ಬೆಂಗಳೂರು: ರಾಜ್ಯದಲ್ಲಿರುವ ಸುಮಾರು 6 ಸಾವಿರ ಪಂಚಾಯತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಅವರ ಹೆಸರಿಡಲಾಗುವುದು. ಇದು ಕಾಂಗ್ರೆಸ್(Congress) ಪಕ್ಷದ ತೀರ್ಮಾನ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್(DCM D.K Shivakumar) ಘೋಷಿಸಿದ್ದಾರೆ.

ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ರಾಜಭವನ ಚಲೋ ಮಹಾತ್ಮ ಗಾಂಧಿ ನರೇಗಾ ಬಚಾವ್ ಸಂಗ್ರಾಮ ಪ್ರತಿಭಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಉಪಾಧ್ಯಕ್ಷರಾದ ಉಗ್ರಪ್ಪ ಹಾಗೂ ಕೆಪಿಸಿಸಿ ಪದಾಧಿಕಾರಿಗಳು ಈ ವಿಚಾರವಾಗಿ ನಮಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ. ಆ ಮೂಲಕ ಮಹಾತ್ಮ ಗಾಂಧಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಕೆಲಸ ಮಾಡಲಾಗುವುದು. ಹಳ್ಳಿಗೊಂದು ಶಾಲೆ, ಸಹಕಾರ ಸಂಘ, ಪಂಚಾಯತಿ ಇರಬೇಕು ಎಂಬುದು ಗಾಂಧೀಜಿ ಅವರ ಸಂಕಲ್ಪ ಎಂದರು.

ಬಡ ಜನರ ಉದ್ಯೋಗದ ಹಕ್ಕಿನ ಪರವಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಉದ್ಯೋಗ ಇಲ್ಲದವರಿಗೆ ಉದ್ಯೋಗ ನೀಡಿದ್ದು, ಸೋನಿಯಾ ಗಾಂಧಿ ಅವರ ನೇತೃತ್ವದ ಮನಮೋಹನ್ ಸಿಂಗ್ ಅವರ ಸರ್ಕಾರ. ನಮ್ಮ ಉದ್ಯೋಗ ಖಾತರಿ ಯೋಜನೆಯನ್ನು ವಿಶ್ವವೇ ಗಮನಿಸಿತ್ತು. ಈ ಯೋಜನೆ ಬಹಳ ಅತ್ಯುತ್ತಮ ಯೋಜನೆ ಎಂದು ವಿಶ್ವಬ್ಯಾಂಕ್ 2013ರಲ್ಲಿ ಶ್ಲಾಘಿಸಿತ್ತು. 5700 ಪಂಚಾಯ್ತಿಗಳಿದ್ದು, ಪ್ರತಿ ವರ್ಷ ನಮ್ಮ ರಾಜ್ಯದಲ್ಲಿ ಈ ಯೋಜನೆಯಿಂದ 6 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿತ್ತು ಎಂದು ಹೇಳಿದರು.

ಯಾವ ಕಾಮಗಾರಿ, ಅಭಿವೃದ್ಧಿ ಕೆಲಸ ಕೈಗೊಳ್ಳಬೇಕು ಎಂದು ಈ ಹಿಂದೆ ಪಂಚಾಯ್ತಿಗಳು ತೀರ್ಮಾನ ಮಾಡುತ್ತಿದ್ದವು. ಬೇರೆಯವರ ಜಮೀನಿನಲ್ಲಿ ಕೂಲಿಗೆ ಹೋಗಲು ಹಿಂಜರಿಯುವವರಿಗೆ ತಮ್ಮ ಜಮೀನಿನಲ್ಲೇ ಕೆಲಸ ಮಾಡಿ ಕೂಲಿ ಪಡೆಯುವ ಅವಕಾಶವನ್ನು ಸೋನಿಯಾ ಗಾಂಧಿ ಅವರ ನಿರ್ದೇಶನದಂತೆ ಕೇಂದ್ರ ಸಚಿವ ಸಿ.ಪಿ. ಜೋಷಿ ಅವರು ಈ ಯೋಜನೆ ರೂಪಿಸಿದ್ದರು. ಇಂತಹ ಐತಿಹಾಸಿಕ ತೀರ್ಮಾನವನ್ನು ಯುಪಿಎ ಸರ್ಕಾರ ತೆಗೆದುಕೊಂಡಿತ್ತು. ಆಶ್ರಯ ಮನೆ, ಇಂದಿರಾ ಆವಾಸ್ ಮನೆ ನಿರ್ಮಾಣ, ದನಗಳ ಕೊಟ್ಟಿಗೆ, ವ್ಯವಸಾಯ ಸಂಬಂಧಿ ಕೆಲಸ ಮಾಡಲು ಕೂಲಿ ನೀಡಲಾಗುತ್ತಿತ್ತು ಎಂದು ವಿವರಿಸಿದರು.

ಈ ಯೋಜನೆ ಆಂದೋಲನವಾಗಿ ನಡೆಯುತ್ತಿತ್ತು. ಈ ಯೋಜನೆಗೆ ಕೇಂದ್ರ ಸರ್ಕಾರ 90% ಅನುದಾನ ನೀಡುತ್ತಿತ್ತು. ಕಬ್ಬಿಣ, ಸಿಮೆಂಟ್ ನಂತಹ ಸಾಮಾಗ್ರಿಗಳ ಬಳಕೆಯ ಕಾಮಗಾರಿಗಳಿದ್ದರೆ, ಅವುಗಳಿಗೆ ರಾಜ್ಯ ಸರ್ಕಾರ 25% ಅನುದಾನ ನೀಡಬೇಕಾಗಿತ್ತು. 7 ಸಾವಿರ ಜನ ಇದರ ಉಸ್ತುವಾರಿ ಜವಾಬ್ದಾರಿಯ ಉದ್ಯೋಗ ಸೃಷ್ಟಿಯಾಗಿದ್ದವು. ಮಹಾತ್ಮ ಗಾಂಧಿ ಅವರ ಹೆಸರನ್ನು ಬದಲಿಸಿ ಈ ಕಾಯ್ದೆಗೆ ಹೊಸ ರೂಪ ನೀಡಿದ್ದಾರೆ. ನೂತನ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ 60%, ರಾಜ್ಯ ಸರ್ಕಾರ 40% ಅನುದಾನ ಭರಿಸಬೇಕಾಗಿದೆ. ಈ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ನಡೆಸುತ್ತಿದ್ದೇವೆ. 2 ದಿನಗಳ ಕಾಲ ಈ ವಿಚಾರವಾಗಿ ಚರ್ಚೆ ಮಾಡುತ್ತೇವೆ. ಬಿಜೆಪಿ ನಾಯಕರು ಏನು ಮಾತನಾಡುತ್ತಾರೆ ನೋಡೋಣ ಎಂದರು.












