ರಾಜ್ಯ ಕಾಂಗ್ರೆಸ್ ನಲ್ಲಿ (Congress) ನಿರಂತರ ಒಂದಿಲ್ಲೊಂದು ಬೆಳವಣಿಗೆಗಳು ನಡೆಯುತ್ತಿದ್ದು, ಕಳೆದ ಕೆಲ ದಿನಗಳಿಂದ ಶಾಸಕರ ವಿಶ್ವಾಸ ಗಳಿಸಲು ಸಿಎಂ ಸಿದ್ದರಾಮಯ್ಯ (Cm Siddaramaiah) ಮುಂದಾಗಿದ್ದಾರೆ. ಜಿಲ್ಲಾ ಉಸ್ತುವಾರಿಗಳ ಸಭೆ ಬೆನ್ನಲ್ಲೆ ಇದೀಗ ಸಚಿವರು, ಶಾಸಕರ ಸಭೆ ನಡೆಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ.

ನಾಳೆಯಿಂದ (ಜು .29) ಉಸ್ತುವಾರಿ ಸಚಿವರುಗಳ ಜೊತೆ ಶಾಸಕರ ಸಭೆಗಳನ್ನ ನಡೆಸಲಿರುವ ಸಿಎಂ ಸಿದ್ದರಾಮಯ್ಯ,ನಾಲ್ಕು ದಿನಗಳ ಕಾಲ ಜಿಲ್ಲಾವಾರು ಪ್ರತ್ಯೇಕವಾಗಿ ಸಚಿವರು, ಶಾಸಕರ ಜೊತೆ ಸಭೆ ಮಾಡಿ ಮನವಿಗಳನ್ನು ಆಲಿಸಲಿದ್ದಾರೆ.ಶಾಸಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಚಿವರ ಜೊತೆಗೆ ಶಾಸಕರ ಸಭೆಯನ್ನ ಸಿಎಂ ಸಿದ್ದರಾಮಯ್ಯ ನಡೆಸಲಿದ್ದಾರೆ.

ಶಾಸಕರು ದೂರುವಂತೆ ಸಚಿವರೊಂದಿಗಿನ ಸಮಸ್ಯೆ, ಸರ್ಕಾರ ಹಾಗೂ ಅಧಿಕಾರಿಗಳ ಹಂತದಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದಾರೆ.ಇನ್ನು ಇತ್ತೀಚಿಗೆ ಪಕ್ಷದ ಶಾಸಕರಿಗೆ 50 ಕೋಟಿ ಅನುದಾನವನ್ನೂ ಸಿಎಂ ಬಿಡುಗಡೆ ಮಾಡಿದ್ದಾರೆ. ಇದೀಗ ಸರಣಿ ಜಿಲ್ಲಾ ಪ್ರವಾಸದ ನಡುವೆಯೇ ಶಾಸಕರು, ಸಚಿವರ ಸಮಸ್ಯೆಗಳನ್ನು ಆಲಿಸಲು ಸಿಎಂ ಮುಂದಾಗಿದ್ದಾರೆ.

ನಾಳೆ ಮೊದಲ ದಿನ ಮೈಸೂರು, ಚಾಮರಾಜನಗರ, ತುಮಕೂರು, ಕೊಡಗು, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಶಾಸಕರು, ಸಚಿವರ ಜೊತೆ ಸಭೆ ನಡೆಸಲಿದ್ದು, ಆ ನಂತರ ಉಳಿದ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಶಾಸಕರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ.