![](https://pratidhvani.com/wp-content/uploads/2024/11/n6402149751732329741503518ca96e581b72a4a7e1ba3efcc40e749955d35ab75b0a0f9fb5079abfae804e.jpg)
ಮಡಿಕೇರಿ ;ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೊಡಗನ್ನು ಆಳ್ವಿಕೆ ಮಾಡಿದ್ದ ಹಾಲೇರಿ ರಾಜವಂಶಸ್ಥರ ಸಮಾಧಿಗಳಿರುವ ಅಂದರೆ ಗದ್ದುಗೆಗಳ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದು, ಅವುಗಳನ್ನು ಕೂಡಲೇ ತೆರವು ಮಾಡಬೇಕು.ಬಳಿಕ ಗದ್ದುಗೆ ಜಾಗವನ್ನು ಸಂರಕ್ಷಿಸಬೇಕು ಎಂದು ಹೈಕೋರ್ಟ್ ಕೊಡಗು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
![](https://pratidhvani.com/wp-content/uploads/2024/11/1002737055-1024x585.jpg)
ಈ ಗದ್ದುಗೆ ಜಾಗವನ್ನು ಸುಮಾರು 24 ಮುಸ್ಲಿಂ ಮತ್ತು ಎರಡು ಹಿಂದೂ ಕುಟುಂಬಗಳು ಒತ್ತುವರಿ ಮಾಡಿಕೊಂಡಿದ್ದು ಇದು ಕಳೆದ 2.3 ದಶಕಗಳ ಹಿಂದೆಯೇ ಜಾಗ ಒತ್ತುವರಿ ಆಗಿದೆ ಅಲ್ಲದೆ ಇಲ್ಲಿ ಒಂದು ಶಾಲೆ ಕೂಡ ನಡೆಯುತಿದ್ದು ಎಲ್ಲರಿಗೂ ಜಿಲ್ಲಾಡಳಿತ ನೋಟೀಸ್ ಜಾರಿ ಗೊಳಿಸಿದೆ.
ಅಂದಿನ ಕೊಡಗು ರಾಜ್ಯವನ್ನು ಆಳ್ವಿಕೆ ಮಾಡಿದ್ದ ಹಾಲೇರಿ ರಾಜವಂಶಸ್ಥರರಾದ ಲಿಂಗರಾಜ ಅರಸು ದೊಡ್ಡವೀರರಾಜೇಂದ್ರ ಮತ್ತು ಅವನ ಪತ್ನಿ ಮಹಾದೇವಿಯಮ್ಮನವರ ಸಮಾಧಿ, ಚಿಕ್ಕವೀರರಾಜೇಂದ್ರನ ತಂದೆ ಲಿಂಗರಾಜೇಂದ್ರನ ಸಮಾಧಿ ಹಾಗೂ ವೀರರಾಜೇಂದ್ರನ ಗುರು ರುದ್ರಪ್ಪನವರ ಸಮಾಧಿಗಳು ಮಡಿಕೇರಿಯಿಂದ ಅಬ್ಬಿಫಾಲ್ಸ್ ಹೋಗುವ ರಸ್ತೆಯಲ್ಲಿ ಇವೆ.
ಇವೆಲ್ಲವು ಈಗ ಪುರಾತತ್ವ ಇಲಾಖೆಯ ಸಂರಕ್ಷಿತ ಸ್ಮಾರಕಗಳಾಗಿವೆ. ಇದಕ್ಕೆ ಸಂಬಂಧಿಸಿದಂತೆ ಇಲ್ಲಿ 19.86 ಎಕರೆ ಜಾಗವಿದ್ದು, ಅದರಲ್ಲಿ ಬರೋಬ್ಬರಿ 17 ಎಕರೆಗೂ ಹೆಚ್ಚು ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ.ಅಲ್ಲದೆ ಐಟಿಡಿಪಿ ಇಲಾಖೆ ಕೂಡ ಒತ್ತುವರಿ ಮಾಡಿಕೊಂಡು ವಸತಿ ಗೃಹಗಳನ್ನು ನಿರ್ಮಿಸಿದೆ. ಜೊತೆಗೆ ಮಡಿಕೇರಿ ನಗರಸಭೆ ಕೂಡ ಶಾಲೆಯನ್ನು ನಿರ್ಮಿಸಿದೆ. ಹೀಗಾಗಿ 19.86 ಎಕರೆ ಜಾಗದಲ್ಲಿ ಗದ್ದುಗೆಯ ಜಾಗವೆಂದು ಉಳಿದಿರುವುದು ಕೇವಲ 2 ಎಕರೆ ಮಾತ್ರ.
ಒತ್ತುವರಿಯಾಗಿರುವ ಎಲ್ಲಾ ಜಾಗವನ್ನು ತೆರವು ಮಾಡಿ ಐತಿಹಾಸಿಕ ಸ್ಮಾರಕದ ಜಾಗವನ್ನು ರಕ್ಷಿಸಬೇಕು ಎಂದು ಕೊಡಗು ವೀರಶೈವ ಸಮಾಜ ಮತ್ತು ಪರಮಶಿವಯ್ಯ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರು. ಎಲ್ಲವನ್ನೂ ವಿಚಾರಣೆ ಮಾಡಿರುವ ರಾಜ್ಯ ಉಚ್ಛನ್ಯಾಯಾಲಯವು ಎಲ್ಲವನ್ನು ತೆರವು ಮಾಡಿ ಜಾಗವನ್ನು ಸಂರಕ್ಷಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಹೀಗಾಗಿ ರಾಜ್ಯ ಸರ್ಕಾರವು ಕೊಡಗು ಜಿಲ್ಲಾಡಳಿತಕ್ಕೆ ನೊಟೀಸ್ ನೀಡಿದ್ದು ಒತ್ತುವರಿಯಾಗಿರುವ ಎಲ್ಲಾ ಜಾಗವನ್ನು ತೆರವು ಮಾಡಿ ಗದ್ದುಗೆ ಜಾಗವನ್ನು ಸಂರಕ್ಷಿಸುವಂತೆ ಸೂಚಿಸಿದೆ. ನಿನ್ನೆಯಷ್ಟೇ ಆದೇಶ ಮಾಡಲಾಗಿದ್ದು, 15 ದಿನಗಳ ಒಳಗೆ ಕ್ರಮವಹಿಸಿ ವರದಿ ನೀಡುವಂತೆ ಸೂಚಿಸಿದೆ. ಹತ್ತಾರು ವರ್ಷಗಳ ಹಿಂದಿನಿಂದಲೂ ಮನೆಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದ 25 ಕುಟುಂಬಗಳು ಇದೀಗ ಬೀದಿಗೆ ಬರುವ ಆತಂಕ ಎದುರಾಗಿದೆ.