ಜನವರಿ 10ರಂದು ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಆಚರಿಸಲಿದ್ದು, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರಲಿದೆ. ಬೆಂಗಳೂರಿನ ವೈಯಾಲಿ ಕಾವಲ್ನ ಟಿಟಿಡಿ ದೇವಾಲಯದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಟಿಟಿಡಿ ಅಧೀಕ್ಷಕಿ ಜಯಂತಿ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ವೈಕುಂಠ ಏಕಾದಶಿಯಂದು 60 ರಿಂದ 70 ಸಾವಿರ ಭಕ್ತಾದಿಗಳು ಬಂದಿದ್ದರು. ಈ ವರುಷ 70 ರಿಂದ 80 ಸಾವಿರ ಭಕ್ತಾದಿಗಳು ಬರುವ ನಿರೀಕ್ಷೆ ಇದೆ. ಈ ಬಾರಿ ಯಾವುದೇ ಪಾಸ್ ವ್ಯವಸ್ಥೆ ಮಾಡಿಲ್ಲ. ಕ್ಯೂ ಮೂಲಕ ದರ್ಶನಕ್ಕೆ ಬರಬೇಕು. ಟ್ರಾಫಿಕ್ ನಿಯಂತ್ರಣಕ್ಕೆ ಸಿದ್ದತೆ ಮಾಡಿದ್ದೇವೆ ಅಂತಾನೂ ತಿಳಿಸಿದ್ದಾರೆ.
ಶುಕ್ರವಾರ ಮುಂಜಾನೆ ಬೆಳಗ್ಗೆ 3.30 ರಿಂದ ತಿರುಮಲ ತಿಮ್ಮಪ್ಪನ ದರ್ಶನ ಆರಂಭ ಆಗಲಿದೆ. ಅಂದು ರಾತ್ರಿ 11.45 ರವರೆಗೆ ದರ್ಶನ ವ್ಯವಸ್ಥೆ ಇರಲಿದೆ. ಪ್ರತಿಯೊಬ್ಬ ಭಕ್ತರಿಗೆ ಸಣ್ಣ ಲಾಡು ವಿತರಣೆ ಮಾಡಲಾಗುತ್ತದೆ. ತಿರುಪತಿ ಲಾಡು 25 ಸಾವಿರ ಬಂದಿದೆ. ಈ ಲಡ್ಡು 50 ರೂಪಾಯಿ ದರ ನಿಗದಿ ಮಾಡಲಾಗಿದ್ದು, ಕುಟುಂಬದ ಒಬ್ಬ ಸದಸ್ಯರಿಗೆ ನೀಡಲಾಗುತ್ತದೆ ಎಂದಿದ್ದಾರೆ.
ವೈಯಾಲ್ ಕಾವಲ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 200 ಕಾರ್ ನಿಲ್ಲಿಸಲು ಅವಕಾಶವಿದೆ. ಬೆಳಗ್ಗೆ 4 ಗಂಟೆಯಿಂದ 7 ಗಂಟೆವರೆಗೆ ವಿವಿಐಪಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆಗ ಜನ ಕಡಿಮೆ ಇರೋದ್ರಿಂದ ಅನುಕೂಲವಾಗಲಿದೆ. ಶೀಘ್ರ ದರ್ಶನಕ್ಕೆ 200 ರೂಪಾಯಿ ದರ ನಿಗದಿ ಮಾಡಲಾಗಿದೆ ಅಂತಾನೂ ತಿಳಿಸಿದ್ದಾರೆ.