ಬೆಂಗಳೂರು: ರೈತರ ವಿರೋಧ ಹಾಗೂ ವಿಪಕ್ಷಗಳ ಎಚ್ಚರಿಕೆ ನಡುವೆ ರಾಮನಗರ ಜಿಲ್ಲೆಯ ಬಿಡದಿ ಟೌನ್‌ಶಿಪ್ ಯೋಜನೆಗೆ ರಾಜ್ಯ ಸರ್ಕಾರ ಎರಡನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆ ಪ್ರಕಟಿಸಿದೆ. ಯೋಜನೆಗಾಗಿ ಒಟ್ಟು 2,550 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ.

ವಿರೋಧದ ನಡುವೆಯೇ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಬಿಡದಿ ಹೋಬಳಿಯ ಕೆಜಿ ಗೊಲ್ಲರಪಾಳ್ಯ, ಬನ್ನಿಗಿರಿ ಮತ್ತು ಅರಳಾಳುಸಂದ್ರ ಗ್ರಾಮಗಳ ಜಮೀನುಗಳನ್ನು ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಕೆಜಿ ಗೊಲ್ಲರಪಾಳ್ಯದ 315 ಎಕರೆ, ಬನ್ನಿಗಿರಿಯ 775 ಎಕರೆ 6 ಗುಂಟೆ ಹಾಗೂ ಅರಳಾಳುಸಂದ್ರದ 1,460 ಎಕರೆ 21 ಗುಂಟೆ ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರದ ಅಂತಿಮ ಅಧಿಸೂಚನೆಯೊಂದಿಗೆ ಬಿಡದಿ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಮತ್ತೊಂದು ಹಂತಕ್ಕೆ ಕಾಲಿಟ್ಟಿದೆ. ರೈತರ ವಿರೋಧ ಮತ್ತು ಸರ್ಕಾರದ ಕ್ರಮದಿಂದ ಈ ವಿಚಾರ ಮುಂದಿನ ದಿನಗಳಲ್ಲಿ ಬಹುದೊಡ್ಡ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.







