ಗುಜರಾತ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭೂಪೇಂದ್ರ ಪಟೇಲ್‌ರವರು ಗುರುವಾರ 24 ಜನರನ್ನೊಳಗೊಂಡ ನೂತನ ಸಚಿವ ಸಂಪುಟವನ್ನು ರಚಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಯವರ ಮಂತ್ರಿ ಮಂಡಲದಲ್ಲಿದ್ದ 21 ಶಾಸಕರ ಸಚಿವ ಸ್ಥಾನಕ್ಕೆ ಕೊಕ್ ನೀಡಲಾಗಿದ್ದು ಬದಲಿಗೆ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಜೊತೆಗೆ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಮೂವರಿಗೆ ಮತ್ತೆ ಅಧಿಕಾರದ ಅದೃಷ್ಟ ಒಲಿದು ಬಂದಿದೆ.
ವಿಶೇಷ ಸಂಗತಿ ಎಂದರೆ ಸಿಎಂ ಪಟೇಲ್‌ರವರು ಇದೇ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇವರ ಜೊತೆಯಲ್ಲಿ ಒಮ್ಮೆಯು ಸಚಿವರಾಗಿ ಕೆಲಸ ಮಾಡಿದ ಯಾವುದೇ ಅನುಭವ ಇಲ್ಲದ 21 ಶಾಸಕರು ನೂತನ ಸಚಿವ ಸಂಪುಟವನ್ನು ಸೇರಿದ್ದಾರೆ.
ಈ ಹಿಂದೆ ವಿಧಾನಸಭೆ ಸ್ಪೀಕರ್ ಆಗಿದ್ದ ರಾಜೇಂದ್ರ ತ್ರಿವೇದಿ, ಗುಜರಾತ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಜಿತುಭಾಯ್ ವಘಾನಿ, ಪೂರ್ಣೇಶ್ ಮೋದಿ, ರಾಘವ್‌ಜಿ ಪಟೇಲ್, ಕನುಭಾಯ್ ದೇಸಾಯಿ, ಕೃತಿಸಿನ಼ ರಾಣಾ, ನರೇಶ ಪಟೇಲ್, ಪ್ರದೀಪ ಪರ್ಮಾರ್ ಮತ್ತು ಅರ್ಜುನ್ ಸಿನ಼ ಚೌಹಾಣ್ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ತ್ರಿವೇದಿ, ರಾಣಾ ಮತ್ತು ರಾಘವ್‌ಜಿ ಈ ಹಿಂದೆ ಮಂತ್ರಿಗಳಾಗಿದ್ದ ಅನುಭವವನ್ನು ಹೊಂದಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವಿಜಯ್ ರೂಪಾನಿ ಅವರನ್ನು ಹಠಾತ್ತನೆ ಸಿಎಂ ಸ್ಥಾನದಿಂದ ಕೆಳಗಿಳಿಸಿ ಪಟೇಲ್‌ರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಮತ್ತು ರಾಜ್ಯ ಬಿಜೆಪಿ ನಾಯಕರಲ್ಲಿ ಈ ಬಗ್ಗೆ ಅಸಮಾಧಾನದ ಬೇಗುದಿ ಹೊಗೆಯಾಡುತ್ತಿದ್ದೆ.
ನೂತನ ಸಚಿವ ಸಂಪುಟ ಪ್ರಮಾಣವಚನ ಕಾರ್ಯಕ್ರಮದಲ್ಲಿ ತುಸು ಬದಲಾವಣೆ ಇತ್ತು. ಆದರೆ, ಬಹಿರಂಗ ಬಂಡಾಯವಿಲ್ಲದೆ ಕಾರ್ಯಕ್ರಮ ಸುಗಮವಾಗಿ ಮುಗಿದಿದೆ. 2022ರ ಅಂತ್ಯಕ್ಕೆ ನಡೆಯುವ ಗುಜರಾತ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತದಲ್ಲಿ ಅಮೂಲಾಗ್ರ ಬದಲಾವಣೆ ತರಲಾಗಿದೆ.
ನೂತನ ಮಂತ್ರಿ ಮಂಡಲದ ಮೂಲಕವೇ ಮತದಾರರನ್ನು ಸೆಳೆಯುವುದು ತನ್ನ ಉದ್ದೇಶ ಎಂದು ಬಿಜೆಪಿ ವರಿಷ್ಠರು ಈ ಮೂಲಕ ರಾಜ್ಯ ನಾಯಕರಿಗೆ ಸ್ಪಷ್ಟಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಅಸಮಾಧಾನವನ್ನು ಹಿರಿಯ ನಾಯಕರು ಹೇಗೆ ತಣಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.