ಯುವಜನರು ಅರ್ಹತೆಗೆ ತಕ್ಕ ಕೆಲಸ ಇಲ್ಲದೆ ಕೂಲಿ ಮಾಡುವ ದೌರ್ಭಾಗ್ಯ ಸದ್ಯ ದೇಶದ್ದು. ಟೀ ಮಾರಿ ಪ್ರಧಾನಿಯಾದೆ ಎಂಬ ಭ್ರಮ ಕಟ್ಟಿದ ದೇಶದ ಯುವಜನರು ಬೇರೆ ವಿಧಿಯಿಲ್ಲದೆ UG, PG, Professional Courses ವಿದ್ಯಾಭ್ಯಾಸ ಮುಗಿಸಿ ಬೀದಿಯಲ್ಲಿ ಟೀ ಮಾರಾಟ ಮಾಡುವ ಕಾಯಕಕ್ಕೆ ಕೈ ಹಾಕುತ್ತಿದ್ದಾರೆ. ಈ ಹಿಂದೆ MBA Chaiwala ಎಂಬ ಹೆಸರಿನಲ್ಲಿ ಪ್ರಫುಲ್ ಬಿಲ್ಲೋರ್ ಎಂಬ ಯುವಕ MBA ಓದು ಮುಗಿಸಿದ್ದರೂ ಕೂಡ ಸೂಕ್ತ ಕೆಲಸವಿಲ್ಲದೆ ಟೀ ಮಾರಾಟ ಮಾಡುವ ಕೆಲಸಕ್ಕೆ ಇಳಿದಿದ್ದ. ಇದು ದೇಶವ್ಯಾಪಿ ಮನೆ ಮನೆಯಲ್ಲಿ ಚರ್ಚೆಯಾಗಿತ್ತು. ಅಷ್ಟಕ್ಕೂ ಟೀ ಮಾರಾಟ ಮಾಡುವುದರಲ್ಲಿ ತಪ್ಪೇನು ಎಂಬ ಹೂಂಕಾರ ಈ ವೇಳೆ ಕೇಳಿ ಬಂದಿತ್ತು. ಹೌದು, ಟೀ ಮಾರುವುದು ತಪ್ಪಲ್ಲ. ಅದು ಕೀಳಾದ ಕೆಲಸವೂ ಅಲ್ಲ. ಆದರೆ ದೇಶದ ಭವಿಷ್ಯ ಹೊತ್ತ ಯುವಜನರು ಬೆಟ್ಟದಷ್ಟು ಓದಿ ಕೂಲಿ ಕೆಲಸ ಮಾಡಿಕೊಳ್ಳುವುದು ಎಂದರೆ ದೇಶ ಮುಂದೆ ಸಾಗಬಹುದಾದ ಹಾದಿಯನ್ನು ನಿಚ್ಚಳವಾಗಿಸುತ್ತದೆ.
ಸದ್ಯ ಬಿಹಾರದ ಓರ್ವ ಯುವತಿ ಕೂಡ ‘ಚಾಯ್ ವಾಲಿ’ ಎಂಬ ಹೆಸರಿನಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಸೂಕ್ತ ಕೆಲಸ ಸಿಗದೆ ಟೀ ಮಾರಾಟ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಪಾಟ್ನಾದ ಪ್ರಿಯಾಂಕ ಗುಪ್ತಾ ಎಂಬ ಈ ಯುವತಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದುಕೊಂಡಿದ್ದಾರೆ. 2019ರಲ್ಲಿ ಪದವಿ ಓದು ಮುಗಿಸಿದ ಪ್ರಿಯಾಂಕ ಗುಪ್ತಾ ಕಳೆದ ಮೂರು ವರ್ಷಗಳಿಂದ ಕೆಲಸಕ್ಕೆ ಅಲೆದಾಡಿದ್ದಾರೆ. ಹಲವು ಕಂಪೆನಿಗಳ ಮೆಟ್ಟಿಲೇರಿದ್ದಾರೆ. ಕೊನೆಗೆ ನಿರುದ್ಯೋಗ ತಾಂಡವ ಆಡುತ್ತಿರುವ ದೇಶದಲ್ಲಿ ಬದುಕು ಸಾಗಿಸುವ ದಾರಿ ನೋಡಿದ್ದಾರೆ.
ಪ್ರಿಯಾಂಕಾ ಗುಪ್ತಾ ಮೂಲತಃ ಬಿಹಾರದ ಪೂರ್ಣಿಯಾದವರು. ಆದರೆ ಇತ್ತೀಚಿನ ದಿನಗಳಲ್ಲಿ ಪಾಟ್ನಾ ಮಹಿಳಾ ಕಾಲೇಜು ಬಳಿ ಟೀ ಅಂಗಡಿ ತೆರೆದಿದ್ದಾರೆ. ಪ್ರಿಯಾಂಕಾ ಸುಮಾರು ಎರಡು ವರ್ಷಗಳಿಂದ ಕೆಲಸ ಹುಡುಕುವ ಜತೆಗೆ ಬ್ಯಾಂಕ್‌ನ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಆದರೆ ಆಕೆ ಯಾವುದೇ ಪರೀಕ್ಷೆಯಲ್ಲಿ ಯಶಸ್ವಿಯಾಗಲಿಲ್ಲ. ಆದರೂ ಪ್ರಯತ್ನ ಬಿಡದ ಪ್ರಿಯಾಂಕಾ ಪರೀಕ್ಷೆಗಳಿಗೂ ಓದುತ್ತಾ ಪಾಟ್ನಾದಲ್ಲಿ ಟೀ ಸ್ಟಾಲ್ ಸ್ಥಾಪಿಸಿ ಜೀವನ ಸಾಗಿಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ANIಗೆ ಕೊಟ್ಟ ಸಂದರ್ಶನದಲ್ಲಿ, ನಾನು 2019 ರಲ್ಲಿ ನನ್ನ ವಿದ್ಯಾಬ್ಯಾಸ ಮುಗಿಸಿದೆ. ಆದರೆ ಕಳೆದ 2 ವರ್ಷಗಳಲ್ಲಿ ಕೆಲಸ ಪಡೆಯಲು ಸಾಧ್ಯವಾಗಲಿಲ್ಲ. ನಾನು ಪ್ರಫುಲ್ ಬಿಲ್ಲೋರ್ (MBA Chaiwala) ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ಹಲವು ಚಾಯ್‌ವಾಲಾಗಳಿದ್ದಾರೆ. ಹೀಗಿರುವಾಗ ಚಾಯ್‌ವಾಲಿಗಳು ಏಕೆ ಇರಬಾರದು.? ಎಂದು ಪ್ರಶ್ನೆ ಮಾಡಿದ್ದಾರೆ.
ಮೋದಿ ಎದುರಿಸಿದ ಎರಡು ಸಾರ್ವತ್ರಿಕ ಚುನಾವಣೆಯಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ದೇಶದ ಯುವ ಜನತೆಗೆ ನೀಡಿದ್ದರು. ಆದರೆ ಈ ವರೆಗೆ ಆ ಭರವಸೆ ಈಡರೇಲಿಲ್ಲ. ಈ ನಡುವೆ ಉದ್ಯೋಗವಿಲ್ಲದಿದ್ದರೆ ಪಕೋಡ ಮಾರಿ ಎಂದು ಹಲ್ಲು ಕಿಸಿದಿದ್ದರು. ಉದ್ಯೋಗ ಸೃಷ್ಟಿ ಬದಲಿಗೆ ದೇಶದ ಆರ್ಥಿಕ ಏಳಿಗೆಯನ್ನು ಮಾದರಿಯಾಗಿ ನಡೆಸಲು ಪ್ರಧಾನಿ ಮೋದಿಗೆ ಈವರೆಗೆ ಸಾಧ್ಯವಾಗಲಿಲ್ಲ. ಹೀಗೆ ದೇಶದ ಯುವ ಜನರು ಅರ್ಹತೆಗೆ ತಕ್ಕ ಕೆಲಸ ಪಡೆಯದೆ ಬೀದಿಯಲ್ಲಿ ಕೂಲಿ ಮಾಡಲು ಇಳಿಯುತ್ತಿದ್ದಾರೆ.
ಒಂದು ದೇಶದ ಅಭಿವೃದ್ಧಿ ಮಾಪನಗೊಳ್ಳುವುದು ಅಲ್ಲಿನ ಸಾಕ್ಷರತೆ, ಸಾರ್ವಜನಿಕ ಕ್ಷೇತ್ರದಲ್ಲಿನ ಯುವಜನರ ಭಾಗಿತ್ವ ಹಾಗೂ ಮಹಿಳಾ ಸುರಕ್ಷಿತೆಯ ಆಧಾರದಲ್ಲಿ. ಮುಖ್ಯವಾಗಿ, ಸಾಕ್ಷರತೆಯೇ ದೇಶ ಮುಂದೆ ಸಾಧಿಸಬಹುದಾದ ಸಾಧನೆಗಳಿಗೆ ಇರುವ ಅಡಿಪಾಯ. ಈ ಸಾಕ್ಷರತೆ ದೇಶದ ಆರ್ಥಿಕತೆ ಮೇಲೆ ಬೀರಬಲ್ಲ ಪರಿಣಾಮ ಬಿಲಿಯನ್ ಡಾಲರ್ ಮಟ್ಟದಲ್ಲಿದೆ. ಹೀಗೆ ಸಾಕ್ಷರತೆಯಿಂದ ಸಬಲೀಕರಣಗೊಳ್ಳುವ ಯುವ ಜನರಿಗೆ ಅವರ ಆಯ್ಕೆ ಮತ್ತು ಯೋಗ್ಯತೆಗೆ ತಕ್ಕಂತೆ ಬೇಕಾಗಿರುವ ಉದ್ಯೋಗಗಳು ಸೃಷ್ಟಿಯಾಗಿರಬೇಕು. ಆಗಲೇ ಒಂದು ದೇಶ ಸೃಜನಶೀಲವಾಗಿ ಯೋಚಿಸಲು ಹಾಗು ಬದುಕಲು ಸಾಧ್ಯವಾಗುತ್ತದೆ. ಆದರೆ ಇಲ್ಲಿ ಉನ್ನತ ಶಿಕ್ಷಣ ಪಡೆದ ಯುವ ಜನತೆ ಟೀ ಮಾರಲು, ಪಕೋಡಾ ಮಾರಲು, ಕೂಲಿ ಮಾಡಲು ಹೊರಟಿರುವುದು ದುರಂತ. ಒಂದು ಪ್ರಫುಲ್ ಬಿಲ್ಲೋರ, ಒಂದು ಪ್ರಿಯಾಂಕ ಗುಪ್ತಾ ದೇಶದ ಕೋಟ್ಯಾಂತರ ಸಂಖ್ಯೆಯಲ್ಲಿರುವ ಯುವ ಜನರ ಪ್ರತಿನಿಧಿಗಳು ಎಂಬುವುದು ನಾವು ಮರೆಯಕೂಡದು.