ಬೆಂಗಳೂರು : ರಾಜ್ಯದ ಜನತೆಗೆ ಮಾಸಿಕವಾಗಿ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಇಂದಿನಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಲು ರಾಜ್ಯ ಸರ್ಕಾರ ಈವರೆಗೆ ಯಾವುದೇ ಗಡುವನ್ನು ವಿಧಿಸಿಲ್ಲ, ಆದರೆ ಒಂದು ಹಂತದ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಗೃಹಜ್ಯೋತಿ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಈ ಯೋಜನೆಯ ಲಾಭ ಪಡೆಯಲು ಇಚ್ಛಿಸುವ ಗ್ರಾಹಕರು https://sevasindhugs.karnataka.gov.in/gruhajyothi ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ಗ್ರಾಹಕರು ವಿದ್ಯುತ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆ ನಮೂದು ಮಾಡಬೇಕು. ಇದಾದ ಬಳಿಕ ನೀವು ಬಾಡಿಗೆ ಮನೆಯಲ್ಲಿ ವಾಸಿಸುವವರೋ ಅಥವಾ ಸ್ವಂತ ಮನೆಯಲ್ಲಿ ವಾಸಿಸುವವರೋ ಎಂಬುದನ್ನು ಆಯ್ಕೆ ಮಾಡಬೇಕು, ಒಂದು ವೇಳೆ ನಿಮ್ಮ ಆಯ್ಕೆ ಬಾಡಿಗೆ ಮನೆ ಎಂದಾದಲ್ಲಿ ಮನೆ ದೃಢೀಕರಿಸುವ ಆಧಾರ್ ಅಥವಾ ಮತದಾರರ ಗುರುತಿನ ಚೀಟಿ ವಿವರಗಳನ್ನು ನೀಡಬೇಕು.
ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್, ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ಗಳಲ್ಲಿ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಅಲ್ಲದೇ ಇದರ ಜೊತೆಯಲ್ಲಿ ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರ, ನಾಡಕಚೇರಿ ಹಾಗೂ ಎಲ್ಲಾ ವಿದ್ಯುತ್ ಕಚೇರಿಗಳಲ್ಲಿ ನೋಂದಣಿಗೆ ಅವಕಾಶ ನೀಡಲಾಗಿದೆ.