ಗುಜರಾತ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮುನ್ನ ಹಠಾತ್ ಬೆಳವಣಿಗೆಯೊಂದರಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ ನೀಡಿದ ನಂತರ, ಭೂಪೇಂದ್ರಭಾಯಿ ರಜನಿಕಾಂತಭಾಯಿ ಪಟೇಲ್ ಅವರನ್ನು ಗುಜರಾತ್ನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಭೂಪೇಂದ್ರಭಾಯಿ ರಜನಿಕಾಂತಭಾಯಿ ಪಟೇಲ್ ಅವರು ಸೋಮವಾರ (ಸೆಪ್ಟೆಂಬರ್ 13) ಗುಜರಾತ್ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಭೂಪೇಂದ್ರಭಾಯಿ ರಜನಿಕಾಂತಭಾಯಿ ಪಟೇಲ್ ಗುಜರಾತ್ನ 17ನೇ ಮುಖ್ಯಮಂತ್ರಿಯಾಗಲಿದ್ದಾರೆ. ಭೂಪೇಂದ್ರ ಪಟೇಲ್ ಅವರನ್ನು ಅವರ ಬೆಂಬಲಿಗರು ಪ್ರೀತಿಯಿಂದ ‘ದಾದಾ’ ಎಂದು ಕರೆಯುತ್ತಾರೆ. ಮುಂಬರುವ ಗುಜರಾತ್ ಚುನಾವಣೆಗಳ ದೃಷ್ಟಿಯಿಂದ ಬಿಜೆಪಿ ಪಕ್ಷವು ಗುಜರಾತಿನ ಪಾಟಿದಾರ್ ಸಮುದಾಯದ ಭೂಪೇಂದ್ರ ಪಟೇಲ್ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಿದೆ ಎಂದು ವಿಶ್ಲೇಷಿಸಲಾಗಿದೆ.
ವಿಜಯ್ ರೂಪಾನಿ ಅವರು ಶನಿವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಈ ವರ್ಷ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ರಾಜೀನಾಮೆ ನೀಡಿದ ನಾಲ್ಕನೇ ಸಿಎಂ ಆದರು. ಈ ಹಿಂದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉತ್ತರಾಖಂಡ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಮತ್ತು ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಸಲ್ಲಿಸಿದ್ದಾರೆ.
ಶನಿವಾರ (ಸೆಪ್ಟೆಂಬರ್ 11) ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ ನೀಡಿದ ಬೆನ್ನಲ್ಲೇ ಭಾನುವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಯಾಗಿ ಚುನಾಯಿತರಾದ 59 ವರ್ಷದ ಭೂಪೇಂದ್ರಭಾಯಿ ಹೆಸರನ್ನು ಘೋಷಿಸಿದ್ದು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿತು. ಏಕೆಂದರೆ, ಮುಖ್ಯಮಂತ್ರಿ ಹುದ್ದೆಯ ರೇಸ್ನಲ್ಲಿಯೇ ಇಲ್ಲದ ಹೆಸರನ್ನು ಮುನ್ನೆಲೆಗೆ ತಂದು ಕಮಲ ಹೈಕಮಾಂಡ್ ಈ ನಿರ್ಧಾರವನ್ನು ತೆಗೆದುಕೊಂಡಿತು. ಆದಾಗ್ಯೂ, ಬಿಜೆಪಿಯೊಳಗೆ ಸೌಮ್ಯ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದ ಮತ್ತು ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ಆಪ್ತರಾದ ಭೂಪೇಂದ್ರ ಪಟೇಲ್ ಅವರಆಯ್ಕೆಯು ಪಕ್ಷದ ಶಾಸಕಾಂಗ ಸಭೆಯಲ್ಲಿ ಹಾಜರಿದ್ದ ಎಲ್ಲ ನಾಯಕರ ಸರ್ವಾನುಮತದ ನಿರ್ಧಾರವಾಗಿದೆ ಎಂದು ಬಿಜೆಪಿ ಹೇಳಿದೆ.
ಅಹಮದಾಬಾದ್ನಲ್ಲಿ ಜನಿಸಿದ ಭೂಪೇಂದ್ರಭಾಯಿ ರಜನಿಕಾಂತಭಾಯಿ ಪಟೇಲ್, ಘಟ್ಲೋಡಿಯಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಈ ಹಿಂದೆ ಆನಂದಿಬೆನ್ ಪಟೇಲ್ ಅವರು ಈ ಸ್ಥಾನವನ್ನು ಹೊಂದಿದ್ದರು, ಅವರು ಪ್ರಸ್ತುತ ಮಧ್ಯಪ್ರದೇಶದ ಹೆಚ್ಚುವರಿ ಉಸ್ತುವಾರಿಯೊಂದಿಗೆ ಉತ್ತರ ಪ್ರದೇಶದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಭೂಪೇಂದ್ರಭಾಯಿ ರಜನಿಕಾಂತಭಾಯಿ ಪಟೇಲ್ 2017 ರಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಶಶಿಕಾಂತ್ ಪಟೇಲ್ ಅವರನ್ನು 1,17,000 ಮತಗಳ ಅಂತರದಿಂದ ಸೋಲಿಸಿ ಗೆದ್ದಿದ್ದರು.
2017ರ ವಿಧಾನಸಭಾ ಚುನಾವಣೆಯಲ್ಲಿ ಅವರು ಘಾಟ್ಲೋಡಿಯಾ ಕ್ಷೇತ್ರದಲ್ಲಿ ಶೇಕಡಾ 72 ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದರು. ಆದಾಗ್ಯೂ, ಪಟೇಲ್ ರಾಜಕೀಯದಲ್ಲಿ ಹೊಸ ಮುಖವಲ್ಲ ಮತ್ತು ಅಹಮದಾಬಾದ್ ಮುನ್ಸಿಪಲ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಿವಿಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಡೆದಿರುವ ಪಟೇಲ್, ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಮತ್ತು ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ (AUDA) ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ 2022 ರಲ್ಲಿ ನಡೆಯಲಿದ್ದು, ಬಿಜೆಪಿ ಮುಖ್ಯಮಂತ್ರಿಗಾಗಿ ಪಾಟಿದಾರ್ ಸಮುದಾಯದ ಭೂಪೇಂದ್ರ ಪಟೇಲ್ ಅವರೊಂದಿಗೆ ಚುನಾವಣೆ ಎದುರಿಸಲಿದೆ. ಅವರು ಪಾಟಿದಾರ್ ಸಂಸ್ಥೆಗಳಾದ ಸರ್ದಾರ್ ಧಾಮ್ ಮತ್ತು ವಿಶ್ವ ಉಮಿಯ ಫೌಂಡೇಶನ್ನ ಟ್ರಸ್ಟಿಯಾಗಿದ್ದಾರೆ. ವಾಸ್ತವವಾಗಿ, ಪಾಟಿದಾರರು ಗುಜರಾತಿನಲ್ಲಿ ಪ್ರಬಲ ಜಾತಿಯಾಗಿದ್ದು, ಚುನಾವಣಾ ಮತಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಿದ್ದಾರೆ. ಈ ಸಮುದಾಯವು ರಾಜಕೀಯ, ಆರ್ಥಿಕ, ಶಿಕ್ಷಣ, ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರಗಳ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರಬಲ್ಲವರಾಗಿದ್ದಾರೆ.
ಪಟೇಲ್ ಸಮುದಾಯದ ಒಬ್ಬರಿಗೆ ಗುಜರಾತ್ನಲ್ಲಿ ಮುಖ್ಯಮಂತ್ರಿ ಪಟ್ಟ ಕಟ್ಟುವುದು ಬಿಜೆಪಿಗೆ ಮುಖ್ಯವಾಗಿತ್ತು. ಏಕೆಂದರೆ ಅವರು ಪಾಟಿದಾರ್ ಆಗಿರುವುದಲ್ಲದೆ, ಕದ್ವಾ ಪಟೇಲ್ ಎಂಬ ಉಪಜಾತಿಗಳನ್ನೂ ಈ ಸಮುದಾಯ ಒಳಗೊಂಡಿದೆ.
ರಾಜ್ಯದ ಜನಸಂಖ್ಯೆಯ ಶೇಕಡಾ 12.4 ರಷ್ಟಿರುವ ಕದ್ವಾ ಪಟೇಲ್ ಸಮುದಾಯದಿಂದ ಗುಜರಾತಿನ ಮೊದಲ ಮುಖ್ಯಮಂತ್ರಿಯಾಗಲಿದ್ದಾರೆ. ಇಲ್ಲಿಯವರೆಗೆ ಗುಜರಾತಿನ ಎಲ್ಲಾ “ಪಟೇಲ್” ಮುಖ್ಯಮಂತ್ರಿಗಳು ಲಿಯುವಾ ಪಟೇಲ್ ಸಮುದಾಯದಿಂದ ಬಂದವರು. ಇದೀಗ ಗುಜರಾತಿನ 17ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಭೂಪೇಂದ್ರ ಪಟೇಲ್ ಕದ್ವಾ ಪಟೇಲ್ ಸಮುದಾಯಕ್ಕೆ ಸೇರಿದ್ದಾರೆ ಎಂಬುದು ಗಮನಾರ್ಹ ವಿಷಯವಾಗಿದೆ.
ಹೀಗೆ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಗುಜರಾತ್ ನಲ್ಲಿ ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆ ನಡೆಸಿ ಜಾತಿ ವೋಟ್ ಬ್ಯಾಂಕ್ ಗಟ್ಟಿಮಾಡಿಕೊಂಡಿದೆ. ಅದರ ಮಹತ್ವದ ಭಾಗವಾಗಿಯೇ ಈಗ ಸಿಎಂ ಆಗಿ ಭೂಪೇಂದ್ರಭಾಯಿ ರಜನಿಕಾಂತಭಾಯಿ ಪಟೇಲ್ ಅಧಿಕಾರ ಸ್ವೀಕರಿಸಿದ್ದಾರೆ.