ದೇಶದಲ್ಲಿ ಪ್ರತಿಭಟನೆಗಳೆಂದರೆ ಆಡಳಿತರೂಢ ಸರ್ಕಾರಗಳಿಗೆ ನುಂಗಲಾರದ ತುತ್ತಾಗಿವೆ. ಸಿಎಎ ಪ್ರತಿಭಟನೆಯಲ್ಲಿ ತೊಡಗಿದ್ದವರ ವಿರುದ್ಧ ಮಂಗಳೂರಿನಲ್ಲಿ ಗೋಲಿಬಾರ್ ನಡೆಸಲಾಯಿತು, ದೆಹಲಿಯಲ್ಲಿ ದಂಗೆಯನ್ನೇ ಎಬ್ಬಿಸಲಾಯಿತು. ರೈತರ ವಿರುದ್ಧ ಜಲಫಿರಂಗಿ ಪ್ರಯೋಗವಾದವು. ರೈತರನ್ನೇ ದೇಶದ್ರೋಹಿಗಳೆಂದು ಕರೆಯುವ ಹುನ್ನಾರ ನಡೆಯಿತು. ಪ್ರತಿಭಟನಾಸ್ಥಳಗಳಲ್ಲಿ ಮುಳ್ಳು ಬೇಲಿ, ಮೊಳೆಗಳನ್ನು ನೆಡಲಾಯಿತು. ಇಷ್ಟಾದರೂ, ಈ ದೇಶದಲ್ಲಿ ಪ್ರತಿಭಟನೆಗಳ ಕಹಳೆ ಮೊಳಗುತ್ತಲೇ ಇದೆ. ಇದರೊಂದಿಗೆ ಅಧಿಕಾರದ ಅಮಲು ಏರಿದವರ ಜನಧಮನ ನೀತಿ ಮುಂದುವರೆಯುತ್ತಲೇ ಇದೆ. ಪ್ರತಿಭಟನೆಗಳನ್ನು ಬಂಧನದ ಮೂಲಕ ಹತ್ತಿಕ್ಕುವುದೇ ‘ಹೊಸ ಭಾರತದ’ ವ್ಯಾಖ್ಯಾನವೆಂಬಂತೆ ಬಿಂಬಿಸಲಾಗುತ್ತಿದೆ.
ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು, ದಲಿತರು, ಬಡವರು ಹೀಗೆ ಸಮಾಜದಲ್ಲಿ ಸಲವು ಸಮುದಾಯ, ಪಂಗಡಗಳ ಧಮನದ ಬಳಿಕ ಈಗ ಕಲಾವಿದರ ಸರದಿ ಬಂದಿದೆ. ಅರುಣಾಚಲ ಪ್ರದೇಶದಲ್ಲಿ ಗೋಡೆ ಚಿತ್ರ ಬರೆದು ಪ್ರತಿಭಟಿಸಿದ ಕಲಾವಿದ ಹಾಗೂ ಮಾನ ಹಕ್ಕುಗಳ ಹೋರಾಟಗಾರರೊಬ್ಬರನ್ನು ಬಂಧಿಸಲಾಗಿದೆ.
ಯುವ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ವಕೀಲರೂ ಆಗಿರುವ ಎಬೊ ಮಿಲಿ ಹಾಗೂ ಅಸ್ಸಾಂ ಮೂಲದ ಗ್ರಾಫಿಟಿ ಕಲಾವಿದ ನಿಲಿಮ್ ಮಹಾಂತ ಅವರನ್ನು ಅರುಣಾಚಲ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ರಾಜ್ಯ ರಾಜಧಾನಿ ಇಟಾನಗರದಲ್ಲಿರುವ ರಾಜ್ಯ ಸರ್ಕಾರದ ಕಟ್ಟಡಗಳ ಆವರಣ ಗೋಡೆಯ ಮೇಲೆ ಪ್ರತಿಭಟನಾ ಚಿತ್ರಗಳನ್ನು ಬಿಡಿಸಿದ್ದೇ ಇವರ ಬಂಧನಕ್ಕೆ ಕಾರಣ.
ಎಬೊ ಮಿಲಿ ಅವರನ್ನು ಪೊಲೀಸರು ಮೊದಲು ಬಂಧಿಸಿದ್ದರು. ಆವರಣ ಗೋಡೆಯ ಮೇಲೆ ಅರುಣಾಚಲ ಪ್ರದೇಶದ 50 ವರ್ಷದ ಬೆಳವಣಿಗೆಯನ್ನು ಬಿಂಬಿಸುವ ಗೋಡೆ ಚಿತ್ರಗಳನ್ನು ಬರೆಯಲಾಗಿತ್ತು. ಈ ಚಿತ್ರಗಳ ನಡುವೆ ಅಣೆಕಟ್ಟುಗಳನ್ನು ಬಿಂಬಿಸುವ ಚಿತ್ರಗಳೂ ಇದ್ದು, ಅದರ ಮೇಲೆ “NO MORE DAMS” ಎಂದು ಬರೆಯಲಾಗಿತ್ತು.
“ಈ ಪ್ರತಿಭಟನೆಯು ಇನ್ನೊಬ್ಬ ಕಲಾವಿದನನ್ನು ಹೀಯಾಳಿಸಲು ಮಾಡಿದ್ದಲ್ಲ. ಬದಲಾಗಿ, ಪರಿಸರ ಸೂಕ್ಷ್ಮ ಪ್ರದೇಶವಾದ ಅರುಣಾಚಲ ಪ್ರದೇಶದಲ್ಲಿ ಅವೈಜ್ಞಾನಿಕ ಅಣೆಕಟ್ಟುಗಳ ನಿರ್ಮಾಣಕ್ಕೆ ತುಂಬಾ ಜನ ವಿರೋಧಿಸಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರವು ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸುತ್ತಿದೆ. ಎಬೊ ಮಿಲಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರು,” ಎಂದು ಕಲಾವಿದ ಹೇಳಿದ್ದಾನೆ.
ಎಬೊ ಮಿಲಿ ಅವರ ಬಂಧನದ ಬಳಿಕ, ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಅಸ್ಸಾಂನ ಲಖೀಂಪುರ್ ಗೆ ತೆರಳಿದ ಪೊಲೀಸರು, ಅಲ್ಲಿನ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಕಲಾವಿದ ನಿಲಿಮ್ ಮಹಾಂತರನ್ನು ಕೂಡಾ ಬಂಧಿಸಿದ್ದಾರೆ.
ಜಾಗತಿಕ ಹವಾಮಾನ ವೈಪರಿತ್ಯದ ವಿರುದ್ದ ನಡೆಯುತ್ತಿರುವ ವಿಶ್ವಮಟ್ಟದ ಅಭಿಯಾನದಲ್ಲಿ ನಿಲಿಮ್ ಪಾಲ್ಗೊಂಡಿದ್ದರು. ಇವರು, ಇಟಾನಗರದ ಡಿಸಿ ಕಚೇರಿ ಆವರಣದಲ್ಲಿ ದೊಡ್ಡದಾದ ಜಾಗೃತಿ ಚಿತ್ರವನ್ನು ಬಿಡಿಸಿದ್ದರು. ಈ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ‘ದ ವೈರ್’ ವರದಿ ಮಾಡಿದೆ.

ಈ ಅಭಿಯಾನವನ್ನು ಬೆಂಬಲಿಸಿದ ಇನ್ನೊಬ್ಬ ಕಲಾವಿದ ಹೇಳುವ ಪ್ರಕಾರ, ಅಣೆಕಟ್ಟು ವಿರೋಧಿ ಚಿತ್ರವನ್ನು ಬಿಡಿಸಿದವರು ಎಬೊ ಮಿಲಿ. ನಿಲಿಮ್ ಮಹಾಂತ ಈ ಅಭಿಯಾನದ ಭಾಗವಾಗಿದ್ದರು ಅಷ್ಟೇ. ಮಹಾಂತ ಅವರು, ರಾಜ್ಯ ಪ್ರಾಣಿಯಾಗಿರುವ ‘ಮಿಥುನ್’ ಚಿತ್ರ ಬಿಡಿಸಿ, ಅದು ಪ್ಲಾಸ್ಟಿಕ್ ತಿನ್ನುತ್ತಿರುವಂತೆ ತೋರಿಸಿದ್ದರು. ಪ್ಲಾಸ್ಟಿಕ್ ಇಂದಿನ ಹೊಸ ಹುಲ್ಲು ಎಂದು ಬರೆದಿದ್ದರು. ಇದಕ್ಕಾಗಿ ಸ್ಥಳೀಯಾಡಳಿತದ ಅನುಮತಿಯನ್ನೂ ಪಡೆಯಲಾಗಿತ್ತು, ಎಂದಿದ್ದಾರೆ.
ಬಂಧನಕ್ಕೂ ಕೆಲ ಗಮಟೆಗಳ ಹಿಂದೆ ಎಬೊ ಮಿಲಿ, ಮಿಥುನ್ ಪ್ಲಾಸ್ಟಿಕ್ ತಿನ್ನುತ್ತಿರುವ ಚಿತ್ರದ ವೀಡಿಯೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಈ ಕುರಿತಾಗಿ ದ ವೈರ್ ಗೆ ಹೇಳಿಕೆ ನೀಡಿರುವ ಸ್ಥಳೀಯ ಪತ್ರಕರ್ತರೊಬ್ಬರು, ಚಿತ್ರ ಬಿಡಿಸಲು ಅನುಮತಿ ನೀಡುವ ವೇಳೆ ಈ ಅಅಭಿಯಾನವು ಗ್ರೆಟಾ ಥನ್ಬರ್ಗ್ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಆಡಳಿತಕ್ಕೆ ತಿಳಿದಿರಲಿಲ್ಲ. ರೈತ ಪ್ರತಿಭಟನೆಯ ‘ಟೂಲ್ ಕಿಟ್’ ವಿವಾದದ ಮೂಲ ಇವರಾಗಿದ್ದರು. ಈ ವಿವಾದದ ವೇಳೆ ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ಬಂಧಿಸಲಾಗಿತ್ತು. ಈ ಮುಜುಗರವನ್ನು ತಪ್ಪಿಸಲು ಸ್ಥಳಿಯಾಡಳಿತವು ಎಲ್ಲಾ ದೋಷವನ್ನು ಕಲಾವಿದರ ಮೇಲೆ ಹೇರುತ್ತಿದೆ ಎಂದಿದ್ದಾರೆ.
ಸದ್ಯಕ್ಕೆ ಎಬೊ ಮಿಲಿ ಹಾಗೂ ಮಹಾಂತ ಅವರನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.





