ಇತ್ತೀಚಿಗೆ ನಡೆದ ಚುನಾವಣೆಗಳಲ್ಲಿ ಹೀನಾಯ ಸೋಲನ್ನಪ್ಪಿರುವ ಕಾಂಗ್ರೆಸ್ ಇನ್ನೂ ತನ್ನ ತಪ್ಪುಗಳಿಂದ ಪಾಠ ಕಲಿತಂತಿಲ್ಲ. ಪಂಜಾಬಿನಲ್ಲಿ ಪಕ್ಷದೊಳಗಿನ ಒಳಜಗಳದಿಂದಾಗಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಚುನಾವಣೆಗೆ ಕೇವಲ ಒಂದು ವರ್ಷವಿರುವಾಗ ಆರಂಭವಾದ ಒಳಜಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹಡಗನ್ನು ಮುಳುಗಿಸುವ ಮಟ್ಟಕ್ಕೆ ಬೆಳೆದು ನಿಂತಿತು. ಈಗ ಗುಜಾರಾತ್ ಪ್ರದೇಶ ಕಾಂಗ್ರೆಸ್ನಲ್ಲಿಯೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿದೆ.
ಗುಜಾರಾತ್’ನ ಪ್ರಬಲ ಪಾಟಿದಾರ್ ಸಮುದಾಯವನ್ನು ಪ್ರತಿನಿಧಿಸುವ ಹಾರ್ದಿಕ್ ಪಟೇಲ್ ಅವರು ಈಗ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಗರಂ ಆಗಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಕಾರ್ಯಾಧ್ಯಕ್ಷ ಹುದ್ದೆ ಇದ್ದರೂ ತನ್ನನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಅವರ ಆರೋಪಿಸಿದ್ದಾರೆ.
“ಕಾಂಗ್ರೆಸ್ ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. ಇತ್ತೀಚಿಗೆ ಮದುವೆಯಾದ ನವವಿವಾಹಿತನಿಗೆ ಸಂತಾಹರಣ ಶಸ್ತ್ರಚಿಕಿತ್ಸೆ ಮಾಡಿರುವಂತೆ ನನಗೆ ಭಾಸವಾಗುತ್ತಿದೆ. ಪಕ್ಷದ ಸಭೆಗಳಿಗೆ ಆಹ್ವಾನ ಸಿಗುತ್ತಿಲ್ಲ. ಯಾವುದೇ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಮುಂಚೆ ನನ್ನ ಅಭಿಪ್ರಾಯವನ್ನು ಪರಿಗಣಿಸುತ್ತಿಲ್ಲ. ಇತ್ತೀಚಿಗೆ ಹೊಸದಾಗಿ 75 ಪ್ರಧಾನ ಕಾರ್ಯದರ್ಶಿಗಳು ಹಾಗೂ 25 ಉಪಾಧ್ಯಕ್ಷರ ನೇಮಕವಾಯಿತು. ಒಂದು ಬಾರಿಯಾದರೂ ಈ ಪಟ್ಟಿಯ ಕುರಿತು ನನ್ನೊಂದಿಗೆ ಚರ್ಚಿಸಿಲ್ಲ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಉತ್ತಮ ಪ್ರದರ್ಶನಕ್ಕೆ ಪಾಟಿದಾರ್ ಸಮುದಾಯದ ಪ್ರತಿಭಟನೆ ಪ್ರಮುಖ ಕಾರಣವಾಗಿತ್ತು.
2015ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಈ ಸಮುದಾಯ ಪ್ರಭಾವ ಬೀರಿತ್ತು. ಇದನ್ನು ಕಾಂಗ್ರೆಸ್ ಮರೆಯಬಾರದು. ಆ ಬಳಿಕ ಏನಾಯ್ತು? ಪಕ್ಷವು ನನ್ನ ಪ್ರಭಾವವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಯಿತು, ಎಂದು ಇಂಡಿಯನ್ ಎಕ್ಸ್ಪ್ರೆಸ್ ಹೇಳಿಕೆ ನೀಡಿದ್ದಾರೆ.
ಮುಂಬರುವ ಚುನಾವಣೆಗೆ ಪಾಟಿದಾರ್ ಸಮುದಾಯದ ಇನ್ನೋರ್ವ ಮುಖಂಡ ನರೇಶ್ ಪಟೇಲ್ ಗೆ ಕಾಂಗ್ರೆಸ್ ಗಾಳ ಹಾಕುತ್ತಿರುವುದನ್ನು ಖಂಡಿಸಿದ ಹಾರ್ದಿಕ್, 2022ರ ಚುನಾವಣೆಗೆ ನರೇಶ್ ಪಟೇಲ್’ರನ್ನು ಕಾಂಗ್ರೆಸ್ ಕಡೆ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. 2027ರ ಚುನಾವಣೆಗೆ ಇವರು ಮತ್ತೊಬ್ಬ ಪಟೇಲ್’ನ ಹುಡುಕಾಟದಲ್ಲಿ ತೊಡಗಿದರೂ ಆಶ್ಚರ್ಯವಿಲ್ಲ. ಪಕ್ಷ ಈಗಿರುವ ನಾಯಕರನ್ನೇ ಸಮರ್ಥವಾಗಿ ಬಳಸಿಕೊಳ್ಳಲು ಏಕೆ ವಿಫಲವಾಗುತ್ತಿದೆ?, ಎಂದು ಪ್ರಶ್ನಿಸಿದ್ದಾರೆ.

ಇತ್ತೀಚಿಗೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ತಮ್ಮ ಕಾರ್ಯಾಧ್ಯಕ್ಷರೊಡನೆ ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದರು. ಇದೇ ಗೌರವ ಗುಜರಾತ್ ರಾಜ್ಯದ ಕಾರ್ಯಾಧ್ಯಕ್ಷರಿಗೆ ಯಾಕಿಲ್ಲ? ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚುಣಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಖಿ ಉಳಿದಿರುವಾಗ ಹಾರ್ದಿಕ್ ಪಟೇಲ್ ರಂತಹ ಪ್ರಬಲ ನಾಯಕರ ಮುನಿಸನ್ನು ನಿರ್ಲಕ್ಷಿಸುವುದು ಕಾಂಗ್ರೆಸ್ ಪಾಲಿಗೆ ನಿಜಕ್ಕೂ ಮಾರಕವಾಗಿ ಪರಿಣಮಿಸುವ ಸಾಧ್ಯತೆಗಳಿವೆ. ದೇಶದಲ್ಲಿ ಕಾಂಗ್ರೆಸ್ ಮತಬ್ಯಾಂಕನ್ನು ನಿಧಾನವಾಗಿ ತನ್ನತ್ತ ಸೆಳೆಯುತ್ತಿರುವ ಆಮ್ ಆದ್ಮಿ ಪಕ್ಷ ಈ ಬಾರಿಯ ಗುಜರಾತ್ ಚುನಾವಣೆಯಲ್ಲಿಯೂ ಪ್ರಬಲ ಸ್ಪರ್ಧೆ ಒಡ್ಡುವ ಎಲ್ಲಾ ಸಾಧ್ಯತೆಗಳಿವೆ.
2021ರಲ್ಲಿ ನಡೆದ ಸೂರತ್ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 27 ಸೀಟುಗಳನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿತ್ತು. ಅರವಿಂದ್ ಕೇಜ್ರಿವಾಲ್ ಸೂರತ್ ಗಲ್ಲಿಗಳಲ್ಲಿ ಬೃಹತ್ ರೋಡ್ ಶೋ ನಡೆಸಿ ವಿಜಯೋತ್ಸವ ಆಚರಿಸಿದ್ದರು.
ಗಾಂಧಿನಗರ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಶೇ. 21ರಷ್ಟು ಮತಗಳನ್ನು ಪಡೆದು ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಿಗೂ ಎಚ್ಚರಿಕೆಯನ್ನು ರವಾನಿಸಿತ್ತು. ಪಂಜಾಭಿನಲ್ಲಿ ಕಾಂಗ್ರೆಸ್ ಪಕ್ಷದ ಮತಗಳನ್ನು ಅನಾಯಸವಾಗಿ ಪಡೆದುಕೊಂಡ ಆಮ್ ಆದ್ಮಿ ಇಲ್ಲಿಯೂ ತನ್ನ ಪ್ರಭಾವವನ್ನು ಮುಮದುವರೆಸುವ ಸಾಧ್ಯತೆಗಳಿವೆ. ಪಂಜಾಬ್ ಗೆಲುವು ಆಮ್ ಆದ್ಮಿ ಪಕ್ಷಕ್ಕೆ ಮತ್ತಷ್ಟು ಬಲವನ್ನು ತುಂಬಲಿದೆ.
ಇಂತಹ ಹಂತದಲ್ಲಿ ಕಾಂಗ್ರೆಸ್ ತನ್ನ ಒಳಜಗಳವನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗದೆ ಹೋದರೆ, ಪಂಜಾಬ್’ನಂತೆ ಇಲ್ಲಿಯೂ ಮುಖಭಂಗ ಅನುಭವಿಸಬೇಕಾಗುತ್ತದೆ. ಹಾರ್ದಿಕ್ ಅವರ ಅಸಮಾಧಾನ ಕಾಂಗ್ರೆಸ್ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಇದನ್ನು ಆದಷ್ಟು ಶೀಘ್ರದಲ್ಲಿ ಶಮನಗೊಳಿಸಲು ಹೈಕಮಾಂಡ್ ಮುಂದೆ ಬರಬೇಕಿದೆ.