ಬೆಂಗಳೂರು : ಏಳನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಸರ್ಕಾರಿ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಮನವೊಲಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿಫಲರಾದ ಹಿನ್ನೆಲೆಯಲ್ಲಿ ಇಂದಿನಿಂದ ಮುಷ್ಕರ ಆರಂಭಗೊಂಡಿದೆ.
ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಪ್ರೌಢ ಶಾಲಾ ಶಿಕ್ಷಕರ ಸಂಘವು ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗಿದೆ. ಇಂದು ರಾಜ್ಯದ 80 ಸಾವಿರ ಪ್ರೌಢಶಾಲಾ ಶಿಕ್ಷಕರು ತಮ್ಮ ಸೇವೆಗೆ ಗೈರಾಗಿರುವ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಎಸ್ಎಸ್ಎಲ್ಸಿ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಇಂದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಹಿಂದಿ ಪೂರ್ವಭಾವಿ ಪರೀಕ್ಷೆ ನಡೆಯಬೇಕಿತ್ತು. ಆದರೆ ರಾಜ್ಯ ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮಾರ್ಚ್ 6ನೇ ತಾರೀಖಿಗೆ ಮುಂದೂಡಲಾಗಿದೆ.
ರಾಜ್ಯ ಸರ್ಕಾರಿ ನೌಕರರು ಮುಷ್ಕರ ನಡೆಸುವುದನ್ನು ತಡೆಯಲಿಕ್ಕೋಸ್ಕರ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು . ತಡರಾತ್ರಿ ನಡೆದ ಸಭೆಯಲ್ಲಿ ಸಿಎಂ ಬೊಮ್ಮಾಯಿ ಏಳನೇ ವೇತನ ಆಯೋಗ ಜಾರಿಗೆ ಸಮಯಾವಕಾಶ ಬೇಕೆಂದು ಕೇಳಿಕೊಂಡಿದ್ದರು. ಅಲ್ಲಿಯವರೆಗೂ ತಾಳ್ಮೆ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದರು. ಇದರ ಜೊತೆಯಲ್ಲಿ ಶೇಕಡಾ 40ರಷ್ಟು ವೇತನ ಹೆಚ್ಚಳ ಮಾಡಲು ಸಾಧ್ಯವಾಗದೇ ಹೋದರು ಶೇಕಡಾ 8ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಹೇಳಿದ್ದರು . ಆದರೆ ಇದಕ್ಕೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಸಂಧಾನ ವಿಫಲಗೊಂಡಿದೆ. ಹೀಗಾಗಿ ಇಂದು ರಾಜ್ಯದಲ್ಲಿ ಸರ್ಕಾರಿ ನೌಕರರು ಮುಷ್ಕರಕ್ಕೆ ಬೆಂಬಲ ನೀಡಿದ್ದು ಸರ್ಕಾರಿ ಇಲಾಖೆಗಳಲ್ಲಿ ಸೇವೆ ವ್ಯತ್ಯಯಗೊಂಡಿದ್ದು ಸರ್ಕಾರ ಹಾಗೂ ಸರ್ಕಾರಿ ನೌಕರರ ಹಗ್ಗ ಜಗ್ಗಾಟದಲ್ಲಿ ರಾಜ್ಯದ ಜನತೆ ಪರದಾಡುವಂತಾಗಿದೆ .

