ಅದಾನಿ ಉದ್ಯಮ ಸಮೂಹದ ಮಾಲೀಕತ್ವದ ಗುಜರಾತ್ ಮುಂದ್ರಾ ಬಂದರಿನಲ್ಲಿ ಮೂರು ಟನ್ ಹೆರಾಯಿನ್ ವಶಪಡಿಸಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ದೇಶಾದ್ಯಂತ ಭಾರೀ ಚರ್ಚೆ ಆರಂಭವಾಗಿದೆ.
ಕೇಂದ್ರ ರೆವಿನ್ಯೂ ಗುಪ್ತಚರ ನಿರ್ದೇಶನಾಲಯ ಬಂದರಿನ ಕಂಟೇನರ್ಗಳ ಪರಿಶೀಲನೆ ನಡೆಸುವ ವೇಳೆ ಬರೋಬ್ಬರಿ 21 ಸಾವಿರ ಕೋಟಿ ಮೌಲ್ಯದ ಈ ಭಾರೀ ಮಾದಕ ವಸ್ತು ವಶಪಡಿಸಿಕೊಂಡಿದ್ದು, ಈ ಪ್ರಮಾಣದ ಮಾದಕ ವಸ್ತುವನ್ನು ಒಂದೇ ಪ್ರಕರಣದಲ್ಲಿ ವಶಕ್ಕೆ ಪಡೆದಿರುವುದು ಬಹುಶಃ ಜಾಗತಿಕ ಮಟ್ಟದಲ್ಲೇ ಇದು ಮೊದಲ ಬಾರಿ ಎನ್ನಲಾಗುತ್ತಿದೆ. ಇರಾನ್ ಬಂದರಿನಿಂದ ಮುಂದ್ರಾಕ್ಕೆ ಬಂದಿರುವ ಎರಡು ಕಂಟೇನರ್ ಗಳಲ್ಲಿ ಈ ಮಾದಕ ವಸ್ತು ಪತ್ತೆಯಾಗಿದ್ದು, ಟಾಲ್ಕಂ ಪೌಡರ್ ಕಚ್ಚಾವಸ್ತು ಎಂದು ಸಾಗಾಣೆ ಮಾಡಲಾಗುತ್ತಿತ್ತು. ಪ್ರಕರಣದ ಸಂಬಂಧ ಕಂಟೇನರ್ ತರಿಸುತ್ತಿದ್ದ ತಮಿಳುನಾಡು ಮೂಲದ ಉದ್ಯಮಿ ದಂಪತಿ ಸುಧಾಕರ್ ಹಾಗೂ ಅವರ ಪತ್ನಿ ದುರ್ಗ ವೈಶಾಲಿ ಎಂಬುದನ್ನು ವಶಕ್ಕೆ ಪಡೆದಿರುವ ರೆವಿನ್ಯೂ ಇಂಟೆಲಿಜೆನ್ಸ್ ಇಡಿ, ತನಿಖೆ ಮುಂದುವರಿಸಿದೆ.
ಆದರೆ, ಬೆಚ್ಚಿಬೀಳಿಸುವ ಪ್ರಮಾಣದ ಈ ಬಾರೀ ಮಾದಕ ವಸ್ತು ಪತ್ತೆಯಾಗಿರುವುದು ಅಧಿಕಾರಿಗಳ ಮಾಮೂಲಿ ತಪಾಸಣೆ ವೇಳೆಯೇ ವಿನಃ, ಯಾವುದೇ ಮಾಹಿತಿ ಆಧಾರಿಸಿದ ದಾಳಿಯ ವೇಳೆಯಲ್ಲ ಮತ್ತು ಈ ಇತ್ತೀಚಿನ ವರ್ಷಗಳಲ್ಲಿ ಮುಂದ್ರಾ ಬಂದರಿನ ಮೂಲಕ ಈಗಾಗಲೇ ಸುಮಾರು 10 ಕಂಟೇನರ್ ಗಳಷ್ಟು ಮಾದಕ ವಸ್ತು ದೇಶದೊಳಕ್ಕೆ ಸಾಗಣೆಯಾಗಿದೆ ಎಂಬ ಮಾಹಿತಿಗಳ ಹಿನ್ನೆಲೆಯಲ್ಲಿ ಇಡೀ ಪ್ರಕರಣ ಆತಂಕ ಹುಟ್ಟಿಸಿದೆ. ಜೊತೆಗೆ ಪ್ರಧಾನಿ ಮೋದಿಯವರ ಪರಮಾಪ್ತ ಉದ್ಯಮಿಯ ಒಡೆತನದ ಬಂದರಿನಲ್ಲಿಯೇ ಈ ಪ್ರಮಾಣದ ಮಾದಕ ವಸ್ತು ಹೇಗೆ ಸುರಕ್ಷಿತವಾಗಿತ್ತು? ಕಳೆದ ಹಲವು ವರ್ಷಗಳಿಂದ ಗುಜರಾತಿನ ವಿವಿಧ ಬಂದರುಗಳ ಮೂಲಕವೇ ಭಾರೀ ಪ್ರಮಾಣದ ಮಾದಕ ವಸ್ತು ದೇಶದೊಳಗೆ ಬರುತ್ತಿರುವುದು ಹಲವು ಪ್ರಕರಣಗಳಲ್ಲಿ ಸಾಬೀತಾಗಿದ್ದರೂ ಯಾಕೆ ಅಲ್ಲಿನ ಬಂದರುಗಳಲ್ಲಿ ಅಗತ್ಯ ತನಿಖಾ ವ್ಯವಸ್ಥೆಯನ್ನು ಮಾಡಿಲ್ಲ? ಯಾಕೆ ದೇಶದ ಮಾದಕವಸ್ತು ನಿಯಂತ್ರಣ ವ್ಯವಸ್ಥೆಯನ್ನು ಮೋದಿಯವರ ಸರ್ಕಾರ ಬಲಪಡಿಸಿಲ್ಲ ಎಂಬ ಪ್ರಶ್ನೆಗಳೂ ಎದ್ದಿವೆ.
ಅದರಲ್ಲೂ ಸ್ವತಃ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯದಲ್ಲಿ, ಕಳೆದ ಎರಡೂವರೆ ದಶಕದಿಂದ ಬಿಜೆಪಿಯೇ ಅಧಿಕಾರದಲ್ಲಿರುವ ರಾಜ್ಯದಲ್ಲಿ ಹೀಗೆ ಭಾರೀ ಪ್ರಮಾಣದ ಮಾದಕ ವಸ್ತು ಪಾಕಿಸ್ತಾನ, ಆಫ್ಘಾನಿಸ್ತಾನ, ಇರಾನ್ ಮುಂತಾದ ಕಡೆಯಿಂದ ಸಾಗಣೆಯಾಗಿ ಬಂದು, ದೇಶದೊಳಗೆ ಬರುತ್ತಿದ್ದರೂ ಯಾಕೆ ಯಾರೂ ಆ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಕೂಡ ಚರ್ಚೆಯ ವಿಷಯವಾಗಿದೆ.

ಅದರಲ್ಲೂ ಕಳೆದ ವರ್ಷ ಕನ್ನಡವೂ ಸೇರಿದಂತೆ ವಿವಿಧ ಭಾಷಾ ಚಿತ್ರರಂಗದ ನಟನಟಿಯರು, ಕೆಲವರು ಗಣ್ಯರ ಮಕ್ಕಳು ಮಾದಕ ವಸ್ತು ಸೇವನೆ ಮತ್ತು ಸಾಗಣೆ ಪ್ರಕರಣಗಳಲ್ಲಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ, ಇದೀಗ 21 ಸಾವಿರ ಕೋಟಿ ಬೃಹತ್ ಮೊತ್ತದ ಮಾದಕ ವಸ್ತು ಪತ್ತೆಯ ಪ್ರಕರಣವನ್ನು ತಳಕು ಹಾಕಿ, ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಮೊದಲನೆಯದಾಗಿ ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ನಟಿ ರಿಯಾ ವಿರುದ್ಧ ಕೇವಲ 50 ಗ್ರಾಂ ಗಾಂಜಾ ಕುರಿತ ವಾಟ್ಸಪ್ ಚಾಟ್ ವಿಷಯವನ್ನೇ ಮುಂದಿಟ್ಟುಕೊಂಡು ಇಡೀ ಪ್ರಕರಣದ ಹಿಂದೆ ಮಾದಕ ವಸ್ತು ಜಾಲದ ಕೈವಾಡವಿದೆ. ಇಡೀ ಬಾಲಿವುಡ್ ಗೆ ಮಾದಕ ವ್ಯಸನ ಆವರಿಸಿದೆ ಎಂದು ಬೊಬ್ಬೆ ಹೊಡೆದು ಸುಮಾರು ಆರು ತಿಂಗಳ ಕಾಲ ಆ ಪ್ರಕರಣ ಒಂದು ಅಂತಾರಾಷ್ಟ್ರೀಯ ವಿದ್ಯಮಾನ ಎಂಬಂತೆ ಬಿಂಬಿಸಿದ್ದ ಟಿವಿ ಮಾಧ್ಯಮಗಳು, ಇದೀಗ ಪ್ರಧಾನಿ ಮೋದಿಯವರ ಆತ್ಯಾಪ್ತ ಉದ್ಯಮಿಯ ಬಂದರಿನಲ್ಲಿಯೇ ಜಾಗತಿ ಕಂಡು ಕೇಳರಿಯದ ಪ್ರಮಾಣದ ಹೆರಾಯಿನ್ ಪತ್ತೆಯಾದರೂ ಯಾಕೆ ಬಾಯಿಗೆ ಬೀಗ ಹಾಕಿಕೊಂಡು ಕೂತಿವೆ ಎಂದು ಹಲವರು ಮಾಧ್ಯಮಗಳ ಪಕ್ಷಪಾತಿ ಧೋರಣೆಯನ್ನು ಪ್ರಶ್ನಿಸಿದ್ದಾರೆ.
ಹಾಗೇ “ಸುಶಾಂತ್ ಸಿಂಗ್ ಪ್ರಕರಣದಲ್ಲಿ ಕೇವಲ 50 ಗ್ರಾಂ ಗಾಂಜಾ ಕುರಿತು ಚಾಟ್ ಮಾಹಿತಿಯನ್ನೇ ಇಟ್ಟುಕೊಂಡು ಇಡಿ, ಐಟಿ, ಸಿಬಿಐ, ಎನ್ ಸಿಬಿ ಸೇರಿದಂತೆ ದೇಶದ ಎಲ್ಲಾ ತನಿಖಾ ಸಂಸ್ಥೆಗಳನ್ನು ಬಳಸಿ ನಟಿ ರಿಯಾ ಮತ್ತು ಆಕೆಯ ಕುಟುಂಬವನ್ನು ಬೀದಿಗೆ ತಂದ ಮೋದಿಯವರ ಸರ್ಕಾರ, ಇದೀಗ ತಮ್ಮದೇ ಆಪ್ತ ಉದ್ಯಮಿಯ ಬಂದರಿನಲ್ಲಿ ಬರೋಬ್ಬರಿ 21 ಸಾವಿರ ಕೋಟಿ ಮೌಲ್ಯದ, ಮೂರು ಟನ್ ನಷ್ಟು ಅತ್ಯಂತ ಅಪಾಯಕಾರಿ ಹೆರಾಯಿನ್ ಪತ್ತೆಯಾಗಿದ್ದರೂ ತುಟಿ ಬಿಚ್ಚುತ್ತಿಲ್ಲ” ಯಾಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ದೇಶದೊಳಕ್ಕೆ ಇತ್ತೀಚಿನ ದಿನಗಳಲ್ಲಿ ಹಡಗುಗಳ ಮೂಲಕ ಭಾರೀ ಪ್ರಮಾಣದ ಮಾದಕವಸ್ತು ಪ್ರವೇಶಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಗುಜರಾತ್ ಬಂದರುಗಳ ಮೂಲಕವೇ ಬಹುತೇಕ ಮಾದಕ ವಸ್ತು ದೇಶದೊಳಗೆ ಬರುತ್ತಿದೆ. 3 ಟನ್ ಹೆರಾಯಿನ್ ವಶಪಡಿಸಿಕೊಂಡ ಮಾರನೇ ದಿನ(ಸೆ.18) ಕೂಡ ಅದೇ ಗುಜರಾತ್ ಕರಾವಳಿಯಲ್ಲಿಯೇ 150 ಕೋಟಿ ಮೊತ್ತದ 30 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಆ ಮೊದಲು 2021ರ ಏಪ್ರಿಲ್ ನಲ್ಲಿ ಅದೇ ಮುಂದ್ರಾ ಬಂದರಿನಲ್ಲಿಯೇ 150 ಕೋಟಿ ಮೊತ್ತದ ಹೆರಾಯಿನ್ ವಶಪಡಿಸಿಕೊಳ್ಳಲಾಗಿತ್ತು. ಹಾಗೇ 2020ರ ಜನವರಿಯಲ್ಲಿ 175 ಕೋಟಿ ಮೌಲ್ಯದ ಹೆರಾಯಿನ್ ಸಾಗಣೆ ವೇಳೆ ಅದೇ ಗುಜರಾತ್ ಕರಾವಳಿಯಲ್ಲಿ ವಶಪಡಿಸಿಕೊಂಡು ಪಾಕಿಸ್ತಾನಿಗಳನ್ನು ಬಂಧಿಸಲಾಗಿತ್ತು. 2017ರ ಜುಲೈನಲ್ಲಿ ಅದೇ ಕರಾವಳಿಯಲ್ಲಿಯೇ, ಬರೋಬ್ಬರಿ 3500 ಕೋಟಿ ಮೊತ್ತದ 1500 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿತ್ತು.
ಗಮನಿಸಬೇಕಾದ ಸಂಗತಿ ಎಂದರೆ, ಇಷ್ಟೊಂದು ಭಾರೀ ಪ್ರಮಾಣದ ಮಾದಕವಸ್ತು ದೇಶದ ಒಳಬರುತ್ತಿರುವುದು ಮಾದಕವಸ್ತು ಜಾಲದ ವಿರುದ್ಧ ಜಾಗತಿಕ ಸಮರ ಸಾರುತ್ತೇವೆ ಎಂದು ಸದಾ ಹೇಳುವ ಪ್ರಧಾನಿ ಮೋದಿಯವರ ತವರು ರಾಜ್ಯದಿಂದಲೇ. ಅದರಲ್ಲೂ ಸ್ವತಃ ಅವರೂ ಸೇರಿದಂತೆ ಅವರದೇ ಪಕ್ಷದ ಸರ್ಕಾರ ಎರಡೂವರೆ ದಶಕದಿಂದ ಆಡಳಿತ ನಡೆಸುತ್ತಿರುವಾಗಲೇ ಈ ಪ್ರಮಾಣದ ಮಾದಕವಸ್ತು ನಿಯಂತ್ರಣಕ್ಕೆ ಎಷ್ಟರಮಟ್ಟಿಗೆ ಕ್ರಮಕೈಗೊಳ್ಳಲಾಗಿದೆ ಎಂಬುದಕ್ಕೆ ಸರಣಿ ಪ್ರಕರಣಗಳೇ ಸಾಕ್ಷಿ ಹೇಳುತ್ತಿವೆ. ಜೊತೆಗೆ ಕಳೆದ ಏಳು ವರ್ಷಗಳಿಂದ ಅದೇ ಗುಜರಾತ್ ಮೂಲದ ಮೋದಿಯವರು ಪ್ರಧಾನಿಯಾಗಿದ್ದಾರೆ. ಇದೀಗ ಮತ್ತೊಬ್ಬ ಗುಜರಾತ್ ನಾಯಕ ಅಮಿತ್ ಶಾ ಕಳೆದ ಎರಡು ವರ್ಷಗಳಿಂದ ಗೃಹ ಸಚಿವರೇ ಆಗಿದ್ದಾರೆ. ವಿಪರ್ಯಾಸವೆಂದರೆ ಇಷ್ಟೆಲ್ಲಾ ಆಘಾತಕಾರಿ ಪ್ರಮಾಣದಲ್ಲಿ ಮಾದಕವಸ್ತು ಕಳ್ಳಸಾಗಣೆ ನಡೆಯುತ್ತಿದ್ದರೂ ಕಳೆದ ಒಂದೂವರೆ ವರ್ಷದಿಂದ ದೇಶದ ಮಾದಕವಸ್ತು ನಿಗ್ರಹ ಬ್ಯೂರೋ(ಎನ್ ಸಿಬಿ) ಮುಖ್ಯಸ್ಥರ ಹುದ್ದೆ ಖಾಲಿ ಬಿದ್ದಿದೆ!
ಒಂದು ಕಡೆ ಉತ್ತರಪ್ರದೇಶದ ಚುನಾವಣೆ ಸಮೀಪಿಸುತ್ತಿರುವಂತೆ ಅಲ್ಲಿನ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಟ್ಟುಕೊಂಡು, ತಾಲಿಬಾನ್ ಆಘ್ಫಾನಿಸ್ತಾನದ ಅಧಿಕಾರ ಹಿಡಿಯುತ್ತಲೇ ದೇಶದೊಳಗೆ ಮಾದಕವಸ್ತು ಸಾಗಣೆ ಮಾಡಿ, ಹಿಂದೂಗಳನ್ನು ಹಾಳು ಮಾಡಲು ಸಂಚು ನಡೆಸಲಾಗುತ್ತಿದೆ ಎಂಬ ವದಂತಿಗಳು ಹರಡತೊಡಗಿವೆ. ಪ್ರಮುಖವಾಗಿ ಆಡಳಿತರೂಢ ಬಿಜೆಪಿಯ ವಲಯದಲ್ಲಿಯೇ ಇಂತಹ ಕಪೋಲಕಲ್ಪಿತ ಸಂಗತಿಗಳನ್ನು ಹಬ್ಬಿಸಲಾಗುತ್ತಿದೆ. ಆದರೆ, ವಾಸ್ತವವೆಂದರೆ, ಅಂತಹ ಮಾದಕವಸ್ತು ಅದೇ ಬಿಜೆಪಿ ಆಡಳಿತದ ಗುಜರಾತ್ ಮೂಲಕವೇ, ಅದೇ ಬಿಜೆಪಿ ಆಪ್ತ ಉದ್ಯಮಿ ಅದಾನಿಯ ಬಂದರಿನ ಮೂಲಕವೇ ಬರುತ್ತಿದೆ ಮತ್ತು ಸದ್ಯದ ಮಾಹಿತಿಯ ಪ್ರಕಾರ ಆ ಸಾಗಣೆಯ ದಂಧೆಯಲ್ಲಿ ಭಾಗಿಯಾಗಿರುವವರ ವಿವರದ ಪ್ರಕಾರ, ಇಂತಹ ಹೇಯ ಕೃತ್ಯಗಳು ಯಾವುದೇ ಒಂದು ಧರ್ಮಕ್ಕೆ ಸೀಮಿತವಲ್ಲ ಎಂಬುದು ಕೂಡ ಬಹಿರಂಗವಾಗಿದೆ.

ಈ ನಡುವೆ, ತನ್ನ ಬಂದರಿನಲ್ಲಿ ಭಾರೀ ಪ್ರಮಾಣದ ಅಪಾಯಕಾರಿ ಮಾದಕವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅದಾನಿ ಉದ್ಯಮ ಸಮೂಹ ಸ್ಪಷ್ಟನೆ ನೀಡಿದೆ. “ತನ್ನ ಬಂದರಿನಲ್ಲಿ ಆಫ್ಘಾನಿಸ್ತಾನದ ಮೂಲದಿಂದ ಬಂದ ಎರಡು ಕಂಟೇನರ್ಗಳಲ್ಲಿ ಮಾದಕ ವಸ್ತು ಪತ್ತೆಯಾಗಿರುವುದು ನಿಜ. ಆದರೆ, ಕಂಟೇನರುಗಳ ತಪಾಸಣೆ ಮತ್ತು ವಶಪಡಿಸಿಕೊಳ್ಳುವ ಯಾವುದೇ ಅಧಿಕಾರ ಬಂದರು ಆಡಳಿತಕ್ಕೆ ಇರುವುದಿಲ್ಲ. ದೇಶದ ಕಾನೂನು ಪ್ರಕಾರ ಆ ಕಾರ್ಯವನ್ನು ತನಿಖಾ ಸಂಸ್ಥೆಗಳೇ ಮಾಡಬೇಕು. ಹಾಗಾಗಿ ಬಂದರಿಗೂ ಈ ಮಾದಕವಸ್ತು ಸಾಗಣೆಯ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದೆ.
ಆದರೆ ಪ್ರಶ್ನೆ ಇರುವುದು ಯಾಕೆ ಪ್ರತಿ ಬಾರಿಯೂ ಬಹುತೇಕ ಅದಾನಿ ಒಡೆತನದ ಗುಜರಾತಿನ ಆ ಮುಂದ್ರಾ ಬಂದರು ಮತ್ತು ಅದು ಇರುವ ಆ ಕರಾವಳಿಯ ತೀರದಲ್ಲೇ ಕಳೆದ ಐದಾರು ವರ್ಷಗಳಲ್ಲಿ ಸಾವಿರಾರು ಕೋಟಿ ಮೊತ್ತದ ಭಾರೀ ಮಾದಕ ವಸ್ತುಗಳು ಪತ್ತೆಯಾಗುತ್ತಿವೆ ? ಮತ್ತು ಯಾಕೆ ದೇಶದ ಯುವಜನತೆಯ ಜೀವವನ್ನೇ ಬಲಿತೆಗೆದುಕೊಳ್ಳುವ ಇಂತಹ ಕರಾಳ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ದೇಶದ ಯುವಜನತೆ ಮತ್ತು ಭವಿಷ್ಯದ ಬಗ್ಗೆ ಉದ್ದುದ್ದು ಭಾಷಣ ಮಾಡುವ ಬಿಜೆಪಿ ಮತ್ತು ಅದರ ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗಿಲ್ಲ? ಕನಿಷ್ಟ ಎನ್ ಸಿಬಿ ಮುಖ್ಯಸ್ಥರ ನೇಮಕದ ವಿಷಯದಲ್ಲಿ ಕೂಡ ಆಸಕ್ತಿ ಹೊಂದಿಲ್ಲ? ಎಂಬುದು ಪ್ರಶ್ನೆ.
ಆದರೆ, ಅಂತಹ ಪ್ರಶ್ನೆಗಳನ್ನು ಕೇಳಬೇಕಿದ್ದ ದೇಶದ ಟಿವಿ ಮತ್ತು ಮುಖ್ಯವಾಹಿನಿ ಮಾಧ್ಯಮಗಳ ಬಾಯಲ್ಲಿ ಸದ್ಯ ಕಡುಬು ಸಿಕ್ಕಿಕೊಂಡ ಸ್ಥಿತಿ ಇದೆ ಎಂಬುದು, ದೇಶದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಮಾದಕವಸ್ತು ವ್ಯಸನಕ್ಕಿಂತ ಅಪಾಯಕಾರಿಯಾದ ವಾಸ್ತವ!