ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನಡೆದ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯ ಬಳಿಕ, ಇದೀಗ ನಗರವನ್ನು ಕಸಮುಕ್ತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಆಗಸ್ಟ್ 1ರಿಂದ ಬೆಂಗಳೂರಿನಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಆರಂಭವಾಗುವುದಾಗಿ ಘೋಷಿಸಿದ್ದು, ನಗರದಾದ್ಯಂತ ಸಂಗ್ರಹವಾಗಿರುವ ಕಸ ಹಾಗೂ ಕಟ್ಟಡ ಅವಶೇಷಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈಗಾಗಲೇ ನಗರದಲ್ಲಿರುವ 1,616 ಕಸ ಸಂಗ್ರಹವಾಗಿರುವ ಸಮಸ್ಯಾತ್ಮಕ ಸ್ಥಳಗಳನ್ನು ಗುರುತಿಸಿದ್ದು, ಈ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಸಂಪೂರ್ಣ ಸ್ವಚ್ಛತೆ ಕೈಗೊಳ್ಳಲು ಸಿದ್ಧತೆ ನಡೆಸಿದೆ.

‘ಫ್ರೀಡಂ ಫ್ರಮ್ ವೇಸ್ಟ್‘ ಹೆಸರಿನ ವಿಶೇಷ ಅಭಿಯಾನದಡಿ ನಗರದ ಎಲ್ಲಾ ಖಾಲಿ ನಿವೇಶನಗಳ ಮಾಲೀಕರು ಆಗಸ್ಟ್ 15ರೊಳಗೆ ತಮ್ಮ ಜಾಗವನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು ಎಂದು ಸರ್ಕಾರ ಗಡುವು ವಿಧಿಸಿದೆ.ಖಾಲಿ ಜಾಗಗಳಲ್ಲಿ ಬೆಳೆದಿರುವ ಗಿಡಗಂಟಿಗಳು, ಸಾರ್ವಜನಿಕರು ಎಸೆದಿರುವ ಕಸದ ರಾಶಿ ಹಾಗೂ ಕಟ್ಟಡ ತ್ಯಾಜ್ಯವನ್ನು ನಿವೇಶನ ಮಾಲೀಕರೇ ತಮ್ಮ ಖರ್ಚಿನಲ್ಲಿ ತೆರವುಗೊಳಿಸಬೇಕಾಗಿದೆ.
ಆಗಸ್ಟ್ 15ರ ನಂತರವೂ ಖಾಲಿ ಜಾಗಗಳಲ್ಲಿ ಕಸ ಅಥವಾ ತ್ಯಾಜ್ಯ ಕಂಡುಬಂದರೆ, ಸರ್ಕಾರವೇ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಳ್ಳಲಿದೆ. ಆದರೆ, ಆ ಕಾರ್ಯಾಚರಣೆಗೆ ತಗುಲುವ ಸಂಪೂರ್ಣ ವೆಚ್ಚವನ್ನು ಸಂಬಂಧಿಸಿದ ನಿವೇಶನ ಮಾಲೀಕರಿಂದಲೇ ವಸೂಲಿ ಮಾಡಲಾಗುತ್ತದೆ.ಈ ಮೊತ್ತವನ್ನು ಮಾಲೀಕರ ಆಸ್ತಿ ತೆರಿಗೆ (Property Tax) ಜೊತೆಗೆ ಸೇರಿಸಿ ವಸೂಲಿ ಮಾಡುವಂತೆ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಆಗಸ್ಟ್ ತಿಂಗಳಿಡೀ ನಗರದಲ್ಲಿ ನಿರಂತರ ಸ್ವಚ್ಛತಾ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದಾರೆ.”ಬೆಂಗಳೂರಿನ ಯಾವುದೇ ರಸ್ತೆ, ಬಡಾವಣೆ ಅಥವಾ ಸಾರ್ವಜನಿಕ ಸ್ಥಳದಲ್ಲಿ ಕಸದ ರಾಶಿ ಕಾಣಿಸಬಾರದು. ಗುರುತಿಸಲಾದ ಎಲ್ಲಾ ‘ಬ್ಲ್ಯಾಕ್ ಸ್ಪಾಟ್’ಗಳನ್ನು ಸಂಪೂರ್ಣ ಕಸಮುಕ್ತಗೊಳಿಸಬೇಕು. ನಾಗರಿಕರಿಗೆ ಕಸದ ಸಮಸ್ಯೆಯಿಂದ ಮುಕ್ತಿ ಕಲ್ಪಿಸುವುದು ಸರ್ಕಾರದ ಗುರಿಯಾಗಿದೆ” ಎಂದು ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಈ ಅಭಿಯಾನದ ಮೂಲಕ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಬೆಂಗಳೂರನ್ನು ಸ್ವಚ್ಛ, ಸುಂದರ ಹಾಗೂ ಕಸಮುಕ್ತ ನಗರವನ್ನಾಗಿ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.






