ನಡೆಯುತ್ತಿದ್ದವು. ನೀವು ಈ ಕೆಲಸವನ್ನು ಮಾಡಬೇಕು ಎಂದು ಮೂರು ತಿಂಗಳಲ್ಲಿ ಒಮ್ಮೆಯೂ ನನಗೆ ಹೇಳಲಾಗಿಲ್ಲ. 5,000 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಟಿಕೆಟ್ ವಿತರಿಸಲಾಯಿತು, ಆದರೆ ಒಂದು ಸ್ಥಾನಕ್ಕೂ ನನ್ನ ಅಭಿಪ್ರಾಯವನ್ನು ಕೇಳಿಲ್ಲ. ಪಾಟೀದಾರ್ ಪ್ರಾಬಲ್ಯದ ಪ್ರದೇಶಗಳಲ್ಲಿಯೂ ಸಹ, ನನ್ನ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗಿಲ್ಲ “ಎಂದು ಅವರು ಹೇಳಿದ್ದಾರೆ.