ಜೆಡಿಎಸ್‌ನ ಮತ್ತೊಂದು ಹಿರಿತಲೆ ಕಾಂಗ್ರೆಸಿಗೆ ಅಧಿಕೃತ ಸೇರ್ಪಡೆಗೆ ದಿನಗಣನೆಯಾಗುತ್ತಿದೆ. ನವೆಂಬರ್ 9ರಂದು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ಸಿದ್ದರಾಮಯ್ಯರನ್ನು ಜಿ.ಟಿ.ದೇವೇಗೌಡರು ಸ್ವಾಗತಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಹಿನಕಲ್‌ನಲ್ಲಿ ನಡೆಯುವ ಅಂಬೇಡ್ಕರ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಜೊತೆಗೆ ಜಿ.ಟಿ.ದೇವೇಗೌಡರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಇದಾದ ನಂತರ ಕೇರ್ಗಳ್ಳಿಯಲ್ಲಿ ನಡೆಯುವ ಕೆಂಚಪ್ಪ ಸಮುದಾಯ ಭವನ ಉದ್ಘಾಟನೆಯಲ್ಲೂ ಉಭಯ ನಾಯಕರು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಮೈಸೂರಲ್ಲಿ ಜೆಡಿಎಸ್‌ನ ಶಕ್ತಿಯಾಗಿರುವ, ಕಳೆದ ಸಲ ಸಿದ್ದರಾಮಯ್ಯರನ್ನೇ ಸೋಲಿಸಿ ಜೆಡಿಎಸ್ಸಿಗೆ ಸಂಭ್ರಮ ತಂದಿದ, ಅದೇ ರೀತಿ, ಮೈಸೂರು ಭಾಗದ ಪ್ರಭಾವಿ ನಾಯಕ ಮತ್ತು ಒಂದು ಕಾಲದಲ್ಲಿ ದೊಡ್ಡಗೌಡ್ರ ಪರಮಾಪ್ತರಾಗಿದ್ದ ಮಾಜಿ ಸಚಿವ, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರು ಇದೀಗ ಜೆಡಿಎಸ್ಸಿನಿಂದ ಬಲುದೂರ ಬಂದಿದ್ದಾರೆ.
ಚುನಾವಣಾ ಸಮಯದಲ್ಲಿ ಸಿದ್ದರಾಮಯ್ಯರ ವಿರುದ್ಧ ಗುಡುಗಿ, ಟೀಕೆಗಳ ಸುರಿಮಳೆಗೈದು ದಳಪತಿಗಳಿಂದ ಭೇಷ್ ಎನ್ನಿಸಿಕೊಂಡಿದ್ದರು. ಈಗ ಅದೇ ಜಿ.ಟಿ.ದೇವೇಗೌಡ ದಳಪತಿಗಳಿಗೆ ಶಾಕ್ ಕೊಡುತ್ತಿದ್ದಾರೆ, ಸಿದ್ದರಾಮಯ್ಯರ ಮೀಸೆಯ ಕೆಳಗೆ ನಗು ಮೂಡಿಸುತ್ತಿದ್ದಾರೆ. ಹೌದು ಅವರು ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ನವೆಂಬರ್ 9ರಂದು ಮಾಜಿ ಸಿಎಂ ಸಿದ್ದರಾಮಯ್ಯರ ಜೊತೆ ಜಿ.ಟಿ.ದೇವೇಗೌಡರು ವೇದಿಕೆ ಹಂಚಿಕೊಳ್ಳುವುದು ಅದರ ಕೊನೆಯ ಹಂತ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ .

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ವರುಣಾ ಕ್ಷೇತ್ರವನ್ನು ಪುತ್ರ ಯತೀಂದ್ರ ಅವರಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಇದೇ ಕ್ಷೇತ್ರದಿಂದ ಜೆಡಿಎಸ್ ನಿಂದ ಜಿ.ಟಿ.ದೇವೇಗೌಡರು ಕಣದಲ್ಲಿದ್ದರು. ಇಬ್ಬರ ನಡುವೆ ವಾಗ್ಯುದ್ಧವೇ ನಡೆಯುತ್ತಿತ್ತು. ಸಿದ್ದರಾಮಯ್ಯರನ್ನು ಈ ಮಟ್ಟದಲ್ಲಿ ಟೀಕೆ ಮಾಡುವ ಜಿಟಿಡಿ ಕುಮಾರಸ್ವಾಮಿಯವರಿಗೆ ಆಪತ್ಬಾಂಧವನಾಗಿ ಕಾಣುತ್ತಿದ್ದರು. ಕೊನೆಗೂ ಸಿದ್ದರಾಮಯ್ಯರನ್ನು ಸೋಲಿಸುವ ದಳಪತಿ ಕನಸನ್ನು ಸಾಕಾರ ಮಾಡಿಕೊಟ್ಟ ಜಿಟಿಡಿಯ ಬಗ್ಗೆ ದಳಪತಿಗಳಿಗೆ ವಿಶೇಷ ಅಕ್ಕರೆ ಮೂಡಿತ್ತು. ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಗೆದ್ದಿದ್ದರು.
ಆದರೆ ಈ ಅಕ್ಕರೆ , ಬಾಂಧವ್ಯ ನಿಧಾನಕ್ಕೆ ಕ್ಷೀಣಿಸುತ್ತಾ ಬಂತು. ಸಾರಾ ಮಹೇಶ್ ಮತ್ತು ಕುಮಾರಸ್ವಾಮಿ ಹತ್ತಿರವಾಗಿ ಜಿಟಿಡಿಯವರನ್ನು ಕಡೆಗಣಿಸಲು ಆರಂಭಿಸಿದ್ದರು. ಇತ್ತ ಮೈತ್ರಿ ಸರ್ಕಾರ ಪತನದ ಬಳಿಕವಂತೂ ಜೆಡಿಎಸ್ ನಿಂದ ಜಿ.ಟಿ.ದೇವೇಗೌಡರು ಪಕ್ಷ ಮತ್ತು ವರಿಷ್ಠರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಪಕ್ಷಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಂದಲೂ ದೂರ ಉಳಿದುಕೊಂಡಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಬ್ಯಾನರ್ ನಲ್ಲಿ ಜಿಟಿಡಿ ಪುತ್ರನ ಫೋಟೋ ಹಾಕಲಾಗಿತ್ತು.
ಹೆಚ್.ಡಿ.ದೇವೇಗೌಡ್ರು, ಜಿ.ಟಿ.ದೇವೇಗೌಡ್ರನ್ನು ಕರೆಸಿ ಮಾತುಕತೆಯನ್ನು ನಡೆಸಿದ್ದರೂ ಪ್ರಯೋಜನವಾಗಲಿಲ್ಲ. ಹಾಗಂತ ದೇವೇಗೌಡ್ರ ಬಳಿ ಜಿಟಿಡಿ ವಿಚಾರವನ್ನು ಪ್ರಸ್ತಾಪಿಸಿದಾಗ, ಅವರ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸಿದ್ದೇ ಕಂಡುಬಂದಿದೆ. ಜಿಟಿಡಿ ಪಕ್ಷ ವಿರೋಧಿ ಕೆಲಸವನ್ನು ಮಾಡುತ್ತಿಲ್ಲ, ಹಾಗಾಗಿ, ಅವರನ್ನು ಪಕ್ಷದಿಂದ ಉಚ್ಚಾಟಿಸುವ ಕೆಲಸ ಮಾಡುವುದಿಲ್ಲ ಎಂದು ದೇವೇಗೌಡ್ರು ಹೇಳಿದ್ದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮನ್ನು ಭಾರೀ ಅಂತರದಿಂದ ಸೋಲಿಸಿದ್ದ ಜಿ.ಟಿ. ದೇವೇಗೌಡ ಅವರು ತನ್ನೊಂದಿಗೆ ಮಾತುಕತೆ ನಡೆಸಿರುವ ಸುದ್ದಿಯನ್ನು ಸಿದ್ದರಾಮಯ್ಯ ಅವರು ಅಕ್ಟೋಬರ್ ನಲ್ಲಿ ಒಪ್ಪಿಕೊಂಡಿದ್ದರು. ಜಿಟಿಡಿ ನನ್ನ ಜೊತೆ ಮಾತನಾಡಿರುವುದು ಸತ್ಯ. ಅವರಿಗೆ ಹಾಗೂ ಅವರ ಮಗನಿಗೆ ಟಿಕೆಟ್ ಕೇಳಿದ್ದಾರೆ. ಡಿಕೆ ಶಿವಮಕುಮಾರ್ ಜೊತೆ ಮಾತನಾಡಿದ್ದಾರೆ. ಡಿಕೆ ಶಿವಕುಮಾರ್ ಮೂಲಕ ನನ್ನ ಜೊತೆಯೂ ಅವರು ಮಾತನಾಡಿದ್ದಾರೆ. ಅವರು ಇಂಥದ್ದೇ ಕ್ಷೇತ್ರದಲ್ಲಿ ಟಿಕೆಟ್ ಬೇಕು ಅಂತ ಕೇಳಿಲ್ಲ. ನಾನು ಈ ಬಗ್ಗೆ ರಣದೀಪ್ ಸುರ್ಜೆವಾಲ ಜೊತೆ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.
ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿರುವ ಜಿ.ಟಿ.ದೇವೇಗೌಡರು ಸಮಯ ಸಿಕ್ಕಾಗೆಲ್ಲ ದಳಪತಿಗಳ ವಿರುದ್ಧ ಅಸಮಾಧಾನ ಹೊರ ಹಾಕುತ್ತಿರುತ್ತಾರೆ. ಖಾತೆ ಹಂಚಿಕೆ ವೇಳೆ ಉದ್ದೇಶಪೂರ್ವಕವಾಗಿಯೇ ತಮಗೆ ಉನ್ನತ ಶಿಕ್ಷಣ ಇಲಾಖೆ ನೀಡಲಾಗಿತ್ತು ಎಂದು ಆರೋಪಿಸಿದ್ದರು. ಮತ್ತೊಂದು ಕಡೆ ದಳಪತಿಗಳು ಜಿಟಿಡಿ ಅವರ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದುಂಟು, ನಾನು ಹಿರಿಯರ ಜೊತೆ ರಾಜಕೀಯ ಮಾಡಿದ್ದೇನೆ. 50 ವರ್ಷಗಳಿಂದ ರಾಜಕಾರಣದಲ್ಲಿ ಇದ್ದೇನೆ. ಇವತ್ತಿನ ಪರಿಸ್ಥಿತಿಯಲ್ಲಿ ರಾಜಕಾರಣ ಸಾಧ್ಯವಿಲ್ಲ. ನಾನು ಮಂತ್ರಿ ಆಗಿ ಆಯ್ತು, ರಾಜಕೀಯ ಸಾಕು. ನಾನು ಸಾಕಷ್ಟು ನೊಂದಿದ್ದೇನೆ ಎಂದು ಹೇಳಿ ಜಿ.ಟಿ.ದೇವೇಗೌಡರು ಚುನಾವಣಾ ರಾಜಕೀಯ ನಿವೃತ್ತಿಯನ್ನು 2019ರ ಆಗಸ್ಟ್ 4ರಂದು ಘೋಷಿಸಿದ್ದರು. ಅದು ನಿವೃತ್ತಿ ಘೋಷಣೆಯಾಗಿರದೆ ಜೆಡಿಎಸ್ಸಿನಿಂದ ಹೊರಹೋಗುವ ಮಾನಸಿಕ ಸಿದ್ಧತೆ ಎಂದು ವಿಶ್ಲೇಷಿಸಲಾಗಿತ್ತು.
ಕಳೆದ ನವೆಂಬರಲ್ಲಿ ಅವರು “2 ವರ್ಷದಿಂದ ನಾನು ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದು ನಿಜ. ಜೆಡಿಎಸನಲ್ಲಿದ್ದು ರಾಜಕೀಯ ಮಾಡುವುದು ಮುಗಿದ ಅಧ್ಯಾಯ. ಕಾಂಗ್ರೆಸ್ ನಾಯಕರೊಂದಿಗೆ ಚರ್ಚಿಸಿದ್ದು, ನನ್ನ ಪುತ್ರನಿಗೆ ಟಿಕೆಟ್ ಖಚಿತವಾದ ಬಳಿಕ ಆ ಪಕ್ಷ ಸೇರ್ಪಡೆ ಬಗ್ಗೆ ಚಿಂತನೆ ಮಾಡುತ್ತೇನೆ,” ಎಂದು ಜಿಟಿ ದೇವೇಗೌಡ ಮೈಸೂರಿನಲ್ಲಿ ಹೇಳಿದ್ದರು. ಅದೇ ತಿಂಗಳಲ್ಲಿ ಮತ್ತೊಂದು ಸಲ ಸುದ್ದಿಗಾರರೊಂದಿಗೆ ಮಾತಾಡಿದ ಜಿ.ಟಿ ದೇವೇಗೌಡ, ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ನನ್ನನ್ನ ಕ್ಷಮಿಸಿ ಅಪ್ಪಾಜಿ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರನ್ನು ಕೋರಿದ್ದಾರೆ. ನಾನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಕಾಂಗ್ರೆಸ್ ಸೇರುವ ಬಗ್ಗೆ ಮಾತನಾಡಿದ್ದೇನೆ. ನಿಮ್ಮ ಆಶೀರ್ವಾದ ಹೀಗೆ ಇರಲಿ ಎಂದು ಗೌಡರಿಗೆ ಮನವಿ ಮಾಡಿದ್ದಾರೆ. ನನಗೆ, ನನ್ನ ಮಗ ಇಬ್ಬರಿಗೂ ಟಿಕೆಟೆ ಕೇಳಿದ್ದು, ಇಬ್ಬರಿಗೂ ಟಿಕೆಟ್ ಸಿಗುವ ವಿಶ್ವಾಸ ಇದೆ. ಎಂದಿದ್ದರು. ಅಲ್ಲಿಗೆ ಅವರು ಜೆಡಿಎಸ್‌ಗೆ ವಿದಾಯ ಮತ್ತು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತಾಡೋಕೆ ಏನೂ ಉಳಿದಿರಲಿಲ್ಲ. ಅವರು ಎರಡೂ ಕಾಲನ್ನು ಹೊರಗೆ ಇಟ್ಟು ಬಲು ದೂರ ಬಂದಾಗಿತ್ತು.

ಈ ಬಗ್ಗೆ ವೈ ಎಸ್. ವಿ. ದತ್ತಾ ನೋವಿನಿಂದ ಪ್ರತಿಕ್ರಿಯಿಸಿದ್ದಾರೆ. ಆದರೆ, ಜಿ.ಟಿ. ದೇವೇಗೌಡರ ನಡೆಯನ್ನು ಸಮರ್ಥಿಸಿಕೊಳ್ಳುತ್ತಾರೆಯೇ ವಿನಃ ದೂರುವುದಿಲ್ಲ. ಪಕ್ಷ ಸೂಕ್ತ ಆದ್ಯತೆ, ಗೌರವ ನೀಡಿಲ್ಲ ಎಂದರೆ ಅದು ತಪ್ಪು. ಹಿರಿಯರು ಮತ್ತು ಸಂಘಟನಾ ಶಕ್ತಿಯಾಗಿರುವ ಅವರ ಮನಸ್ಸಿಗೆ ನೋವಾಗಿರಬಾರದಿತ್ತು ಎಂದು ಮಾಜಿ ಶಾಸಕ ವೈಎಸ್ ವಿ ದತ್ತಾ ಹೇಳಿದ್ದಾರೆ.
ಜಿ.ಟಿ. ದೇವೇಗೌಡರನ್ನು ಕಡೆಗಣಿಸಿ, ಮತ್ಯಾರಿಗೋ ಆದ್ಯತೆ ನೀಡಿ ವೈಭವೀಕರಿಸಿದ್ದರಿಂದ ಅವರ ಮನಸ್ಸಿಗೆ ನೋವಾಗಿರಬಹುದು. ಬೇರೆ ಪಕ್ಷಕ್ಕೆ ಜಿ.ಟಿ. ದೇವೇಗೌಡರನ್ನು ಹೋಗಲು ಬಿಡಬಾರದು. ಎಚ್.ಡಿ. ದೇವೇಗೌಡರರೇ ಅವರನ್ನು ಕರೆಸಿ ಮಾತನಾಡಬೇಕು. ಅವರ ಭಾವನೆಯನ್ನು ಅರ್ಥ ಮಾಡಿಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕು. ಮೂಲ ಜನತಾ ಪರಿವಾರದಿಂದ ಬಂದ ಅವರನ್ನು ಜೆಡಿಎಸ್ ಪಕ್ಷದಲ್ಲೇ ಉಳಿಸಿಕೊಳ್ಳಬೇಕು ಎಂದು ಕೂಡ ಹೇಳಿದ್ದರು.
ಇದೀಗ ಜಿಟಿಡಿ ಕಾಂಗ್ರೆಸ್ ಸೇರ್ಪಡೆಯ ಪೂರ್ವಭಾವಿ ಕಸರತ್ತಿನ ಕೊನೆಯ ಹಂತ ನಡೆಯುತ್ತಿದ್ದು ಜೆಡಿಎಸಿನ ಶಕ್ತಿಯೊಂದು ಕಾಂಗ್ರೆಸ್ ಪಾಳಯ ಸೇರುತ್ತಿದೆ. ಮುಂದಿನ ವಿಧಾನ ಸಭಾ ಚುನಾವಣೆ ಹತ್ತಿರವಿರುವಾಗ ಇನ್ನಷ್ಟು ನಾಯಕರು ಜೆಡಿಎಸ್‌ನಿಂದ ಕಾಂಗ್ರೆಸ್ ಗೆ ಹಾರಲಿದ್ದಾರೆಂದು ಹೇಳಲಾಗುತ್ತಿದೆ. ವೈ ಎಸ್ ವಿ ದತ್ತಾ ಕೂಡ ಕಾಂಗ್ರೆಸ್ ಸೇರಿದರೆ ಆಶ್ಚರ್ಯವಿಲ್ಲ. ದಳಪತಿ ಬದಲಾಗದಿದ್ದರೆ ಅವರು ಮಾತ್ರ ಜೆಡಿಎಸ್ಸಲ್ಲಿ ಉಳಿಯಬಹುದಷ್ಟೇ. ಸಿದ್ದರಾಮಯ್ಯರನ್ನು ಸೋಲಿಸಿ ದಳಪತಿ ಬೀಗುವಂತೆ ಮಾಡಿದ ಜಿಟಿ ದೇವೇಗೌಡ ಈಗ ಸಿದ್ದರಾಮಯ್ಯರ ಆಪ್ತರಾಗುತ್ತಿದ್ದಾರೆ.






